ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ಹುಲಿ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಓಂಕಾರ್ ಅರಣ್ಯ ವಲಯದ ಕಾಡಂಚಿನ ಜಮೀನಿನಲ್ಲಿ ಮತ್ತೆ ಕಾಡಾನೆಗಳ ಹಾವಳಿ ಹೆಚ್ಚಾಗಿದೆ.
ಕಾಡಾನೆಗಳ ದಾಳಿಯಿಂದ ಕೈ ಸೇರಬೇಕಿದ್ದ ಬಾಳೆ ಬೆಳೆ ಸಂಪೂರ್ಣವಾಗಿ ನಾಶವಾಗುತ್ತಿದೆ. ಓಂಕಾರ್ ವಲಯದ ಅರಣ್ಯದಿಂದ ಹೊರಬಂದ ಐದು ಆನೆಗಳ ಹಿಂಡು ಹಂಚೀಪುರ ಗ್ರಾಮದ ಎಚ್.ಪಿ.ರಾಜಶೇಖರಮೂರ್ತಿ, ಎಚ್.ಪಿ.ದಿವಾಕರ ಅವರ ಜಮೀನಿಗೆ ದಾಳಿ ನಡೆಸಿ ಬಾಳೆ ಬೆಳೆಗಳನ್ನು ನಾಶಪಡಿಸಿವೆ. ಈ ಬಗ್ಗೆ ಅರಣ್ಯಾಧಿಕಾರಿ ಗಳಿಗೆ ತಿಳಿಸಿದರೆ ನಿರ್ಲಕ್ಷ್ಯದಿಂದ ವರ್ತಿಸುತ್ತಿದ್ದಾರೆ. ಒಂದು ಬಾಳೆ ಗಿಡ ಬೆಳೆಸಲು 150ರಿಂದ 200ರೂಪಾಯಿ ಖರ್ಚಾಗುತ್ತಿದ್ದು, ಕಾಡಾನೆ ದಾಳಿಯಿಂದ ಲಕ್ಷಾಂತರ ರೂ. ನಷ್ಟವಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕ ಸಿ.ಎಸ್.ನಿರಂಜನಕುಮಾರ್ ಖುದ್ದಾಗಿ ಘಟನಾ ಸ್ಥಳಗಳಿಗೆ ಭೇಟಿ ನೀಡಿ ಅರಣ್ಯ ಅಧಿಕಾರಿ ಗಳಿಗೆ ಸೂಕ್ತ ನಿರ್ದೇಶಕ ನೀಡಿದ್ದರೂ ಸಹ ಕಾಡಂಚಿ ನಲ್ಲಿ ಗಸ್ತು ಹೆಚ್ಚಿಸುವುದು, ಕಂದಕಗಳ ದುರಸ್ತಿ, ಸೋಲಾರ್ ಬೇಲಿ ನಿರ್ಮಾಣ ಮತ್ತಿತರೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಇಂತಹವುದರಲ್ಲಿ ಇನ್ನು ರೈತರ ಮಾತುಗಳನ್ನು ಕೇಳುತ್ತಾರೆಯೇ ಎಂದು ರೈತ ರಾಜಶೇಖರಮೂರ್ತಿ ಅರಣ್ ಇಲಾಖೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ:ಮುಂಬೈಯನ್ನು ಕರ್ನಾಟಕಕ್ಕೆ ಸೇರ್ಪಡೆ ಮಾಡಬೇಕು: ಡಿಸಿಎಂ ಲಕ್ಷ್ಮಣ ಸವದಿ
ಇದೇ ರೀತಿ ನಿರಂತರ ದಾಳಿ ನಡೆಸಿದರೆ ರೈತರು ವಿಷಕುಡಿಯಬೇಕಾಗುತ್ತದೆ. ಆದ್ದರಿಂದ ಇನ್ನಾದರೂ ಅರಣ್ಯಾಧಿಕಾರಿಗಳು ರೈತರೊಂದಿಗೆ ಜವಾಬ್ದಾರಿ ಯಿಂದ ವರ್ತಿಸುವುದನ್ನು ಕಲಿಯಬೇಕು. ಇಲ್ಲದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.