Advertisement

12 ನಿಮಿಷದಲ್ಲೊಂದು ಕಾರ್ಯಕ್ರಮ

06:00 AM Jun 15, 2018 | |

ಸಾಮಾನ್ಯವಾಗಿ ಚಿತ್ರಗಳ ಆಡಿಯೋ ಸಿಡಿ ಬಿಡುಗಡೆ ಕಾರ್ಯಕ್ರಮಗಳೆಂದರೆ ಅದಕ್ಕೆ ಗಂಟೆಗಟ್ಟಲೆ ಸಮಯ ಮೀಸಲಿಡಬೇಕು. ಇನ್ನೂ ಕೆಲ ಚಿತ್ರಗಳ ಆಡಿಯೋ ಸಿಡಿ ಬಿಡುಗಡೆ ಕಾರ್ಯಕ್ರಮಗಳಂತೂ ಸಾಕೆನಿಸಿದರೂ ವೇದಿಕೆ ಮೇಲೆ ಮಾತು-ಮಂಥನ ಜೋರಾಗಿಯೇ ನಡೆಯುತ್ತಿರುತ್ತೆ. ಆದರೆ, ಕೇವಲ 12 ನಿಮಿಷಗಳಲ್ಲಿ ಆಡಿಯೋ ಸಿಡಿ ಬಿಡುಗಡೆ ಕಾರ್ಯಕ್ರಮ ಮಾಡಿ ಮುಗಿಸಬಹುದು ಎಂಬುದಕ್ಕೆ ಇತ್ತೀಚೆಗೆ ಹೊಸಬರ “ಸಂಕಷ್ಟಕರ ಗಣಪತಿ’ ಚಿತ್ರ ಸಾಕ್ಷಿಯಾಗಿದ್ದು ವಿಶೇಷ.

Advertisement

ಲಿಖೀತ್‌ ಶೆಟ್ಟಿ ಅಭಿನಯದ “ಸಂಕಷ್ಟಕರ ಗಣಪತಿ’ ಚಿತ್ರದ ಆಡಿಯೋ ಬಿಡುಗಡೆ ಅಷ್ಟು ಬೇಗ ಮುಗಿಯೋಕೆ ಕಾರಣ, ಅಚ್ಚುಕಟ್ಟಾದ ನಿರೂಪಣೆ, ವೇದಿಕೆಯಲ್ಲಿ ನಿರ್ದೇಶಕ, ನಾಯಕ, ನಾಯಕಿ, ಸಂಗೀತ ನಿರ್ದೇಶಕ ಹಾಗೂ ಅತಿಥಿಯಾಗಿ ಆಗಮಿಸಿದ್ದವರು ಪುನೀತ್‌ ರಾಜಕುಮಾರ್‌ ಮತ್ತು ಗುರುಕಿರಣ್‌. ಹೀಗಾಗಿ ಎಲ್ಲರೂ ಒಂದೊಂದು ನಿಮಿಷ ಮಾತಾಡುವ ಹೊತ್ತಿಗೆ ಆಡಿಯೋ ಸಿಡಿ ಬಿಡುಗಡೆ ಕಾರ್ಯಕ್ರಮಕ್ಕೂ ತೆರೆಬಿತ್ತು. ಮೊದಲಿಗೆ ಚಿತ್ರದ ಟ್ರೇಲರ್‌ ತೋರಿಸಲಾಯಿತು. ಅದಾದ ಬಳಿಕ ವೇದಿಕೆಗೆ ಎಲ್ಲರನ್ನೂ ಕರೆಯಲಾಯಿತು. ಮೊದಲಿಗೆ ನಿರ್ದೇಶಕ ಅರ್ಜುನ್‌ ಕುಮಾರ್‌ ಅವರಿಗೆ ಮೈಕ್‌ ಕೊಡಲಾಯಿತು. ಮಾತಿಗಿಳಿದ ನಿರ್ದೇಶಕರು, “ಇದೊಂದು ಹೊಸ ಬಗೆಯ ಚಿತ್ರ. ಈಗಾಗಲೇ ಟ್ರೇಲರ್‌ಗೆ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ಹೊಸ ಕಾನ್ಸೆಪ್ಟ್ ಮೆಚ್ಚಿಕೊಂಡು ನಿರ್ಮಾಪಕರು ಅವಕಾಶ ಕೊಟ್ಟಿದ್ದಾರೆ. ಸಿನಿಮಾ ಕೂಡ ನಿರೀಕ್ಷೆ ಮೀರಿ ಮೂಡಿಬಂದಿದೆ. ಜನರು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲವಿದೆ. ಪಿಆರ್‌ಕೆ ಆಡಿಯೋ ಸಂಸ್ಥೆ ನಮ್ಮ ಹಾಡುಗಳನ್ನು ಬಿಡುಗಡೆ ಮಾಡಿದೆ. ನಿಶ್ಚಲ್‌ ದಂಬೆಕೋಡಿ, ನಿತಿನ್‌ ಜಯ್‌, ಮದನ್‌ ಬೆಳ್ಳಿಸಾಲು ಸಾಹಿತ್ಯವಿದೆ. ರಘು ದೀಕ್ಷೀತ್‌, ಸಂಚಿತ್‌ ಹೆಗಡೆ, ರಕ್ಷಿತಾರಾವ್‌, ದೀಪಕ್‌ ದೊಡೆರ, ಇಶಾ ಸುಚಿ, ಮೆಹಬೂಬ್‌ ಸಾಬ್‌, ಗುರುಕಿರಣ್‌, ಅನನ್ಯ ಭಟ್‌ ಹಾಡಿದ್ದಾರೆ ಅಂತ ವಿವರ ಕೊಟ್ಟರು ನಿರ್ದೇಶಕರು.ಆಡಿಯೋ ಬಿಡುಗಡೆ ಮಾಡಿದ ಪುನೀತ್‌ ರಾಜಕುಮಾರ್‌, “ಹೊಸಬರೆಲ್ಲಾ ಸೇರಿ ಪ್ರೀತಿಯಿಂದ ಕನಸು ಕಟ್ಟಿಕೊಂಡು ಸಿನಿಮಾ ಮಾಡಿದ್ದಾರೆ. ಹೊಸಬರು ಹೊಸತನದೊಂದಿಗೆ ಬರುತ್ತಿದ್ದಾರೆ. ಅವರ ಹೊಸ ಪ್ರಯೋಗಗಳು ಕ್ಲಿಕ್‌ ಆಗುತ್ತಿವೆ. ಈ ಚಿತ್ರಕ್ಕೆ ದೇವರು ಒಳ್ಳೆಯದನ್ನ ಮಾಡಲಿ, ಅಭಿಮಾನಿ ದೇವರುಗಳು ಇವರ ಸಿನಿಮಾಗೆ ಗೆಲುವು ಕೊಡಲಿ. ನಿರ್ಮಾಪಕರಿಗೆ ಹಾಕಿದ ಹಣ ಹಿಂದಿರುಗಲಿ’ ಅಂದರು ಪುನೀತ್‌.

