Advertisement

ಎ.11: ಹೆದ್ದಾರಿಯಿಂದ ನಗರಕ್ಕೆ ಪ್ರವೇಶ

12:40 PM Apr 01, 2022 | Team Udayavani |

ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯಿಂದ ಕುಂದಾಪುರ ನಗರ ಪ್ರವೇಶಿಸಲು ಸರ್ವಿಸ್‌ ರಸ್ತೆಗೆ ಪ್ರವೇಶ ನೀಡುವ ಕಾರ್ಯ ಎ.10ರ ಒಳಗೆ ಮುಗಿಸಬೇಕು. ಎ.11ಕ್ಕೆ ತನ್ನದೇ ವಾಹನ ಅದರಲ್ಲಿ ಹೋಗುವಂತಾಗಬೇಕು. ಬೀದಿದೀಪ, ಚರಂಡಿ, ಡಾಮರು ಸೇರಿದಂತೆ ಬಾಕಿ ಉಳಿದ ಎಲ್ಲ ಕೆಲಸಗಳೂ ಎ.10ರೊಳಗೆ ನಡೆಯಬೇಕು. ಎ.11ಕ್ಕೆ ತಾನು ಖುದ್ದು ಪರಿಶೀಲನೆ ನಡೆಸಿ ಕಾಮಗಾರಿಗಳು ಬಾಕಿ ಇದ್ದರೆ ಸೆ.133ರಡಿ ಕೇಸು ದಾಖಲಿಸುವುದು ಶತಸ್ಸಿದ್ಧ ಎಂದು ಸಹಾಯಕ ಕಮಿಷನರ್‌ ಕೆ. ರಾಜು ಹೇಳಿದ್ದಾರೆ. ಗುರುವಾರ ಮಿನಿ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ನವಯುಗ ಸಂಸ್ಥೆಗೆ ಅವರು ಎಚ್ಚರಿಕೆ ನೀಡಿದರು.

Advertisement

ಪ್ರವೇಶ

ನಗರಕ್ಕೆ ಪ್ರವೇಶ ನೀಡುವ ಕುರಿತು ಡಿಸಿ ಯವರು ಸಮಿತಿ ರಚಿಸಿದ್ದಾರೆ. ಈ ಬಾರಿಯ ಸಭೆಯಲ್ಲಾದರೂ ಖಚಿತ ನಿರ್ಣಯ ಆಗಬೇಕಿದೆ ಎಂದು ಎಸಿ ಹೇಳಿದಾಗ, ಒಂದು ಬದಿ ಕೊಡುವುದಾಗಿ ನವಯುಗ ಪ್ರತಿನಿಧಿ ಹೇಳಿದರು. ಎರಡೂ ಬದಿ ನೀಡಬೇಕು ಎಂದು ಎಸಿ ಹೇಳಿದರು. ತಾತ್ಕಾಲಿಕ ನೆಲೆಯಲ್ಲಿ ನೀಡಲಾಗುವುದು. ಶಾಶ್ವತ ಅವಕಾಶಕ್ಕಾಗಿ ನೀಲನಕಾಶೆ ಸಿದ್ಧಪಡಿಸಲಾಗಿದೆ ಎಂದು ಎಂಜಿನಿಯರ್‌ ಹೇಳಿದರು.

ಗುಜರಿ ವಸ್ತು

ಶಾಸ್ತ್ರಿ ಸರ್ಕಲ್‌ ಬಳಿ ಫ್ಲೈಓವರ್‌ ಅಡಿಯಲ್ಲಿ ಗುಜರಿ ವಸ್ತುಗಳನ್ನು ತೆಗೆಸಲು ಸೆಪ್ಟಂಬರ್‌ ನಲ್ಲೇ ಸೂಚಿಸಲಾಗಿತ್ತು. ಇನ್ನೂ ಪೂರ್ಣ ತೆರವಾಗಿಲ್ಲ. ಎ.5ರ ಒಳಗೆ ತೆಗೆಯದೇ ಇದ್ದಲ್ಲಿ ಎ.6ರಂದು ಪುರಸಭೆ ವತಿಯಿಂದ ತೆಗೆಸಿ ಅದರ ಮೊತ್ತವನ್ನು ನಿಮ್ಮಿಂದ ವಸೂಲಿ ಮಾಡಲಾಗುವುದು ಎಂದು ಎಸಿ ಹೇಳಿದರು. ಆ ವಸ್ತುಗಳನ್ನು ಏಲಂ ಹಾಕುವುದು ಉತ್ತಮ ಎಂದು ತಹಶೀಲ್ದಾರ್‌ ಕಿರಣ್‌ ಗೌರಯ್ಯ ಹೇಳಿದರು. ಇಂತಹ ಗುಜರಿ ಸಲಕರಣೆ ರಾಶಿಯಿಂದಾಗಿ ಕುಂದಾಪುರ ನಗರ ರೋಗಿಷ್ಠರ ರೀತಿ ಕಾಣುತ್ತದೆ. ನನಗೇ ಹಾಗೆ ಅನಿಸುವಾಗ ಊರವರಿಗೆ ಹೇಗನಿಸಬೇಡ ಎಂದರು.

