ಸುದೀಪನು ಒಂದು ಬಾರಿ ತನ್ನ ಹೊಸ ಪುಸ್ತಕದ ಮೇಲೆ ಬರೆಯತೊಡಗಿದನು. ವಿಪರೀತ ಒತ್ತಿ ಬರೆಯುವಾಗ ಪೆನ್ನಿನ ಸ್ಪರ್ಶ ಪುಸ್ತಕದ ದೇಹಕ್ಕಾಗುತ್ತಲೇ ಆ ಪುಸ್ತಕವು, “”ಅಯ್ಯೋ ಸತ್ತೇ…” ಎಂದು ಕಿರುಚಿಕೊಂಡಿತು. ಆಗ ಗಾಬರಿಯಿಂದ ಸುದೀಪನು ಪೆನ್ನನ್ನು ಬದಿಗಿರಿಸಿ ಆ ಕೂಗನ್ನು ಆಲಿಸಿದನು. ಅದು ತನ್ನ ಹೊಸ ಪುಸ್ತಕದ ಕೂಗೆಂದು ಅವನಿಗೆ ತಿಳಿಯಲು ತಡವಾಗಲಿಲ್ಲ. ಅವನಿಗೆ ಅತ್ಯಾಶ್ಚರ್ಯವೂ ಗಾಬರಿಯೂ ಆಯಿತು. ನೆಟ್ಟನೋಟದಿಂದ ಪುಸ್ತಕವನ್ನೇ ದಿಟ್ಟಿಸತೊಡಗಿದನು. ಆಗ ಆ ಪುಸ್ತಕವು, “”ಎಲೈ ಸುದೀಪನೇ ಯಾಕೆ ನನಗೆ ಈ ರೀತಿ ಹಿಂಸೆ ಮಾಡುತ್ತಿರುವಿ? ನಾನು ನಿನಗೆ ಮಾಡಿದ ಅನ್ಯಾಯವಾದರೂ ಏನು?” ಎಂದು ಕೇಳಿತು. ಪುಸ್ತಕದ ಮಾತು ಕೇಳಿ ತಬ್ಬಿಬ್ಟಾದ ಸುದೀಪನು ಬಿಟ್ಟ ಕಂಗಳಿಂದ ಅದನ್ನೇ ನೋಡುತ್ತಾ ನಿಂತನು. ಆಗ ಪುಸ್ತಕವು ತನ್ನ ಕಥೆಯನ್ನು ಹೇಳಲಾರಂಭಿಸಿತು.
“”ಪ್ರೀತಿಯ ಸುದೀಪನೇ ಕೇಳು, ದೇವಣ್ಣನೊಬ್ಬ ಅನುಭವಿ ಕೃಷಿಕ. ಆತನಿಗೆ ಎರಡು ಎಕ್ರೆಗಳಷ್ಟು ಭೂಮಿ ಅವನ ಅಜ್ಜನ ಕಾಲದಿಂದಲೂ ಬಂದಿತ್ತು. ಒಳ್ಳೆಯ ಜಮೀನಾಗಿರಲಿಲ್ಲ ಅದು. ಬರೇ ಕಲ್ಲು , ಮಣ್ಣು , ಬಂಡೆ, ಕಂಟಿ, ಮುತ್ತಾದಗಳಿಂದ ತುಂಬಿತ್ತು. ದೇವಣ್ಣನು ಒಂದು ಎಕ್ರೆಯಲ್ಲಿ ಬಿದಿರನ್ನು ಬೆಳೆದನು. ಕೆಲವೇ ದಿನಗಳಲ್ಲಿ ಬಿದಿರು ದೊಡ್ಡದಾಗಿ ಬೆಳೆಯಿತು. ನಾನು ಆ ಬಿದಿರುಗಳಲ್ಲಿ ಒಬ್ಬನಾಗಿದ್ದೆ. ದೇವಣ್ಣ ನಮ್ಮೆಲ್ಲರಿಗೂ ಉತ್ತಮವಾಗಿ ನೀರುಣಿಸಿ ಪ್ರೀತಿಯಿಂದ ಪೋಷಿಸಿದ. ಒಂದು ದಿನ ದೇವಣ್ಣ ಬಂದು ನನ್ನ ಒಂದು ತುದಿಯನ್ನು ಕಡಿದನು. ಆದರೂ ನಾ ಸಹಿಸಿಕೊಂಡು ಸೊಕ್ಕಿನಿಂದ ಹುಲುಸಾಗಿ ಇನ್ನೂ ಎತ್ತರವಾಗಿ ಬೆಳೆದೆನು. ಇದನ್ನು ಕಂಡ ರೇವಣ್ಣನಿಗೆ ಆನಂದವೋ ಆನಂದ. ಬಲು ಜಾಗ್ರತೆಯಿಂದ ನನ್ನನ್ನು ಕಡಿದು ಮಾರಾಟ ಮಾಡಿದನು. ದೇವಣ್ಣನ ಸ್ವಾರ್ಥ ನನಗೆ ಅರ್ಥವಾಯಿತು. ಆಗ ನನಗಾದ ಬೇಸರ ಅಷ್ಟಿಷ್ಟಲ್ಲ. ಸೀದಾ ನನ್ನನ್ನು ಕೊಂಡುಹೋಗಿ ಒಂದು ಪುಸ್ತಕ ಕಾರ್ಖಾನೆಯ ಮಾಲಿಕನಿಗೆ ಮಾರಿದನು. ನನಗಿಂತ ಮೊದಲೇ ನನ್ನ ಬಳಗದವರು ಅಲ್ಲಿ ಇದ್ದರು. ಅವರೆಲ್ಲರೂ ನನ್ನನ್ನು ಕಣ್ಣು ಪಿಳಿಪಿಳಿ ಮಾಡಿ ಸ್ವಾಗತಿಸಿದರು. ಎಲ್ಲರೂ ಯಾಕೋ ತುಂಬಾ ಹೆದರಿದ ಹಾಗಿದ್ದರು. ಮಾಲಿಕನು ಎಲ್ಲರನ್ನೂ ಒಟ್ಟಿಗೆ ಯಂತ್ರದಲ್ಲಿ ಹಾಕಿ ತಿರುಗಿಸಿ ಬಹಳ ಹಿಂಸೆ ಕೊಟ್ಟನು. ಎಲ್ಲರೊಂದಿಗೆ ನಾನೂ ಆ ಹಿಂಸೆಯನ್ನು ಹೇಗೋ ಸಹಿಸಿಕೊಂಡೆನು. ಅಲ್ಲಿಂದ ನನಗೆ ಒಂದು ಸ್ವತಂತ್ರವಾದ ಅಸ್ತಿತ್ವ ಇಲ್ಲವಾಯಿತು. ಮಾಲಿಕನು ನಮ್ಮನ್ನೆಲ್ಲ ವಿವಿಧ ಯಂತ್ರಗಳಲ್ಲಿ ಶುದ್ಧೀಕರಿಸಿ, ಹಾಯಿಸಿ ಹಿಂಡಿ ನಾಜೂಕಾದ ಯಂತ್ರಗಳ ಮೂಲಕ ಚಪ್ಪಟೆಯಾದ ಕಾಗದವನ್ನಾಗಿ ಪರಿವರ್ತಿಸಿದನು.
ನಮ್ಮ ಮೈಮೇಲೆ ವಿವಿಧ ಗೆರೆಗಳನ್ನು ಎಳೆಯುವ ಕೆಲಸವನ್ನೂ ಯಂತ್ರಗಳೇ ಮಾಡಿದವು. ಗೆರೆ ಹಾಕಿದಾಗ ನಾನು ಬಹಳ ಚೆಂದವಾಗಿ ಕಂಗೊಳಿಸಿದೆನು. ನನ್ನನ್ನೂ ನನ್ನ ಸ್ನೇಹಿತರನ್ನೂ ದೊಡ್ಡ ಯಂತ್ರದಲ್ಲಿ ಒಂದರ ಮೇಲೆ ಮತ್ತೂಂದು ಎಂಬಂತೆ ಜೋಡಿಸಿ ಒಟ್ಟಿಗೆ ಮಾಡಿದಾಗ ನನಗೆ ಹೊಸರೂಪ ಬಂದಿತು. ನಾನು ಪುಸ್ತಕ ರೂಪ ಪಡೆದೆನು. ಮಾಲಿಕ ನಮ್ಮನ್ನು ಪುಸ್ತಕ ಅಂಗಡಿಗೆ ಮಾರಿದರು. ಪುಸ್ತಕದ ಅಂಗಡಿಯಲ್ಲಿ ನಾನು ಒಳ್ಳೆಯ ಸುಂದರವಾದ ಗೋದ್ರೇಜ್‌ನಲ್ಲಿ ಕುಳಿತಿದ್ದೆನು. ಹಿಂದೆ ನಾನು ಪಟ್ಟ ಕಷ್ಟಗಳೆಲ್ಲ ಒಂದೊಂದಾಗಿ ಮರೆಯುತ್ತಿತ್ತು. ಅದೇ ಸಂದರ್ಭದಲ್ಲಿ ನೀನೂ ಅಲ್ಲಿಗೆ ಬಂದು ಒಂದು ಗೆರೆಯ ಪುಸ್ತಕ ಎಂದು ಕೇಳಿದೆ. ಈಗ ನನ್ನನ್ನು ಕೊಂಡುಕೊಂಡ ಅಂದಿನಿಂದ ನೀನು ನನ್ನ ಮೇಲೆ ಬರೆಯುತ್ತೀಯಾ. ನಾನು ಹರಿದಾಗ ನನ್ನ ಮೇಲೆ ಗಮ್ ಹಾಕಿ ಸರಿಮಾಡ್ತೀಯಾ. ಆಗ ನಾನೆಷ್ಟು ಸಂತೋಷ ಪಡುತ್ತೇನೆ ಗೊತ್ತೆ? ಆದರೆ, ಈಗ ನನ್ನ ಮೇಲೆ ಪೆನ್ನಿನಿಂದ ಗೀಚಾಡುತ್ತ ಇದ್ದರೆ ನನಗೆ ಚಿತ್ರಹಿಂಸೆಯಾಗುತ್ತದೆ. ಆದುದರಿಂದ ದಮ್ಮಯ್ಯ ನನ್ನನ್ನು ಹಿಂಸಿಸಬೇಡ. ನನ್ನ ಪಾಡಿಗೆ ನಿನ್ನ ಸೇವೆ ಮಾಡಿಕೊಂಡು ಇರಲು ಅವಕಾಶ ಮಾಡಿಕೊಟ್ಟರೆ ಅಷ್ಟೇ ಸಾಕು” ಎಂದು ಹೇಳಿ ಪುಸ್ತಕವು ಮೌನವ್ರತಕ್ಕೆ ಜಾರಿಕೊಂಡಿತು.
– ಮಂಜುನಾಥ
10ನೆಯ ತರಗತಿ, ಸರಕಾರಿ ಪದವಿಪೂರ್ವ ಕಾಲೇಜು,
ಕೊಂಬೆಟ್ಟು, ಪುತ್ತೂರು