“ರಿತ್ವಿಕ್‌ ಮುರಳೀಧರ್‌ ಅವರಿಗೆ ಇದು ಮೊದಲ ಚಿತ್ರ. ಒಳ್ಳೆಯ ಸಂಗೀತ, ಹಾಡು ಕೊಟ್ಟಿದ್ದಾರೆ. ನನಗೆ ಇದುವರೆಗೆ ಫಾಸ್ಟ್‌ ಸಾಂಗ್‌ ಅಥವಾ ವೆಸ್ಟ್ರನ್‌ ಶೈಲಿಯ ಹಾಡು ಸಿಗುತ್ತಿದ್ದವು. ಇಲ್ಲಿ ಪ್ಯಾಥೋ ಹಾಡು ಹಾಡುವ ಅವಕಾಶ ಸಿಕ್ಕಿದೆ. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ಹರಸಿದರು ಗುರುಕಿರಣ್‌.

ನಾಯಕ ಲಿಖೀತ್‌ ಶೆಟ್ಟಿಗೆ ಒಳ್ಳೆಯ ಪ್ರಯತ್ನ ಮಾಡಿರುವ ಖುಷಿ. “ಕನಸು ನನಸಾಗಿದೆ. ಈ ನಮ್ಮ ಹೊಸ ಪ್ರಯತ್ನಕ್ಕೆ ಎಲ್ಲರೂ ಸಹಕರಿಸಿ’ ಅಂತ ಮನವಿ ಇಟ್ಟರೆ, ನಾಯಕಿ ಶ್ರುತಿ ಮೊದಲ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಕಂಡು ಖುಷಿಗೊಂಡಿದ್ದಾರಂತೆ. ಇನ್ನು ಈ ವೇಳೆ ಸಂಗೀತ ನಿರ್ದೇಶಕ ರಿತ್ವಿಕ್‌ ಮುರಳೀಧರ್‌, ನಿರ್ಮಾಪಕರಾದ ರಾಜೇಶ್‌ ಬಾಬು, ಫೈಜಾನ್‌ ಖಾನ್‌, ಜೋಡಿದಾರ್‌, ಹೇಮಂತ್‌ ಕುಮಾರ್‌, ಪ್ರಮೋದ್‌ ನಿಂಬಾಳ್ಕರ್‌, ಚೆಲುವರಾಜ್‌ ನಾಯ್ಡು ಸೇರಿದಂತೆ ಚಿತ್ರತಂಡ ಹಾಜರಿತ್ತು.

Advertisement

Udayavani is now on Telegram. Click here to join our channel and stay updated with the latest news.

Next