Advertisement

ಡಾಮರು

ಸರ್ವಿಸ್‌ ರಸ್ತೆಗಳ ಕುರಿತಾಗಿ ಸಾಕಷ್ಟು ದೂರುಗಳಿವೆ. ಶಾಸ್ತ್ರಿ ಸರ್ಕಲ್‌ ಅಭಿವೃದ್ಧಿಗೆ ಇದು ತೊಡಕಾಗಿದೆ. ನಗರಕ್ಕೆ ಪ್ರವೇಶಿಸುವ ಭಾಗವೇ ಹೊಂಡಗುಂಡಿಗಳಿಂದ ಕೂಡಿದೆ. ಪುರಸಭೆಗೂ ಅಭಿವೃದ್ಧಿ ಮಾಡಲಾಗು ತ್ತಿಲ್ಲ ಎಂದು ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಹೇಳಿದರು. ಸರ್ವಿಸ್‌ ರಸ್ತೆಗಳಿಗೆ ಎ.10ರ ಒಳಗೆ ಡಾಮರು ಹಾಕಿಸಬೇಕು ಎಂದು ಎಸಿ ಹೇಳಿದರು. ಶಾಸ್ತ್ರಿ ಸರ್ಕಲ್‌ ಬಳಿ ಅರ್ಧ ಮೀಟರ್‌ ತಗ್ಗಿಸಿ ಅನಂತರವೇ ಡಾಮರು ಹಾಕಬೇಕಿದೆ. ಹೊಸದಾಗಿ ವಿನ್ಯಾಸ ಮಾಡಿದ ಮಾದರಿಯಲ್ಲಿ ಸರ್ವಿಸ್‌ ರಸ್ತೆ ಅಭಿವೃದ್ಧಿ ಆಗಲಿದೆ. ಆದ್ದರಿಂದ ಎ.10ರೊಳಗೆ ಕಷ್ಟ ಎಂದು ರಾಷ್ಟ್ರೀಯ ಹೆದ್ದಾರಿಯ ಎಂಜಿನಿಯರ್‌ ಅನಿರುದ್ಧ ಕಾಮತ್‌ ಹೇಳಿದರು. ರಸ್ತೆ ಮತ್ತಷ್ಟು ಆಳವಾದರೆ ಚರಂಡಿಗೆ ನೀರು ಹೇಗೆ ಹರಿಯುತ್ತದೆ, ನೀರು ನಿಂತು ಸಮಸ್ಯೆಯಾದರೆ ಯಾರು ಹೊಣೆ ಎಂದು ಗೋಪಾಲಕೃಷ್ಣ ಶೆಟ್ಟಿ ಪ್ರಶ್ನಿಸಿದರು. ಎ.30ರ ಒಳಗೆ ಸಮಸ್ಯೆ ಆಗದಂತೆ ಡಾಮರು ಕಾಮಗಾರಿ ಮುಗಿಸುವಂತೆ ಎಸಿ ನಿರ್ಣಯ ಮಾಡಿಸಿದರು.

