Advertisement

ದರ ಏರಿಕೆಗೆ ಬ್ರೇಕ್‌; ನಂದಿನಿ ಹಾಲು, ಮೊಸರು ದರ ಹೆಚ್ಚಳ ತೀರ್ಮಾನಕ್ಕೆ ಸಿಎಂ ತಡೆ

09:15 PM Nov 14, 2022 | Team Udayavani |

ಬೆಂಗಳೂರು: ಹಾಲು ದರ ಲೀಟರ್‌ಗೆ ಮೂರು ರೂಪಾಯಿ ಹೆಚ್ಚಳ ಮಾಡುವ ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ತೀರ್ಮಾನವನ್ನು ತಡೆಹಿಡಿದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನ.20ರ ನಂತರ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Advertisement

ಹಾಲು ಮತ್ತು ಮೊಸರು ದರ ಏರಿಕೆ ಘೋಷಣೆ ಹೊರಬಿದ್ದ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಜತೆ ದೂರವಾಣಿ ಮೂಲಕ ಮಾತನಾಡಿ ದರ ಏರಿಕೆ ತೀರ್ಮಾನ ತಡೆಹಿಡಿಯುವಂತೆ ಸೂಚನೆ ನೀಡಿದರು. ಹೀಗಾಗಿ, ದರ ಏರಿಕೆ ಸದ್ಯಕ್ಕೆ ಮುಂದೂಡಿದಂತಾಗಿದೆ.

2020 ಫೆಬ್ರವರಿ ತಿಂಗಳಲ್ಲಿ ಲೀಟರ್‌ಗೆ ಎರಡು ರೂ. ಹೆಚ್ಚಿಸಿದ್ದು ಬಿಟ್ಟರೆ, ಇದುವರೆಗೂ ಹಾಲಿನ ದರವನ್ನು ಹೆಚ್ಚಳ ಮಾಡಿರಲಿಲ್ಲ. ಆದರೆ, ಪ್ರಸ್ತುತ ರೈತರ ಸಂಕಷ್ಟಕ್ಕೆ ಸ್ಪಂದಿಸಲು ದರ ಏರಿಸಿ ರೈತರಿಗೆ ವರ್ಗಾವಣೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ, ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ಸದ್ಯಕ್ಕೆ ಈ ನಿರ್ಧಾರವನ್ನು ಮುಂದೂಡಲಾಗಿದೆ.

ಮುಖ್ಯಮಂತ್ರಿಯವರು ನ.20 ರ ನಂತರ ಸಭೆ ಕರೆಯುವುದಾಗಿ ತಿಳಿಸಿದ್ದಾರೆ. ಮುಂದಿನ ಸಭೆಯಲ್ಲಿ ದರ ಪರಿಷ್ಕರಣೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೆಎಂಎಫ್ ಆಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ಚರ್ಮಗಂಟು ರೋಗ, ಅಕಾಲಿಕ ಮಳೆ ಮತ್ತಿತರ ಕಾರಣಗಳಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ನೆರವು ನೀಡುವ ಉದ್ದೇಶದಿಂದ ಮಂಗಳವಾರದಿಂದಲೇ ಅನ್ವಯವಾಗುವಂತೆ ನಂದಿನಿ ಹಾಲು ಹಾಗೂ ಮೊಸರಿನ ದರ ಹೆಚ್ಚಳ ಮಾಡಿ ಸೋಮವಾರ ಆದೇಶ ಹೊರಡಿಸಲಾಗಿತ್ತು. ಇವುಗಳ ಬೆಲೆಯನ್ನು ಲೀಟರ್‌ಗೆ 3 ರೂ. ಏರಿಕೆ ಮಾಡಿದ್ದ ಕೆಎಂಎಫ್, ಏರಿಕೆಯಾದ ಮೊತ್ತವನ್ನು ಸಂಪೂರ್ಣವಾಗಿ ರೈತರಿಗೆ ವರ್ಗಾಯಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದರು.

Advertisement

ದೇಶದಲ್ಲೇ ಎರಡನೇ ಅತಿದೊಡ್ಡ ಸಹಕಾರ ಹೈನೋದ್ಯಮ ಸಂಸ್ಥೆಯಾದ ಕೆಎಂಎಫ್ ಗ್ರಾಹಕರಿಂದ ಬರುವ ಪ್ರತಿ ರೂಪಾಯಿಯಲ್ಲಿ 79 ಪೈಸೆ ರೈತರಿಗೆ ನೀಡುತ್ತಿದೆ. ಸಂಸ್ಥೆಯಲ್ಲಿ ರಾಜ್ಯಾದ್ಯಂತ 26 ಲಕ್ಷ ರೈತರು ಸದಸ್ಯರಾಗಿದ್ದು, 10 ಲಕ್ಷ ರೈತರು ನಿತ್ಯ ಹಾಲು ನೀಡುತ್ತಿದ್ದಾರೆ ಎಂದೂ ತಿಳಿಸಿದ್ದರು.

