Advertisement

ಗ್ರಾಮೀಣ ಆರ್ಥಿಕತೆಗೆ ಹೊಡೆತ

07:41 PM Sep 05, 2021 | Team Udayavani |

ಕೋವಿಡ್ ಲಾಕ್‌ಡೌನ್‌ ಬಳಿಕ ಬಹುತೇಕ ವಾಣಿಜ್ಯ ಚಟುವಟಿಕೆಗಳು ಹಳಿ ತಪ್ಪಿವೆ. ಕಾಯಿಲೆ ವಕ್ಕರಿಸಿದಾಗ ಅದರ ನಿರ್ವಹಣೆ ಕುರಿತು ಸರಿಯಾಗಿ ಮಾಹಿತಿ ಇಲ್ಲದೆ ಲಾಕ್‌ಡೌನ್‌ ಅನಿವಾರ್ಯವಾಗಿತ್ತು. ಆದರೆ ಈಗ ಪರಿಸ್ಥಿತಿ ಸುಧಾರಿಸಿದ ಬಳಿಕವೂ ವೀಕೆಂಡ್‌ ಕರ್ಫ್ಯೂ ಹೇರಿರುವುದರಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದ ಗ್ರಾಮೀಣ ಆರ್ಥಿಕತೆಗೆ ಮೇಲಕ್ಕೆ ಏಳಲಾಗದ ರೀತಿಯ ಹೊಡೆತ ಬೀಳುತ್ತಿದೆ.

Advertisement

ಉಡುಪಿ ಜಿಲ್ಲೆಯಲ್ಲಿ ಕಡಿಮೆ ಪ್ರಮಾಣದ ಹರಡುವಿಕೆ ಇದ್ದರೂ ಸರಕಾರ ಹೆಚ್ಚುವರಿಯಾಗಿ ವಾರಾಂತ್ಯ ಕರ್ಫ್ಯೂ ಹೇರಿದೆ. ಈ ಮೂಲಕ ಹಳಿಗೆ ಬರುತ್ತಿದ್ದ ವಾಣಿಜ್ಯ ಚಟುವಟಿಕೆಗಳು ಮತ್ತೆ ಹಳಿ ತಪ್ಪಲಾರಂಭಿಸಿವೆ.

ಕುಂದಾಪುರದ ಶನಿವಾರದ ಸಂತೆಗೆ ಬೇರೆ ಬೇರೆ ಊರುಗಳಿಂದ ತರಕಾರಿ, ಹಣ್ಣು ಹಂಪಲು ತಂದವರು ಮಾರಾಟ ಮಾಡಲಾಗದೇ ತಲೆ ಮೇಲೆ ಕೈ  ಹೊತ್ತು ಹೋಗುವಂತಹ ಸ್ಥಿತಿ ಬಂದಿದೆ. ಸಂಬಂಧಪಟ್ಟ ಆಡಳಿತ ಪೂರ್ವ ಸೂಚನೆ ನೀಡದ ಫ‌ಲ ಇದು. ಅಷ್ಟಾಗಿಯೂ ಕಡಿಮೆ ಸಂಖ್ಯೆಯಲ್ಲಿ

ಬಂದ ವ್ಯಾಪಾರಿಗಳ ಜತೆ ಕೆಲವು ಪೊಲೀಸರು ನಿಷ್ಕರುಣೆಯಿಂದ ವರ್ತಿಸಿದ್ದು ವ್ಯಾಪಾರಿ ವರ್ಗದಿಂದ ಆಕ್ಷೇಪಣೆಗೆ ಕಾರಣವಾಗಿದೆ. ಶನಿವಾರ, ರವಿವಾರ

ಮಾತ್ರ ವ್ಯಾಪಾರ ಮಾಡುವಂತಿಲ್ಲ; ಸೋಮವಾರದಿಂದ ಶುಕ್ರವಾರವರೆಗೆ ಯಾವುದೇ ಅಡೆತಡೆ ಇಲ್ಲ ಎನ್ನುವುದೇ ಹಾಸ್ಯಾಸ್ಪದವಾಗಿದೆ.

