Advertisement

ಅಂದದ ಮೂಗುತಿ

11:47 PM Jan 09, 2020 | Sriram |

ಹೆಣ್ಮಕ್ಕಳ ಸೌಂದರ್ಯ ಹೆಚ್ಚಿಸುವುದರಲ್ಲಿ ಮೂಗುತಿಯ ಪಾತ್ರವೂ ಬಹಳ ದೊಡ್ಡದು. ಐವತ್ತು ವರ್ಷಗಳ ಹಿಂದೆ ಇದ್ದ ಮೂಗುತಿಯ ಚೆಂದವೇ ಬೇರೆ, ಈಗ ಆಗಾಗ್ಗೆ ಟ್ರೆಂಡ್‌ ಆಗುವ ಹೊಸ ನಮೂನೆಯ ಮೂಗುತಿಗಳ ಸೊಗಸೇ ಬೇರೆ. ಅದನ್ನೇ ಇಲ್ಲಿ ವಿವರಿಸಿದ್ದಾರೆ.

Advertisement

ಕೆಲ ವರ್ಷಗಳ ಹಿಂದೆ (ಹತ್ತು-ಹದಿನೈದು ವರ್ಷಗಳ ಹಿಂದೆ, ಅದಕ್ಕಿಂತ ಮೊದಲು ಅದು ಕಡ್ಡಾಯವಾಗಿದ್ದ ಕಾಲವೂ ಇತ್ತು) ಹಣೆಗೆ ಬೊಟ್ಟಿಡುವುದು, ಮೂಗು ಚುಚ್ಚಿಸಿಕೊಳ್ಳುವುದೆಂದರೆ ಕಣ್ಮಣಿಗಳು ಮೂಗು ಮುರಿಯುತ್ತಿದರು. ಆದರೆ ಈಗ ಸಂಪೂರ್ಣ ಬದಲು. ಬಣ್ಣ ಬಣ್ಣದ ಬಿಂದಿ ಇಡುವುದು, ಮೂಗು ಚುಚ್ಚಿಸಿಕೊಳ್ಳುವುದು ಈಗಿನ ಫ್ಯಾಷನ್‌. ಮನಸ್ಸಿಗೊಪ್ಪುವ, ಬಟ್ಟೆಗೆ ಸೂಟ್‌ ಆಗುವ, ಸಮಾರಂಭಕ್ಕೆ ತಕ್ಕಂತೆ ಹೊಂದಿಸುವ ವೈವಿಧ್ಯ ವಿನ್ಯಾಸಗಳ ಮೂಗುತಿಗಳಿಗೆ ಹುಡುಗಿಯರು ಮನಸೋಲುತ್ತಿದ್ದಾರೆ. ಮೂಗುತಿ ಧರಿಸುವುದು ಕೇವಲ ಸಂಪ್ರ ದಾಯ ಅನ್ನೋ ಕಲ್ಪನೆ ಈಗ ಬದಲಾಗಿದ್ದು, ಚೆಂದದ ಮೂಗಿಗೆ ಆಕರ್ಷಕ ಮೂಗುತಿ ಧರಿಸುವುದೇ ಸದ್ಯದ ಟ್ರೆಂಡ್‌.

ಮೂಗು ಚುಚ್ಚಬೇಕಿಲ್ಲ
ಬಹಳ ಆಸಕ್ತಿಯ ವಿಷಯವೆಂದರೆ ಇದು. ಹಿಂದೆ ಅಕ್ಕಸಾಲಿಗನ ಬಳಿ ಮೂಗು ಚುಚ್ಚಿಸಿಕೊಂಡು, ಹೊಸ ಮೂಗುತಿ ಹಾಕಿ ಕೊಂಡು ಮೂರ್‍ನಾಲ್ಕು ದಿನ ನೋವಿನಿಂದ ಬಳಲುತ್ತಿದ್ದ ಕಾಲವಿತ್ತು. ಬಳಿಕ ಹೊಸ ವಿಧಾನ ಜಾರಿಗೆ ಬಂದಿತು. ಈಗ ಇನ್ನೂ ವಿಶಿಷ್ಟವೆನ್ನುವಂತೆ ಮೂಗುತಿ ಹಾಕಲು ಮೂಗನ್ನು ಚುಚ್ಚಲೇ ಬೇಕೆಂದಿಲ್ಲ. ಹಾಗಾಗಿ ಮೂಗು ಚುಚ್ಚಿಕೊಂಡರೆ ಅಸಹ್ಯ ವಾಗಿ ಕಾಣಬಹುದೆಂಬ ಆತಂಕವಿಲ್ಲ. ಅದೇ ಕಾರಣಕ್ಕೆ ಈಗ ಮೂಗು ಚುಚ್ಚದೆ, ಬಯಸಿದಾಗ ಮಾತ್ರ ಮೂಗನ್ನು ಅಲಂಕರಿಸುವ ಮೂಗುತಿ ಗಳೂ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಜನ ಪ್ರಿಯವಾಗುತ್ತಿವೆ. ಆದ ಕಾರಣ ನಿಮಿಷ ಕ್ಕೊಂದು, ದಿನಕ್ಕೊಂದರಂತೆ ದಿರಿಸಿಗೆ ಮತ್ತು ಮೂಗಿನ ಅಂದಕ್ಕೆ ಒಪ್ಪುವ ಮೂಗುತಿ ಬದಲಾಯಿಸುವವರೂ ಇದ್ದಾರೆ.