ಹೈನುಗಾರರಿಗೆ ಹಲವು ಸೌಲಭ್ಯ:
ಕೆಎಂಎಫ್ ಹೈನುಗಾರರಿಗೆ ಅವಶ್ಯಕ ಹಾಗೂ ಪೂರಕ ಸೌಲಭ್ಯಗಳಾದ ಪಶು ವೈದ್ಯಕೀಯ, ಕೃತಕ ಗರ್ಭಧಾರಣೆ, ಪಶು ಆಹಾರ ಪೂರೈಕೆ, ಮೇವು ಅಭಿವೃದ್ಧಿ ತರಬೇತಿ ಸೌಲಭ್ಯ ಒದಗಿಸುವುದರ ಜತೆಗೆ ಮೇವು ಕತ್ತರಿಸುವ ಯಂತ್ರ, ಹಾಲು ಕರೆಯುವ ಯಂತ್ರ ಹಾಗೂ ರಬ್ಬರ್‌ ಮ್ಯಾಟ್‌ ಮುಂತಾದ ಸೌಲಭ್ಯ ನೀಡುತ್ತಿದೆ. ಕೊರೊನಾ ಸಂಕಷ್ಟದಲ್ಲೂ ರೈತರಿಂದ ನಿರಂತರವಾಗಿ ಹಾಲು ಖರೀದಿಸಲಾಯಿತು. ಜತೆಗೆ ಪಶು ಆಹಾರ ಮಾರಾಟ ಬೆಲೆಯಲ್ಲಿ ಪ್ರತಿ ಟನ್‌ಗೆ 1,500ರಿಂದ 2000 ರೂ. ರಿಯಾಯಿತಿ ನೀಡಿ, ಒಟ್ಟು 150.79 ಕೋಟಿ ರೂ. ರಿಯಾಯಿತಿ ನೀಡಿತು ಎಂದೂ ಜಾರಕಿಹೊಳಿ ಮಾಹಿತಿ ನೀಡಿದ್ದರು.

ಹಾಲು ಪೂರೈಕೆ ಇಳಿಕೆ:
ಚರ್ಮಗಂಟು ರೋಗ, ಹವಾಮಾನ ವೈಪರೀತ್ಯ ಸೇರಿದಂತೆ ವಿವಿಧ ಕಾರಣಗಳಿಂದ 94.20 ಲಕ್ಷ ಲೀಟರ್‌ ಪ್ರಮಾಣದಲ್ಲಿದ್ದ ಹಾಲಿನ ಪೂರೈಕೆ ಈಗ 78.80 ಲಕ್ಷ ಲೀಟರ್‌ಗೆ ಇಳಿದಿದೆ. ಹೀಗಾಗಿ, ದರ ಹೆಚ್ಚಿಸಿ ರೈತರಿಗೆ ನೆರವಾಗಿದ್ದೇವೆ. ಸಾಗಣೆ, ವಿದ್ಯುತ್‌ , ಪ್ಯಾಕಿಂಗ್‌ ವೆಚ್ಚ ಶೇ.20ರಿಂದ 35ರವರೆಗೆ ಹೆಚ್ಚಾಗಿದ್ದರೂ ಕೆಎಂಎಫ್ ಹಾಲಿನ ದರ ಹೆಚ್ಚಿಸಿರಲಿಲ್ಲ ಎಂದು ಅವರು ತಿಳಿಸಿದ್ದರು.

ಆಂಧ್ರ ಪ್ರದೇಶದಲ್ಲಿ ಲೀಟರ್‌ ಹಾಲು 55 ರೂ, ತಮಿಳುನಾಡಿನಲ್ಲಿ 40, ಕೇರಳದಲ್ಲಿ 46, ಮಹಾರಾಷ್ಟ್ರದಲ್ಲಿ 51, ದೆಹಲಿಯಲ್ಲಿ 51 ಹಾಗೂ ಗುಜರಾತ್‌ನಲ್ಲಿ 50 ರೂ. ಇದೆ. ದೊಡ್ಲ,-44, ಜೆರ್ಸಿ-44, ಹೆರಿಟೇಜ್‌-48 , ತಿರುಮಲ -48, ಗೋವರ್ಧನ್‌-46, ಆರೋಗ್ಯ-50 ರೂ. ಇದೆ. ಕರ್ನಾಟಕದಲ್ಲಿ ನಂದಿನಿ 37 ರೂ. ಇದೆ ಎಂದು ವಿವರಿಸಿದ್ದರು.

ಪ್ರಸ್ತಾಪಿತ ದರ ಏರಿಕೆ
ನಂದಿನಿ ಹಾಲು, ಮೊಸರಿನ ಮಾದರಿ ಪ್ರಸ್ತುತ ದರ(ಲೀ/ಕೆ.ಜಿ) ಪರಿಷ್ಕೃತ ದರ
ಟೋನ್‌x ಹಾಲು(ನೀಲಿ ಪ್ಯಾಕೆಟ್‌) 37 ರೂ. 40 ರೂ.
ಹೋಮೋಜಿನೈಸ್ಡ್ ಟೋನ್‌ ಹಾಲು 38 ರೂ. 41 ರೂ.
ಹೋಮೋಜಿನೈಸ್ಡ್ ಹಸುವಿನ ಹಾಲು 42 ರೂ. 45 ರೂ.
ಸ್ಪೆಷಲ್‌ ಹಾಲು (ಆರೆಂಜ್‌) 43 ರೂ. 46 ರೂ.
ಶುಭಂ ಹಾಲು 43 ರೂ. 46 ರೂ.
ಹೋಮೋಜಿನೈಸ್ಡ್ ಸ್ಟಾಂಡಡೈìಸ್ಡ್ ಹಾಲು(ಗ್ರೀನ್‌) 44 ರೂ. 47 ರೂ.
ಸಮೃದ್ಧಿ ಹಾಲು 48 ರೂ. 51 ರೂ.
ಸಂತೃಪ್ತಿ ಹಾಲು 50ರೂ. 53 ರೂ.
ಡಬಲ್‌ ಟೋನ್‌x ಹಾಲು 36 ರೂ. 39 ರೂ.
ಮೊಸರು 45 ರೂ. 48 ರೂ.

Advertisement

Udayavani is now on Telegram. Click here to join our channel and stay updated with the latest news.

Next