Advertisement

ಬರ್ತ್‌ಡೇ ಗಿಫ್ಟ್‌ ಚೆಕ್‌ನ್ನು ನೆರೆ ಸಂತ್ರಸ್ತರ ನಿಧಿಗೆ ಹಸ್ತಾಂತರಿಸಿದ 10ರ ಬಾಲಕಿ

10:01 AM Aug 27, 2019 | Team Udayavani |

ಮಹಾನಗರ: ಬರ್ತ್‌ಡೇ ಅಂದರೆ ಕೇಕ್‌, ಹೊಸ ದಿರಿಸು – ಸ್ವಂತಕ್ಕಾಗಿ ಕೊಂಡು ಸಂಭ್ರಮಿಸದ ಮಕ್ಕಳ್ಯಾರು! ಅದು ಸಾಮಾನ್ಯ ರೂಢಿ. ಆದರೆ ಇಲ್ಲೊಬ್ಬಳು 10 ವರ್ಷದ ಬಾಲಕಿ, ತನ್ನ ಜನ್ಮದಿನಕ್ಕೆ ಅಜ್ಜಿ ನೀಡಿದ 10 ಸಾವಿರ ರೂ. ಉಡುಗೊರೆ ಹಣವನ್ನು ಪ್ರವಾಹ ಸಂತ್ರಸ್ತರ ನೆರವಿಗೆ ದೇಣಿಗೆಯಾಗಿ ನೀಡಿ ವಿಭಿನ್ನತೆ ಮೆರೆದಿದ್ದಾಳೆ.

Advertisement

ಹುಟ್ಟುಹಬ್ಬದ ಸಂತೋಷವನ್ನು ನೆರೆ ಸಂತ್ರಸ್ತರಿಗೆ ನೆರವಿನ ಮೂಲಕ ಇಮ್ಮಡಿಸಿಕೊಂಡ ಈಕೆ ತಲಪಾಡಿ ಸಮೀಪದ ಕಿನ್ಯಾದಲ್ಲಿರುವ ಶಾರದಾ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಸನ್ಮತಿ.

ಕೆಲವುದಿನಗಳಿಂದ ಪ್ರತಿನಿತ್ಯ ಮಾಧ್ಯಮಗಳಲ್ಲಿ ನೆರೆ ಸಂತ್ರಸ್ತರ ಬವಣೆಯನ್ನು ಗಮನಿಸುತ್ತಿದ್ದ ಈಕೆ ಮನೆ ಮಂದಿಯೂ ಪರಿಹಾರ ಕಾರ್ಯಕ್ಕೆ ನೆರವಾದ ಬಗ್ಗೆ ತಿಳಿದು ತನ್ನದೂ ಅಳಿಲ ಸೇವೆ ಇರಬೇಕು ಎಂದು ನಿರ್ಧರಿಸಿದ್ದಳು.

ಆ. 25ರಂದು ಈಕೆಯ ಜನ್ಮದಿನ. ತಂದೆ- ತಾಯಿ ಉಡುಗೊರೆಯಾಗಿ ಹೊಸ ಉಡುಗೆ ನೀಡಿದ್ದರು. ಕುತ್ತಾರು ಪದವಿನ ಮನೆಯಲ್ಲಿ ಜನ್ಮದಿನಾಚರಣೆಯೂ ನಡೆದಿತ್ತು. ಅಜ್ಜಿ ತನ್ನ ಉಡುಗೊರೆಯಾಗಿ 10 ಸಾವಿರ ರೂ.ಗಳ ಚೆಕ್‌ ನೀಡಿದ್ದರು.

ಸೋಮವಾರ ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ಶಾಲಾ ಸಮವಸ್ತ್ರದಲ್ಲೇ ತೆರಳಿದ ಸನ್ಮತಿ ಅಜ್ಜಿ ಕೊಟ್ಟ ಚೆಕ್ಕನ್ನು ಜಿಲ್ಲಾಧಿಕಾರಿಗೆ ನೀಡಿ ಅಚ್ಚರಿಗೊಳಿಸಿದಳು. ಬಾಲಕಿಯ ಹೃದಯವಂತಿಕೆಗೆ ಮೆಚ್ಚಿ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ಬೆನ್ನು ತಟ್ಟಿದರು.

Advertisement

ಚೆಕ್‌ ಜತೆಗೆ “ಬರ್ತ್‌ಡೇ ನೆನಪಿನಲ್ಲಿ ನೆರೆ ಸಂತ್ರಸ್ತರಿಗೆ ನನ್ನ ಕಿಂಚಿತ್‌ ಕಾಣಿಕೆ’ ಎಂಬ ಒಕ್ಕಣೆಯ ಪತ್ರ ಸನ್ಮತಿಯ “ಸನ್ಮತಿ’ಗೆ ಸಾಕ್ಷಿ ನುಡಿದಿದೆ. ಮಂಗಳೂರಿನ ಜಿಲ್ಲಾ ಪ.ಪೂ. ಶಿಕ್ಷಣ ಇಲಾಖೆಯಲ್ಲಿ ಶಾಖಾಧಿಕಾರಿ ಆಗಿರುವ ನಿತಿನ್‌ ಅವರ ದ್ವಿತೀಯ ಪುತ್ರಿಯಾದ ಸನ್ಮತಿ ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರ ಮೊಮ್ಮಗಳು.

Advertisement

Udayavani is now on Telegram. Click here to join our channel and stay updated with the latest news.

Next