ಶಿಕಾರ್‌ ಪುರಿ ನಥ್‌
ಪಂಜಾಬಿಯಲ್ಲಿ ಕರೆಯಲ್ಪಡುವ ಶಿಕಾರ್‌ ಪುರಿ ನಥ್‌ ಎಂಬ ಮೂಗುತಿ 20-25 ರೀತಿಯ ವಿನ್ಯಾಸದಲ್ಲಿದೆ. ಆಕ ರ್ಷಕ ಮಣಿಗಳನ್ನು ಪೋಣಿಸಿರುವುದೇ ಇದರ ವಿಶೇಷ. ಇದು ಮಹಿಳೆಯರ ಬಹು ಮೆಚ್ಚಿನ ಮೂಗುತಿಯ ಪ್ರಕಾರಗಳಲ್ಲಿ ಒಂದು. ಇದರ ಜತೆಗೆ ನಾಧುರಿ ಭೌರಿಯಾ, ಫ‌ುಲ…, ನಥ್‌, ಮಾಕು ಪೊಡುಕ್ಕು, ಚುಚ್ಚಿ, ಗುಚ್ಛೇದಾರ್‌ ನಥ್‌, ಮೋರ್‌ ಪಂಖೀ, ಬುಲಾಕು ಇನ್ನೂ ಹಲವು ಬಗೆಯ ಹೆಸರಿನ ಮುಗೂತಿಗಳು ಗಮನ ಸೆಳೆಯುತ್ತಿವೆ.

ವಿವಿಧ ವಿನ್ಯಾಸ
ಪ್ಲಾಟಿನಂ, ಬೆಳ್ಳಿ, ಬಂಗಾರ, ಮುತ್ತು, ರತ್ನ ಮತ್ತು ಹವಳಗಳಿಂದ ಮಾಡಿದ ನೂರಾರು ವಿನ್ಯಾಸದ ಮೂಗುತಿ ಗಳು ಫ್ಯಾಷನ್‌ ಪ್ರಿಯ ಹೆಂಗಳೆಯರ ಮನಸ್ಸನ್ನಾಕರ್ಷಿಸುತ್ತಿವೆ. ಇವುಗಳನ್ನು ಬದಲಾಯಿಸಲು ಹೆಚ್ಚು ಶ್ರಮಪಡ ಬೇಕಾದ ಅಗತ್ಯವಿಲ್ಲ. ಸದ್ಯ ಮಾರುಕಟ್ಟೆ ಯಲ್ಲಿ ಬಂಗಾರದಿಂದ ಮಾಡಿದ ಸಣ್ಣ ಮೂಗುತಿಗಳಿಗೆ ಸಾವಿರದ ಐನ್ನೂರರ ವರೆಗೆ ಬೆಲೆ ಇದ್ದರೆ ಹರಳಿನಿಂದ ಮಾಡಿದ ಮೂಗುತಿಗಳಿಗೆ ಅದಕ್ಕಿಂತ ಸ್ವಲ್ಪ ಜಾಸ್ತಿ ಬೆಲೆಯಿದೆ.

Advertisement

ಈ ಬಣ್ಣಗಳಲ್ಲಿ ಹೆಚ್ಚು
ನೀಲಿ, ಕಪ್ಪು, ಬಿಳಿ, ಹಸಿರು, ಕಂದು ಕೆಂಪು ಹರಳು ಮತ್ತು ಹೊಚ್ಚ ಹೊಸ ಮೋಟಿಫ್ ಬಣ್ಣಗಳ ಮೂಗುತಿಗಳು ಅತೀ ಹೆಚ್ಚು ಟ್ರೆಂಡ್‌ ಆಗುತ್ತಿವೆ. ಧರಿಸಿದ್ದರೆ ಮೂಗಿನಲ್ಲಿ ಮೂಗುತಿ ಇದೆಯೋ ಇಲ್ಲವೋ ಎಂಬಂತೆ ಕಾಣುವ ಸಣ್ಣ ಗಾತ್ರದ ಮೂಗುತಿಯಿಂದ ಹಿಡಿದು ಅವರ ಅಭಿ ರುಚಿಗೆ ತಕ್ಕಂತೆ ಮೂಗುತಿಗಳು ಲಭ್ಯವಿವೆ.

