ಹಾಸ್ಟೆಲ್ ಜೀವನದ ಮೋಜು ಮಸ್ತಿಗಳು ಸದಾ ನೆನಪಿನಲ್ಲಿರುವ ಅಂಶಗಳು. ನಾನಂತು ಮೊದಲ ಬಾರಿ ಹಾಸ್ಟೆಲ್ ಸೇರಿದ ಮೇಲಂತು ಅಲ್ಲಿನ ನಿತ್ಯದ ಆಗುಹೋಗುಗಳನೆಲ್ಲಾ ಎಂಜಾಯ್ ಮಾಡುತ್ತಿದ್ದೇನೆ. ಗಣೇಶ ಚತುರ್ಥಿಗೆ ಪುಟ್ಟ ಗಣಪತಿ ವಿಗ್ರಹ ಇಟ್ಟು ಪೂಜೆ ಮಾಡಿದ್ದಲ್ಲದೇ ಪ್ರಸಾದ ತಯಾರಿಸಿ ಹಂಚಿದ್ದು ಇದೆ. ಇವೆಲ್ಲದರ ನಡುವೆ ಆಗಾಗ ಯಾರ್ಯಾರಧ್ದೋ ದುಡ್ಡಲ್ಲಿ ಬಜೆಟ್ ಪಾರ್ಟಿಗಳು ನಮ್ಮ ಪಾಲಿಗೆ ಸಿಗುವ ದೊಡ್ಡ ಪ್ರಸಾದವೇ ಸರಿ. ಆದ್ರೆ ಕೆಲವೊಮ್ಮೆ ಬಜೆಟ್ ಎಲ್ಲಿಯೂ ಅಡ್ಜಸ್ಟ್ ಆಗದೇ ಇದ್ದಾಗ ಸಾಲ ಮಾಡಿ ತುಪ್ಪ ತಿನ್ನುವ ಪರಿಸ್ಥಿತಿ. ಆಗ ಹೊಳೆದ ವಿನೂತನ ಐಡಿಯವೆಂದರೆ ಪಿಗ್ಗಿ ಬ್ಯಾಂಕ್. ಹೌದು.. ಕಪಾಟಿನ ಮೇಲಿದ್ದ ಚಾರ್ಟ್ ಶೀಟ್‌ನಲ್ಲಿ ನಮ್ಮ ಪಿಗ್ಗಿ ಬ್ಯಾಂಕ್ ಕಟ್ಟಲು ಆರಂಭಿಸಿದೆವು. ಬ್ಯಾಂಕ್ ಕಟ್ಟಲು ತಗಲಿದ ಸಮಯ ಕೇವಲ ಹತ್ತು ನಿಮಿಷ. ಕಲ್ಲು ಮರಳಿನ ಖರ್ಚಿಲ್ಲ, ಸಿಮೆಂಟ್ ಅಗತ್ಯವೇ ಇಲ್ಲ. ಗಮ್ ಹಾಗೂ ಕತ್ತರಿ ಬಳಸಿ ಸುಂದರ ಪಿಗ್ಗಿ ಬ್ಯಾಂಕಿನ ನಿರ್ಮಾಣವಾಯಿತು…!
ಒಂದು ರೂಪಾಯಿ ಡೆಪಾಸಿಟ್ ಇಲ್ಲದ ಬ್ಯಾಂಕ್ ಉದ್ಘಾಟನೆಗೆ ಏಳನೇ ಮಹಡಿಯಲ್ಲಿದ್ದ ಗೆಳತಿಯನ್ನು ನಿದ್ದೆಯಿಂದ ಎಬ್ಬಿಸಿ ಆಹ್ವಾನಿಸಿಯೇ ಬಿಟ್ಟೆವು. ಬಳಿಕ ಪಿಗ್ಗಿ ಬ್ಯಾಂಕ್‌ಗೆ ಅಧಿಕೃತ ಚಾಲನೆ ನೀಡಲಾಯಿತು. ಪಿಗ್ಗಿ ಬ್ಯಾಂಕ್ ಮ್ಯಾನೇಜರ್ ನನ್ನ ರೂಂಮೇಟ್ ಆದ್ರೆ, ನಾನು ಕ್ಯಾಶಿಯರ್. ಉದ್ಘಾಟನೆ ಮಾಡಿದ ಅತಿಥಿಯೇ ನನ್ನ ಗೆಳತಿ ಪಬ್ಲಿಕ್ ರಿಲೇಷನ್ ಆಫಿಸರ್. ಅಂತು ಇಂತು ಪಿಗ್ಗಿ ಬ್ಯಾಂಕ್‌ನಲ್ಲಿ ಕೆಲಸ ಪಡೆದಿದ್ದಾಯಿತು. ಇಲ್ಲಿ ಜಾಬ್ ಪಡೆಯಲು ಯಾವ ಬ್ಯಾಂಕ್ ಪ್ರವೇಶಾತಿ ಪರೀಕ್ಷೆಯ ಅಗತ್ಯವೇ ಇಲ್ಲವಾಯಿತು.
ಪಿಗ್ಗಿ ಬ್ಯಾಂಕ್‌ನಲ್ಲಿ ಡೆಪಾಸಿಟ್ ಮಾಡುವವರು ಕೇವಲ ಹತ್ತು ರೂ. ವರೆಗಿನ ನಾಣ್ಯಗಳನ್ನು ಮಾತ್ರವೇ ಇಡಬಹುದು. ಹತ್ತು ರೂಪಾಯಿವರೆಗೆ ಸಾಲ ನೀಡುವ ವ್ಯವಸ್ಥೆಯು ಪಿಗ್ಗಿ ಬ್ಯಾಂಕಿನಲ್ಲಿದೆ. ಡೆಪಾಸಿಟ್ ಮಾಡಿದವರಿಗೆ ಯಾವುದೇ ಬಡ್ಡಿಯನ್ನು ನೀಡಲಾಗುವುದಿಲ್ಲ. ಆದರೆ ಸಾಲ ತೆಗೆದುಕೊಂಡವರು ಒಂದು ವಾರದೊಳಗೆ ವಾಪಾಸು ನೀಡದೇ ಹೋದಲ್ಲಿ ವಾರಕ್ಕೆ ಒಂದು ರೂಪಾಯಿಯಂತೆ ಬಡ್ಡಿ ವಿಧಿಸಲಾಗುತ್ತದೆ.
“ಪುಟ್ ದ ಮನಿ, ಗೆಟ್ ದ ಮನಿ…ಎಂಜಾಯ್’ ಎಂಬುದು ಬ್ಯಾಂಕಿನ ಘೋಷ ವಾಕ್ಯವಾಗಿತ್ತು. ಕೆಲವರು ಇದರಲ್ಲಿ ಹಣ ಹೂಡಲು ಮುಂದೆ ಬಂದರು. ತಮಾಷೆಗೆ ಆರಂಭಿಸಿದ ಪಿಗ್ಗಿ ಬ್ಯಾಂಕ್ ಸಣ್ಣಪುಟ್ಟ ಆವಶ್ಯಕತೆಯನ್ನು ಪೂರೈಸಿತ್ತು.
- ದುರ್ಗಾ ಭಟ್ ಬೊಳ್ಳುರೋಡಿ ಆಳ್ವಾಸ್ ಕಾಲೇಜು ಮೂಡುಬಿದಿರೆ