Advertisement

ಕುಂದಾಪುರ ಸಂತೆಗೆ ನೂರಾರು ವರ್ಷಗಳ ಇತಿಹಾಸವಿದೆ. ಗ್ರಾಮೀಣ ಪ್ರದೇಶದಿಂದ ವಿವಿಧ ವಸ್ತುಗಳ ಖರೀದಿಗಾಗಿ ನಗರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಜನ ಬರುವ ದಿನ ಎಂದರೆ ಸಂತೆಯ ದಿನ. ಗ್ರಾಮಾಂತರದಿಂದ ಬರುವ ಮಂದಿ ಸಂತೆ ವ್ಯವಹಾರ ಮುಗಿಸಿ ನಗರದಲ್ಲಿ ಸುತ್ತಾಡಿ ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಿ ಹೋಗುತ್ತಾರೆ. ಇದು ಹಿಂದಿನಿಂದಲೂ ಬಂದ ಪರಿಪಾಠ. ಆದರೆ ವಾರಾಂತ್ಯ ಕರ್ಫ್ಯೂ ಹೇರಿಕೆಯಿಂದ ಇದೆಲ್ಲ ಅಯೋಮಯವಾಗಿದೆ. ಜನರು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಲು ಪೇಟೆಗೆ ಬರುವಂತಿಲ್ಲ. ವರ್ತಕರು ತಾವು ತಂದಿರುವ ಸಾಮಗ್ರಿಗಳನ್ನು ಮಾರುವಂತಿಲ್ಲ. ಒಟ್ಟಾರೆಯಾಗಿ ಜನರಿಗೂ, ವ್ಯಾಪಾರಿಗಳಿಗೂ ಇದರಿಂದ ಸಮಸ್ಯೆಯಾಗಿದೆ. ಮಾತ್ರವಲ್ಲದೆ ಮತ್ತೆ ಹಳಿ ಏರುತ್ತಿದ್ದ ಗ್ರಾಮೀಣ ಆರ್ಥಿಕತೆಗೂ ಹೊಡೆತ ನೀಡಿದೆ.

ಸೆಲೂನ್‌ಗಳಿಗೆ ಕೂಡ ಈ ವಾರಾಂತ್ಯ  ಹೊಸ ಸಂಕಟ ಉಂಟು ಮಾಡಿದೆ. ಮಂಗಳವಾರ ವಾರದ ರಜೆ, ಶನಿವಾರ, ರವಿವಾರ ಕರ್ಫ್ಯೂ. ವಾರದಲ್ಲಿ ನಾಲ್ಕೇ ದಿನ ಕಾರ್ಯನಿರ್ವಹಿಸುವಂತಾಗಿದೆ. ಬೇರೆಡೆಯಿಂದ ಬಂದು ಉದ್ಯೋಗದಲ್ಲಿರುವವರಿಗೆ ವೇತನ ಕೊಡುವುದು ಹೇಗೆಂಬ ಚಿಂತೆ ಉಂಟಾಗಿದೆ. ಬಸ್‌ಗಳಲ್ಲೂ ರಜಾದಿನ ಹೆಚ್ಚಿನ ಜನರ ಓಡಾಟ ಇಲ್ಲದ ಕಾರಣ ಆದಾಯಕ್ಕೆ ಖೋತಾ ಆಗಿ ಕೆಲವು ಬಸ್‌ಗಳು ವಾರಾಂತ್ಯ ಕರ್ಫ್ಯೂ ಸಂದರ್ಭ ಓಡಾಟವನ್ನೇ ಸ್ಥಗಿತಗೊಳಿಸಿವೆ. ಶಾಲೆ, ಕಾಲೇಜು ಆರಂಭಿಸಿ, ಮದುವೆಗೆ 400 ಜನ

ಸೇರಬಹುದೆನ್ನುವ ಸರಕಾರ ಏಕಾಏಕಿ ವಾರಾಂತ್ಯ ಕರ್ಫ್ಯೂ ಹೇರಿ ಜನಜೀವನದ  ಜತೆ ಆಟವಾಡುತ್ತಿರುವುದು ಸರಿಯಲ್ಲ. ಸರಕಾರವು ಆಯಾ ಪ್ರದೇಶದ ಪರಿಸ್ಥಿತಿಯನ್ನು ಅರಿತುಕೊಂಡು ಸೂಕ್ತ ರೀತಿಯ ಕಟ್ಟುನಿಟ್ಟಿನ ಕ್ರಮದ  ಮೂಲಕ ಕೊರೊನಾ ಹರಡುವಿಕೆ ನಿಯಂತ್ರಿಸಲಿ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿದೆ.

–   ಸಂ.

Advertisement

Udayavani is now on Telegram. Click here to join our channel and stay updated with the latest news.

Next