ಚರಂಡಿ ಸ್ವಚ್ಛತೆ

ಫ್ಲೈಓವರ್‌ ಮೇಲಿಂದ ನೀರು ಸರಿಯಾಗಿ ಹರಿಯದೇ ಸರ್ವಿಸ್‌ ರಸ್ತೆ ಮೇಲಿನ ವಾಹನ ಸವಾರರ ಮೇಲೆ ಬೀಳುತ್ತದೆ. ಈ ಬಗ್ಗೆ ಸದನದಲ್ಲೂ ಪ್ರಶ್ನೆಯಾಗಿದೆ. ಸರಿಪಡಿಸಬೇಕು ಎಂದು ಎಸಿ ಸೂಚಿಸಿದರು. ಬಸ್ರು ರು ಮೂರುಕೈ ಬಳಿ ರಸ್ತೆಯಲ್ಲಿ ನೀರು ನಿಲ್ಲುತ್ತದೆ ಎಂದು ಗೋಪಾಲಕೃಷ್ಣ ಶೆಟ್ಟಿ ಹೇಳಿದರು. ಅಲ್ಲಿ ಕಾಮಗಾರಿ ನಡೆಸಲು ಸ್ಥಳೀಯರ ವಿರೋಧ ಇದೆ ಎಂದು ಶಿವಪ್ರಸಾದ್‌ ರೈ ಹೇಳಿದರು. ಶಾಸಕರ ಪ್ರಯತ್ನದಿಂದ ತಲಾ 50 ಲಕ್ಷ ರೂ. ವೆಚ್ಚದಲ್ಲಿ ಎರಡೂ ಬದಿ ಚರಂಡಿ ಮಾಡಿಸಲಾಗಿದೆ ಎಂದು ಮುಖ್ಯಾಧಿಕಾರಿ ಹೇಳಿದರು. ಕಾಮಗಾರಿಗೆ ಯಾರೂ ಅಡ್ಡಿಪಡಿಸುವಂತಿಲ್ಲ. ಅವಶ್ಯವಿದ್ದರೆ ಪೊಲೀಸ್‌ ಭದ್ರತೆ ನೀಡಲಾಗುವುದು. ಚರಂಡಿ ಸ್ವತ್ಛತೆ, ಸರ್ವಿಸ್‌ ರಸ್ತೆಯಿಂದ ಸರಾಗವಾಗಿ ಚರಂಡಿಗೆ ನೀರು ಹರಿಯುವಂತೆ ಮಾಡಿ ಎಂದು ಎಸಿ ಹೇಳಿದರು.

ಸರ್ಕಲ್‌

ಹಾಲಾಡಿ, ಸಿದ್ದಾಪುರ ಸರ್ಕಲ್‌ ಬಹಳ ಆಕರ್ಷಣೀಯವಾಗಿದೆ. ಇಷ್ಟು ದೊಡ್ಡ ನಗರ ಕುಂದಾಪುರ ನಗರದ ವೃತ್ತ ಹಾಳುಕೊಂಪೆಯಂತಿದೆ ಎಂದು ತಹಶೀಲ್ದಾರ್‌ ಹೇಳಿದರು. ಸರ್ಕಲ್‌ ನಿರ್ಮಾಣಕ್ಕೆ ಪುರಸಭೆ ಯೋಜನೆ ರೂಪಿಸಿದೆ ಎಂದು ಮುಖ್ಯಾಧಿಕಾರಿ ಹೇಳಿದರು. ಸರ್ಕಲ್‌ವರೆಗೆ ರಸ್ತೆ ಅಗೆತ ನಡೆದು ಅರ್ಧ ಮೀ. ಆಳವಾಗಿ ಡಾಮರು ಹಾಕಬೇಕಿದೆ ಎಂದು ಎಂಜಿನಿಯರ್‌ ಹೇಳಿ, ಅದಾದ ಬಳಿಕವೇ ವೃತ್ತದ ಕಾಮಗಾರಿ ನಡೆಸಿ ಎಂದು ಎಸಿ ಸೂಚನೆ ನೀಡಿದರು. ಎಎಸ್‌ಐ ಸುಧಾಕರ್‌ ಉಪಸ್ಥಿತರಿದ್ದರು. ‌

ಸಮಯಮಿತಿ

ಡಿಸಿಯವರು ನೇಮಿಸಿದಂತೆ ನನ್ನ ಅಧ್ಯಕ್ಷತೆಯ ಸಮಿತಿ ಸಭೆ ನಡೆಸಲಾಗಿದ್ದು ಎ.10ರೊಳಗೆ ಪ್ರವೇಶಕ್ಕೆ ತೆರವುಗೊಳಿಸುವಂತೆ ಸೂಚಿಸಲಾಗಿದೆ. 1 ತಿಂಗಳ ಪ್ರಾಯೋಗಿಕ ಅವಧಿಯಲ್ಲಿ ಸಾರ್ವಜನಿಕರು ಯಾವುದೇ ಅವಘಡ ಆಗದಂತೆ, ಅವಸರ ಮಾಡದೇ ಸಹಕರಿಸಬೇಕು. ನಗರಕ್ಕೊಂದು ಸ್ವಾಗತ ಕಮಾನು, ದೀಪಗಳ ಅಳವಡಿಕೆ ಸೇರಿದಂತೆ ಎಲ್ಲ ವಿಚಾರ ಚರ್ಚಿಸಿ ಸಮಯಮಿತಿ ಹೇರಲಾಗಿದೆ. ಮಾಡದಿದ್ದರೆ ಕೇಸು ಹಾಕಲಾಗುವುದು. -ಕೆ.ರಾಜು, ಸಹಾಯಕ ಕಮಿಷನರ್‌, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next