ಮಹತ್ವ
ಹಿಂದೂ ಸಂಪ್ರದಾಯದಲ್ಲಿ ಮೂಗುತಿಗೆ ವಿಶೇಷ ಮಹತ್ವ ಕೊಡಲಾಗು ತ್ತದೆ. ಹಿಂದೂ ಸಂಪ್ರದಾಯದ ಪ್ರಕಾರ ಸ್ತ್ರೀಯರಿಗೆ ಮಾತ್ರ ಮೂಗುತಿ ಹಾಕಲು ಹೇಳಿರುವುದರ ಹಿಂದೆಯೂ ಶಾಸ್ತ್ರವಿದೆ. ಸ್ತ್ರೀಯರ ಮನಸ್ಸು ಚಂಚಲ ಆದ್ದರಿಂದ ಮೂಗುತಿ ಧರಿಸುವುದರಿಂದ ಸ್ತ್ರೀಯರ ಚಂದ್ರನಾಡಿ ಕಾರ್ಯನಿರತವಾಗಿ ಮನಸ್ಸು ಸ್ಥಿರವಾಗುತ್ತದೆ. ಅಷ್ಟೆ ಅಲ್ಲದೆ, ಮೂಗಿನ ಬಿಂದುವಿನ ಮೇಲೆ ಒತ್ತಡವು ನಿರ್ಮಾಣವಾಗಿ ಬಿಂದು ಒತ್ತಡದ ಉಪಚಾರವಾಗುವುದರಿಂದ ಅಲ್ಲಿನ ಋಣಾತ್ಮಕ ಶಕ್ತಿಯು ಕಡಿಮೆಯಾಗುತ್ತದೆ. ಇದಲ್ಲದೆ, ಋತು ಚಕ್ರದ ಸಮಯದಲ್ಲಿ ಉಂಟಾಗುವ ನೋವುಗಳೂ ಕೂಡ ಕಡಿಮೆಯಾಗುತ್ತದೆ. ಇದೇ ಕಾರಣಕ್ಕಾಗಿಯೇ ಯುವತಿಯರು ಋತುಮತಿ ಯಾದ ಬಳಿಕ ಅವರಿಗೆ ಮೂಗು ಚುಚ್ಚಿಸುತ್ತಾರೆ.

ಟ್ರೆಂಡ್‌ ಸೃಷ್ಟಿಸಿದ ಮೂಗುತಿಗಳು
ರಾಮ್‌ಲೀಲಾ ಮತ್ತು ಪದ್ಮವಾತ್‌ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ತೆಲುಗಿನ ಸಿನೆಮಾದಲ್ಲಿ ಪಾರ್ವತಿ ಮೆನನ್‌ ಧರಿಸಿದ ರಿಂಗ್‌ ಆಕಾರದ ಮೂಗುತಿಗಳು ಅತಿ ಹೆಚ್ಚು ಟ್ರೆಂಡ್‌ ಸೃಷ್ಟಿ ಮಾಡಿದವು. ಇದರ ಜತೆಗೆ ಚಂದನವನದ ಶ್ರದ್ಧಾ ಶ್ರೀನಾಥ್‌, ಶ್ರುತಿ ಹರಿಹರನ್‌ ಹಾಕಿದ್ದ ಸಿಲ್ವರ್‌ ಮೆಟಲ್‌ ಮೂಗುತಿಗಳು ಹೆಂಗಳೆಯರ ಮನ ಕದ್ದಿದ್ದವು.

ಸಾನಿಯಾ ಪ್ರಭಾವ
ಈ ಹಿಂದೆ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಧರಿಸುತ್ತಿದ್ದ ಮೂಗುತಿ ಎಲ್ಲೆಡೆ ಟ್ರೆಂಡ್‌ ಆಗಿತ್ತು. ಮೂಗುತಿಯೆಲ್ಲ ಓಲ್ಡ… ಫ್ಯಾಷನ್‌ ಅಂತಿದ್ದ ಹುಡುಗಿಯರ ಮೂಗಿನ ಮೇಲೊಂದು ನತ್ತು ನಲಿದಾಡುತ್ತಿತ್ತು. ಸಾನಿಯಾಳಿಂದ ಶುರುವಾದ ಮೂಗುತಿ ಟ್ರೆಂಡ್‌ ಮೊನ್ನೆವರೆಗೂ ದೀಪಿಕಾ ಪಡುಕೋಣೆಯ ಪದ್ಮಾವತಿವರೆಗೂ ಬಂದಿದೆ. ಈಗಲಂತೂ ದಿನಕ್ಕೊಂದು ಎಂಬಂತೆ ವಿವಿಧ ಶೈಲಿಯ ಮೂಗುತಿಗಳು ಮಾರುಕಟ್ಟೆಯನ್ನು ಲಗ್ಗೆ ಇಡುತ್ತಿವೆ. ಯಾವ ಕ್ಷಣದಲ್ಲಿ ಈ ಟ್ರೆಂಡ್‌ ಬದಲಾಗತ್ತೋ ಆ ಬದಲಿಸುವವರಿಗೇ ಗೊತ್ತು.

-ಸುಶ್ಮಿತಾ ಜೈನ್‌.

Advertisement

Udayavani is now on Telegram. Click here to join our channel and stay updated with the latest news.

Next