Advertisement

ಕಿತ್ತೋದ ರಸ್ತೆಯಲ್ಲಿ ಪ್ರಯಾಸದ ಪ್ರಯಾಣ; ಯಾಮಾರಿದರೆ ಅಪಾಯ

04:05 PM Oct 26, 2022 | Team Udayavani |

ಮುಧೋಳ: ವಜ್ಜರಮಟ್ಟಿ-ಹಲಗಲಿ ಸಂಪರ್ಕ ರಸ್ತೆ ಸಂಪೂರ್ಣ ಕಿತ್ತುಹೋಗಿದ್ದು, ಪ್ರಯಾಣಿಕರು ಪ್ರಯಾಣಕ್ಕಾಗಿ ಪ್ರಯಾಸ ಪಡುವಂತಾಗಿದೆ. ವಜ್ಜರಮಟ್ಟಿಯಿಂದ ಹಲಗಲಿ ಗ್ರಾಮಕ್ಕೆ 11 ಕಿ.ಮೀ ಅಂತರವಿದೆ ಅದರಲ್ಲಿ ಹಲಗಲಿಯಿಂದ ಆರಂಭದಲ್ಲಿ 6 ಕಿ.ಮೀ ರಸ್ತೆ ಸುಸಜ್ಜಿತವಾಗಿದ್ದು, ಇನ್ನೂ 5 ಕಿ.ಮೀ ರಸ್ತೆ ಸಂಪೂರ್ಣವಾಗಿ ಕಿತ್ತು ಹೋಗಿದೆ. ಸಂಪೂರ್ಣವಾಗಿ ಕಿತ್ತುಹೋಗಿರುವ ರಸ್ತೆಯಲ್ಲಿ ಸಂಚರಿಸುವ ಬೈಕ್‌ ಸವಾರರು, ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಯಾಮಾರಿದರೆ ಅಪಾಯ: ರಸ್ತೆ ಮಧ್ಯದಲ್ಲಿ ಮೊಣಕಾಲುದ್ದದ ಗುಂಡಿಗಳು ನಿರ್ಮಾಣವಾಗಿದ್ದು, ಈ ಮಾರ್ಗದಲ್ಲಿ ಕಬ್ಬು ತುಂಬಿದ ವಾಹನ ಹಾಗೂ ಗರಸು ಸಾಗಿಸುವ ಭಾರಿ ವಾಹನಗಳ ಸಂಚಾರ ಹೆಚ್ಚಾಗಿದೆ. ಗುಂಡಿಗಳೇ ಹೆಚ್ಚಿರುವ ರಸ್ತೆಯಲ್ಲಿ ಕಬ್ಬು ಸಾಗಣೆ ವಾಹನದ ಚಾಲಕರು ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಗರುಸು ತುಂಬಿರುವ ದೊಡ್ಡ ಲಾರಿಗಳು ರಸ್ತೆಯಲ್ಲಿ ಬಂದರೆ ಮತ್ತೂಂದು ವಾಹನಕ್ಕೆ ಜಾಗವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾವಾಗುತ್ತದೆ. ರಸ್ತೆಯನ್ನು ವಿಸ್ತರಿಸಿ ಸುಧಾರಿಸಿದರೆ ಈ ಮಾರ್ಗದಲ್ಲಿ ಓಡಾಡುವ ಎಲ್ಲ ತೆರನಾದ ವಾಹನ ಸವಾರರಿಗೆ ಅನುಕೂಲವಾಗುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.

ಮಳೆಯಾದರೆ ಪರಿಸ್ಥಿತಿ ತೀರ ಗಂಭೀರ: ಇನ್ನು ಮಳೆಯಾದರೆ ಈ ಮಾರ್ಗದಲ್ಲಿ ಸಂಚರಿಸುವುದು ಪ್ರಯಾಸದ ಸಂಗತಿ. ಕಿತ್ತುಹೋಗಿರುವ ರಸ್ತೆಯಲ್ಲಿನ ಗುಂಡಿಗಳಲ್ಲಿ ಹೆಚ್ಚು ನೀರು ಸಂಗ್ರಹಗೊಂಡು ಸವಾರರಿಗೆ ರಸ್ತೆಯೇ ಕಾಣುವುದಿಲ್ಲ. ಇಂತಹ ರಸ್ತೆಯಲಿ ಸಂಚರಿಸುವ ವೇಳೆಯಲ್ಲಿ ಎಷ್ಟೋ ಬೈಕ್‌
ಸವಾರರು ಬಿದ್ದು ಗಾಯಗೊಂಡಿದ್ದು ಉಂಟು.

