ಬೆಂಗಳೂರು: ಗಾಂಧಿ ಜಯಂತಿ ಅಂಗವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ತಿ ಇಲಾಖೆಯು ಪುಸ್ತಕ ಓದು ಉತ್ತೇಜಿಸಲು “ಅಮ್ಮನಿಗಾಗಿ ಒಂದು ಪುಸ್ತಕ’ ಅಭಿಯಾನ ರೂಪಿಸಿದೆ. 6 ವರ್ಷದ ಒಳಗಿನ ಮಗು ತನ್ನ ವ್ಯಾಪ್ತಿಯ ಗ್ರಂಥಾಲಯದಿಂದ ಒಂದು ಪುಸ್ತಕ ಪಡೆದುಕೊಂಡು ಮನೆಯಲ್ಲಿ ತಾಯಿಗೆ ಕೊಟ್ಟು, ಓದಿಸಿ ತಾಯಿ ಅದನ್ನು ಮಗುವಿಗೆ ಮನನ ಮಾಡುವುದು ಈ ಅಭಿಯಾನದ ಮುಖ್ಯ ಉದ್ದೇಶ.
ಗಾಂಧಿ ಜಯಂತಿ ಅಂಗವಾಗಿ ಅ.2ರಿಂದ 12ರ ವರೆಗೆ 10 ದಿನಗಳ ಕಾಲ ಅಮ್ಮನಿಗಾಗಿ ಒಂದು ಪುಸ್ತಕ ಚಟುವಟಿಕೆಯನ್ನು ಪ್ರತಿ ಗ್ರಾಮ ಪಂಚಾಯ್ತಿಯ ಗ್ರಂಥಾಲಯಗಳಲ್ಲಿ ನಡೆಸಲಾಗುವುದು. ಇದಾದ ಬಳಿಕ ನ.14ರಂದು ಮಕ್ಕಳ ದಿನಾಚರಣೆ ಅಂಗವಾಗಿ 10 ದಿನಗಳ ಕಾಲ “ಪತ್ರ ಬರೆಯುವ ಅಭಿಯಾನ’, ಕೂಡ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ತಿ ರಾಜ್ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರತಿ ಗ್ರಾಮ ಪಂಚಾಯ್ತಿಗಳಲ್ಲಿ ಮಕ್ಕಳು ನಿಯ ಮಿತವಾಗಿ ಬರೆಯುವ ಅಭ್ಯಾಸವನ್ನು ಮಾಡಲು ಅವಕಾಶ ಕಲ್ಪಿಸುವುದು ಮತ್ತು ಪ್ರೋತ್ಸಾಹಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕಾರ್ಯಕ್ರಮ ರೂಪಿಸಲಾಗುತ್ತದೆ. ಈಗಾಗಲೇ ಓದು ಬೆಳಕು ಕಾರ್ಯಕ್ರಮದಡಿ ಸರ್ಕಾರಿ ಶಾಲಾ ಮಕ್ಕಳನ್ನು ವಿಶೇಷವಾಗಿ ಗ್ರಾಮೀಣ ಮಕ್ಕಳನ್ನು ವ್ಯವಸ್ಥಿತವಾಗಿ ಕಲಿಕಾ ಕ್ಷೇತ್ರಕ್ಕೆ ಮರಳಿ ತರುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದ್ದಾರೆ.
ಚಟುವಟಿಕೆಯ ಉದ್ದೇಶ: ಮಕ್ಕಳು ವಾರದಲ್ಲಿ ಒಂದು ದಿನ ಓದಿದ್ದನ್ನು ಸೃಜನಶೀಲತೆಯಿಂದ ಬರೆದು ಅಮ್ಮನಿಗೆ ಒಪ್ಪಿಸುವುದು, ನಂತರ ಗ್ರಂಥಾಲಯಕ್ಕೆ ನೀಡುವುದು. ಜತೆಗೆ ಮಕ್ಕಳು ಗ್ರಂಥಾಲಯಕ್ಕೆ ಬಂದು ಅಮ್ಮನಿಗಾಗಿ ಪುಸ್ತಕವನ್ನು ಆಯ್ದು ಅದನ್ನು ಮನೆಗೆ ತೆಗೆದುಕೊಂಡು ಹೋಗಿ, ತಾಯಿಗೆ ಆ ಪುಸ್ತಕವನ್ನು ಕೊಟ್ಟು ಓದಿಸಿ ಓದಿ ಮಕ್ಕಳಿಗೆ ವಿಷಯವನ್ನು ಹೇಳುವುದು ಈ ಅಭಿಯಾನದ ಪ್ರಕ್ರಿಯೆಯಾಗಿದೆ.
