ಇದು ಪಕ್ಕಾ ಲವ್‌ಸ್ಟೋರಿ ಸಿನಿಮಾವಂತೆ. ಆದರೆ ವಿಭಿನ್ನ ಕತೆ ಹೊಂದಿರುವ ಸಿನಿಮಾ. ಭಿಕ್ಷುಕಿ ಹುಡುಗಿ ಹಾಗೂ ಗುಜರಿ ಹೆಕ್ಕುವ ಹುಡುಗನ ಲವ್‌ಸ್ಟೋರಿಯನ್ನು ಈ ಸಿನಿಮಾದಲ್ಲಿ ತೋರಿಸಿದ್ದಾರಂತೆ.
ಚಿತ್ರಗಳು ವಿಭಿನ್ನವಾಗಿದ್ದರೆ ಸಿನಿಮಾಕ್ಕೆ ಅದು ಆಕರ್ಷಣೆ ಎಂಬ ಮಾತಿದೆ. ಆದರೆ, ಈಗ ಆ ಆಕರ್ಷಣೆಯ ಅರ್ಥವನ್ನು
ಚಿತ್ರರಂಗಕ್ಕೆ ಬರುವ ಹೊಸಬರು ತಪ್ಪಾಗಿ ತಿಳಿಯುತ್ತಿದ್ದಾರೆ. ಚಿತ್ರ-ವಿಚಿತ್ರ ಟೈಟಲ್‌ಗಳನ್ನಿಟ್ಟು ಅದೇ ಡಿಫರೆಂಟ್ ಎಂಬಂತೆ
ಫೋಸ್ ಕೊಡುತ್ತಾರೆ. ಈಗ ಹೊಸಬರ ತಂಡವೊಂದು “ತಿಕ್ಲ’ ಎಂಬ ಸಿನಿಮಾ ಮಾಡಿದೆ.
“ಕಂಬನಿಯ ಕಥೆ’ ಎಂಬ ಅಡಿಬರಹದೊಂದಿಗೆ ತಯಾರಾಗುತ್ತಿರುವ ಈ ಸಿನಿಮಾ ಸಂಪೂರ್ಣ ಹೊಸಬರದು. ಅನುಭವಕ್ಕಿಂತ ಸಿನಿಮಾ ಮಾಡಬೇಕೆಂಬ ಕನಸು ಮುಖ್ಯ ಎಂದುಕೊಂಡು “ತಿಕ್ಲ’ ಸಿನಿಮಾ ಮಾಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಆಡಿಯೋ ಬಿಡುಗಡೆ ನಡೆದಿದೆ. ಜಕ್ಕನಹಳ್ಳಿ ಶಿವ ಎನ್ನುವವರು ಈ ಸಿನಿಮಾದ ನಿರ್ಮಾಪಕರು. ಲ್ಯಾಬ್ ಟೆಕ್ನಿಷಿಯನ್ ಆಗಿರುವ ಆಂಜನೇಯ ಅವರು ಈ ಸಿನಿಮಾದ ನಿರ್ದೇಶಕರು.
ಆಂಜನೇಯ ಹೇಳುವಂತೆ ಇದು ಪಕ್ಕಾ ಲವ್ ಸ್ಟೋರಿ ಸಿನಿಮಾವಂತೆ. ಆದರೆ ವಿಭಿನ್ನ ಕತೆ ಹೊಂದಿರುವ ಸಿನಿಮಾ. ಭಿಕ್ಷುಕಿ ಹುಡುಗಿ ಹಾಗೂ ಗುಜರಿ ಹೆಕ್ಕುವ ಹುಡುಗನ ಲವ್‌ಸ್ಟೋರಿಯನ್ನು ಈ ಸಿನಿಮಾದಲ್ಲಿ ತೋರಿಸಿದ್ದಾರಂತೆ. ನಿರ್ದೇಶಕರಿಗೆ ಸಿನಿಮಾದ ಯಾವುದೇ ಅನುಭವವಿಲ್ಲವಂತೆ. ಆದರೆ, ಸಿನಿಮಾ ಮೇಲಿನ ಪ್ರೀತಿಯಿಂದ ಮಾಡಿದ್ದು, ಪ್ರೇಮಕಥೆಯಲ್ಲಿ ಸಾಕಷ್ಟು ಥ್ರಿಲ್ಲರ್ ಅಂಶಗಳು ಕೂಡಾ ಇವೆಯಂತೆ. ಹುಚ್ಚನ ಎಂಟ್ರಿಯೊಂದಿಗೆ ಆರಂಭವಾಗುವ ಸಿನಿಮಾದಲ್ಲಿ ಪ್ರತಿ ಅರ್ಧಗಂಟೆಗೊಮ್ಮೆ ಟ್ವಿಸ್ಟ್ ಸಿಗಲಿದೆಯಂತೆ. ನಾಯಕ ವಿಜಯ್ ವೆಂಕಟ್ ಇಲ್ಲಿ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದು, ಹುಚ್ಚನಾಗಿ ನಟಿಸೋದು ತುಂಬಾ ಕಷ್ಟದ ಕೆಲಸವಂತೆ. ಮೂರು ಶೇಡ್‌ಗಳು ವಿಭಿನ್ನವಾಗಿದೆಯಂತೆ. ನಾಯಕಿ ರಾಧಿಕಾ ರಾಮ್ ಇಲ್ಲಿ ಭಿಕ್ಷುಕಿಯಾಗಿ ನಟಿಸಿದ್ದಾರೆ. ಅವರಿಗೂ ಭಿಕ್ಷುಕಿ ಪಾತ್ರ
ಮಾಡೋದು ಬಹಳ ಕಷ್ಟ ಎನಿಸಿತಂತೆ. ಚಿತ್ರಕ್ಕೆ ಕೆವಿನ್ ಎಮ್ ಸಂಗೀತ ನೀಡಿದ್ದಾರೆ. ಕಥೆ ಇಷ್ಟವಾದ ಕಾರಣ ನಿರ್ಮಾಪಕರು
80 ಲಕ್ಷ ರೂಪಾಯಿ ಹಾಕಿ ಈ ಸಿನಿಮಾ ನಿರ್ಮಿಸಿದರಂತೆ. ಚಿತ್ರದ ಆಡಿಯೋ ಬಿಡುಗಡೆ ಮಾಡಿದ ಪ್ರಥಮ್, “ಈ ಚಿತ್ರ ಎಲ್ಲರಿಗು ತಿಕ್ಲಿ ಹಿಡಿಸಲಿ’ ಎಂದು ಶುಭಕೋರಿದರು. ಲಹರಿ ಸಂಸ್ಥೆ ಮೂಲಕ ಆಡಿಯೋ ಹೊರಬಂದಿದೆ.