ಬೆಂಗಳೂರು: ರಾಜ್ಯದ 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಕೆಎಸ್‌ಇಎಬಿ)ಗೆ ಸೂಚನೆ ನೀಡಿದೆ.
ಕಳೆದ ವರ್ಷ 5ನೇ ಮತ್ತು 8ನೇ ತರಗತಿ ಮಕ್ಕಳಿಗೆ ಮೌಲ್ಯಾಂಕನ ಪರೀಕ್ಷೆ ಪ್ರಾರಂಭಿಸಿದ್ದ ಸರಕಾರ ಈಗ 9ನೇ ತರಗತಿ ವಿದ್ಯಾರ್ಥಿಗಳಿಗೂ ಸಂಕಲನಾತ್ಮಕ ಮೌಲ್ಯಮಾಪನವನ್ನು ವಿಸ್ತರಿಸಿದೆ. ಹಾಗೆಯೇ 11ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಸಲಿದೆ. ಪರೀಕ್ಷೆ ಶಾಲಾ ಮತ್ತು ಕಾಲೇಜು ಹಂತದಲ್ಲಿಯೇ ನಡೆಯಲಿದ್ದು, ಆಯಾ ವಿದ್ಯಾರ್ಥಿಗಳು ಓದುತ್ತಿರುವ ಶಾಲಾ ಕಾಲೇಜುಗಳೇ ಅವರ ಪರೀಕ್ಷಾ ಕೇಂದ್ರ ವಾಗಿರಲಿದೆ. ರಾಜ್ಯ ಮಟ್ಟದಲ್ಲಿ ಪ್ರಶ್ನೆಪತ್ರಿಕೆ ತಯಾರಾಗಲಿದೆ.
9ನೇ ತರಗತಿಯ ಸಂಕಲನಾತ್ಮಕ ಮೌಲ್ಯಮಾಪನದ ಪ್ರಶ್ನೆಪತ್ರಿಕೆ ಗಳನ್ನು ಕೆಎಸ್‌ಇಎಬಿಯು ಸಿದ್ಧಪಡಿಸಿ ಕರ್ನಾಟಕ ಶಾಲಾ ಗುಣ ಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು (ಕೆಎಸ್‌ಕ್ಯುಎಎಸಿ) ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಲಾಗಿನ್‌ಗೆ ಕಳುಹಿಸಿ ಕೊಡಲಿದೆ. ಅದೇ ರೀತಿ 11ನೇ ತರ ಗತಿಯ ಪ್ರಶ್ನೆ ಪತ್ರಿಕೆಯನ್ನು ಪಿಯು ಪರೀಕ್ಷಾ ವಿಭಾಗದಿಂದ ಸಿದ್ಧಪಡಿಸಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ಯ ಜಿಲ್ಲಾ ಉಪನಿರ್ದೇಶಕರ ಲಾಗಿನ್‌ಗೆ ಕಳುಹಿಸಲಾಗುತ್ತದೆ.
9ನೇ ತರಗತಿಯ ಸಂಕಲನಾತ್ಮಕ ಮೌಲ್ಯಮಾಪನ ಸಂದರ್ಭದಲ್ಲಿ ಸಮೀಪದ ಶಾಲೆಗಳ ಶಿಕ್ಷಕರನ್ನು ಕೊಠಡಿ ಮೇಲ್ವಿಚಾರಕರನ್ನಾಗಿ ನೇಮಿಸಬೇಕು. 11ನೇ ತರಗತಿ ಪರೀಕ್ಷೆಗೆ ಆಯಾ ಕಾಲೇಜಿನ ಉಪನ್ಯಾಸಕರನ್ನೇ ಕೊಠಡಿ ಮೇಲ್ವಿಚಾರಕರನ್ನಾಗಿ ನೇಮಿಸಬೇಕು. 9ನೇ ತರಗತಿ ಸಂಕಲನಾತ್ಮಕ ಮೌಲ್ಯಮಾಪನವನ್ನು ತಾಲೂಕು ಹಂತದಲ್ಲಿ ನಡೆಸಲು ಸೂಚಿಸಲಾಗಿದೆ.
ಸೂಚನೆಗಳೇನು?
-9ನೇ ತರಗತಿಯ ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣ ಮಾಡುವಂತಿಲ್ಲ.
-ಫಲಿತಾಂಶವನ್ನು ವಿದ್ಯಾರ್ಥಿ ಮತ್ತು ಪೋಷಕರಿಗೆ ಮಾತ್ರ ತಿಳಿಸಬೇಕು.
-11ನೇ ತರಗತಿ ವಿದ್ಯಾರ್ಥಿ ಅನುತ್ತೀರ್ಣಗೊಂಡರೆ ಪೂರಕ ಪರೀಕ್ಷೆಯನ್ನು ಆಯಾ ಕಾಲೇಜು ಹಂತದಲ್ಲೇ ನಡೆಸಬೇಕು.
-11ನೇ ತರಗತಿ ವಾರ್ಷಿಕ ಪರೀಕ್ಷೆಯ ಮೌಲ್ಯಮಾಪನ ವನ್ನು ಸಂಬಂಧಿಸಿದ ಕಾಲೇಜಿನಲ್ಲೇ ನಡೆಸಬೇಕು.