ತಾಯಂದಿರಲ್ಲಿ ಅಕ್ಷರದ ಬಗ್ಗೆ ಆಸಕ್ತಿ: ಅಮ್ಮನಿಗಾಗಿ ಒಂದು ಪುಸ್ತಕ ಅಭಿಯಾನ ಮಕ್ಕಳ ಓದಿಗೆ ಪೂರಕವಾಗಿದೆ. ಜತೆಗೆ ತಾಯಿ ಮತ್ತು ಮಕ್ಕಳ ನಡುವೆ ಯಾವುದೇ ವಿಚಾರಗಳನ್ನು ಮುಕ್ತವಾಗಿ ಚರ್ಚಿ ಸುವುದಕ್ಕೆ ಬೇಕಾದ ತಾಯಿ ಮತ್ತು ಮಕ್ಕಳ ನಡುವಿನ ಒಡನಾಟ ಹಾಗೂ ಬಾಂಧವ್ಯವನ್ನು ಹೆಚ್ಚುತ್ತದೆ ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಕ್ಕಳ ಮೂಲಕ ಓದು ಬರದಿರುವ ತಾಯಿಂದರು ಅಕ್ಷರತೆಯ ಬಗ್ಗೆ ಆಸಕ್ತಿ ಹೊಂದಿ ಅವರ ಸಬಲೀಕರಣವಾಗಲು ಸಾಧ್ಯವಾಗುತ್ತದೆ. ಮಕ್ಕಳ ಕಲಿಕೆಯ ಅಭಿವೃದ್ದಿಗೆ ಪೂರಕವಾಗಿರುವ ಈ ಅಭಿಯಾನ ಶೀಘ್ರದಲ್ಲೆ ಎಲ್ಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಆರಂಭವಾಗಲಿದೆ.
ಇದಾದ ನಂತರ ಪತ್ರ ಬರೆಯುವ ಅಭಿಯಾನದ ಮೂಲಕ ಮಕ್ಕಳಿಗೆ ಓದುವುದರ ಜತೆಗೆ ಬರೆಯುವ ಅಭ್ಯಾಸವನ್ನು ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ. ಈಗಾಗಲೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ತಿ ರಾಜ್ ಇಲಾಖೆ “ಓದುವ ಬೆಳಕು’, ಕಾರ್ಯಕ್ರಮದ ಅಡಿಯಲ್ಲಿ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ “ಗ್ರಾಮ ಚದುರಂಗ ಆಟ ಆಡೋಣ ಅಭಿಯಾನ’ ಮತ್ತು “ಗಟ್ಟಿ ಓದು ಅಭಿಯಾನ’ ಆಯೋಜಿಸಿ ಯಶಸ್ವಿ ಬಳಿಕ ಇದೀಗ ಗ್ರಂಥಾಲಯದ ಮೂಲಕ ಮಕ್ಕಳನ್ನು ನಿರಂತ ಚಟುವಟಿಕೆಯಲ್ಲಿಡುವ ಸದುದ್ದೇಶದಿಂದ ಅಮ್ಮನಿಗಾಗಿ ಒಂದು ಪುಸ್ತಕ ಅಭಿಯಾನಕ್ಕೆ ಮುಂದಾಗಿದೆ.
ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈ ಅಭಿಯಾನ ಉತ್ತಮ ಯೋಜನೆಯಾಗಿದೆ. ಜತೆಗೆ ಅಕ್ಷರ ಬಾರದ ತಾಯಂದಿರಲ್ಲೂ ಈ ಅಭಿಯಾನ ಅಕ್ಷರದ ಜ್ಞಾನ ನೀಡಲಿದೆ. ಹಾಗೆಯೇ ಬಾಲ್ಯದಲ್ಲೆ ಮಕ್ಕಳಿಗೆ ಓದಿನ ಆಸಕ್ತಿ ಮೂಡಿಸಲಿದೆ.
– ಡಾ.ಸತೀಶ್ ಕುಮಾರ್ ಎಸ್. ಹೊಸಮನಿ, ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕರು
– ದೇವೇಶ್ ಸೂರಗುಪ್ಪ