4 ಕಿ.ಮೀ ರಸ್ತೆ ಸುಧಾರಣೆಯಾಗಬೇಕಿದೆ: ವಜ್ಜರಮಟ್ಟಿ ಗ್ರಾಮಕ್ಕೆ ಹೊಂದಿಕೊಂಡು ಅಂದಾಜು 1.5 ಕಿ.ಮೀ ರಸ್ತೆ ದುರಸ್ತಿ ಕಾರ್ಯ ಸಾಗಿದೆ. ಇನ್ನು ಮಧ್ಯದಲ್ಲಿ ಬರುವ ಕಲ್ಲುಕಂಟಿ ಹಳ್ಳದಿಂದ ಹಲಗಲಿ ಗ್ರಾಮದವರೆಗಿನ ರಸ್ತೆಯೂ ಸುಸಜ್ಜಿತವಾಗಿದೆ. ಆದರೆ ಮಧ್ಯದಲ್ಲಿ ಬರುವ 4 ಕಿ.ಮೀ. ರಸ್ತೆ ಸಂಪೂರ್ಣ ಕಿತ್ತು ಹೋಗಿದ್ದು, ರಸ್ತೆ ದುರಸ್ತಿಗೆ ಅ ಧಿಕಾರಿಗಳು ಇನ್ನಾದರೂ ಮುಂದಾಗಬೇಕಿದೆ.

2 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ರಸ್ತೆ: ಪ್ರಸ್ತುತ ರಸ್ತೆಯನ್ನು ಎರಡು ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿತ್ತು. ಆದರೆ ನಿರ್ಮಾಣಗೊಂಡು ಮೂರೇ ತಿಂಗಳಿಗೆ ರಸ್ತೆ ಹಾಳಾಗಲು ಆರಂಭಿಸಿತ್ತು. ಅಂದಿನಿಂದ ಕಿತ್ತುಹೋಗುತ್ತಿರುವ ರಸ್ತೆ ದುರಸ್ತಿಗೆ ಆಡಳಿತ ಯಂತ್ರ ಮಾತ್ರ ಮುಂದಾಗದಿರುವುದು ದುರ್ದೈವದ ಸಂಗತಿ.

Advertisement

ಹಲಗಲಿ ವಜ್ಜರಮಟ್ಟಿ ರಸ್ತೆ ಸಂಪೂರ್ಣ ಹಾಳಾಗಿದ್ದು, ರಸ್ತೆಯಲ್ಲಿ ಓಡಾಡಲು ಕಷ್ಟವಾಗುತ್ತಿದೆ.ಸಂಬಂಧಿಸಿದ ಅಧಿಕಾರಿಗಳು ಶೀಘ್ರ ರಸ್ತೆ ದುರಸ್ತಿಗೆ ಮುಂದಾಗಬೇಕು.
ಅರುಣ ಬಡಿಗೇರ,
ದ್ವಿಚಕ್ರವಾಹನ ಸವಾರ

ಹಲಗಲಿ ವಜ್ಜರಮಟ್ಟಿ ರಸ್ತೆಯಲ್ಲಿ 0ಯಿಂದ 1.8 ಕಿ.ಮೀ.ವರೆಗಿನ ಕಾಮಗಾರಿ ಪ್ರಗತಿ ಹಂತದಲ್ಲಿದೆ. 2 ಕಿ.ಮೀ. ಕಲ್ಲಿನಿಂದ 4ಕಿ.ಮೀ. ಕಲ್ಲಿನವರೆಗಿನ ರಸ್ತೆ ದುರಸ್ತಿಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರ ಕಾರ್ಯಾರಂಭವಾಗಲಿದೆ. ಇನ್ನುಳಿದಂತೆ 4 ಕಿ.ಮೀ ಕಲ್ಲಿನಿಂದ 6 ಕಿ.ಮೀ ಕಲ್ಲಿನವರೆಗೆ ರಸ್ತೆ ದುರಸ್ತಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು.
ಪ್ರಮೋದ ಹೊಟ್ಟಿ, ಲೋಕೋಪಯೋಗಿ ಎಇಇ

*ಗೋವಿಂದಪ್ಪ ತಳವಾರ

Advertisement

Udayavani is now on Telegram. Click here to join our channel and stay updated with the latest news.

Next