Advertisement

ಲೋಕಲ್‌ ರೈಲುಗಳಲ್ಲಿ 6 ವರ್ಷದಲ್ಲಿ 99ಕೋ.ರೂ.ಮೌಲ್ಯದ ಮೊಬೈಲ್‌ ಕಳವು

12:49 PM May 15, 2019 | Team Udayavani |

ಮುಂಬಯಿ: ಮುಂಬಯಿಗರ ಜೀವನಾಡಿ ಎಂದೇ ಪರಿಗಣಿಸಲಾಗುವ ಉಪನಗರ ಲೋಕಲ್‌ ರೈಲುಗಳು ಈಗ ಮೊಬೈಲ್‌ ಕಳ್ಳತನದ ಕೇಂದ್ರವಾಗಿ ಮಾರ್ಪಟ್ಟಿವೆ. ರೈಲ್ವೇ ಪೊಲೀಸರ ಮಾಹಿತಿ ಪ್ರಕಾರ, ಲೋಕಲ್‌ ರೈಲುಗಳಲ್ಲಿ ಕಳೆದ 6 ವರ್ಷಗಳಲ್ಲಿ 99.46 ಕೋಟಿ ರೂ. ಮೌಲ್ಯದ ಮೊಬೈಲ್‌ ಫೋನ್‌ಗಳು ಕಳವಾಗಿವೆ. 2013ರಿಂದ 2018ರ ನಡುವೆ ಲೋಕಲ್‌ ರೈಲುಗಳಲ್ಲಿ ಮೊಬೈಲ್‌ ಕಳ್ಳತನದ 59,904 ಪ್ರಕರಣಗಳು ದಾಖಲಾಗಿವೆ. ಕಳವಾಗಿರುವ ಈ ಮೊಬೈಲ್‌ಗ‌ಳ ಒಟ್ಟು ಮೌಲ್ಯ ಸುಮಾರು 99,46,00,000 ರೂ.ಗಳಷ್ಟಿದೆ ಎಂದು ತಿಳಿಸಿವೆ.

Advertisement

ಕೇವಲ ಶೇ.10ರಷ್ಟು ಮೊಬೈಲ್‌ ಪತ್ತೆ
ಮಾಹಿತಿಯ ಹಕ್ಕು ಅಡಿಯಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಕಳವಾಗಿರುವ ಈ ಮೊಬೈಲ್‌ ಫೋನ್‌ಗಳ ಪೈಕಿ ಕೇವಲ ಶೇ.10ರಷ್ಟು ಅಂದರೆ ಸುಮಾರು 8,868 ಮೊಬೈಲ್‌ ಫೋನ್‌ಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿ¨ªಾರೆ. ಇದರರ್ಥ ಪೊಲೀಸರಿಗೆ ಈವರಿಗೆ ಸುಮಾರು 10 ಕೋ.ರೂ. ಮೌಲ್ಯದ ಮೊಬೈಲ್‌ ಫೋನ್‌ಗಳು ದೊರೆತಿವೆ. ಆರ್‌ಟಿಐ ಕಾರ್ಯಕರ್ತ ಶಕೀಲ್‌ ಅಹ್ಮದ್‌ ಶೇಖ್‌ ರೈಲ್ವೇ ಪೊಲೀಸ್‌ನಿಂದ 2013ರಿಂದ 2018ರ ನಡುವೆ ಲೋಕಲ್‌ ರೈಲುಗಳಲ್ಲಿ ನಡೆದ ಮೊಬೈಲ್‌ ಕಳ್ಳತನದ ಪ್ರಕರಣಗಳು ಹಾಗೂ ಕಳವಾಗಿರುವ ಫೋನ್‌ಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರಿಗೆ ಸಿಕ್ಕಿರುವ ಯಶಸ್ವಿಯ ಬಗ್ಗೆ ಮಾಹಿತಿ ಕೋರಿದ್ದರು. ಅಲ್ಲದೆ, ಆರ್‌ಟಿಐ ಅಡಿಯಲ್ಲಿ ಅವರು ಕಳ್ಳತನವಾಗಿರುವ ಮೊಬೈಲ್‌ಗ‌ಳ ಬೆಲೆಗಳ ವಿವರಗಳನ್ನು ಕೂಡ ಕೇಳಿದ್ದರು.

ಶೇಖ್‌ಗೆ ಆರ್‌ಟಿಐ ಅಡಿಯಲ್ಲಿ ಲಭ್ಯವಾಗಿರುವ ಮಾಹಿತಿಯಲ್ಲಿ 6 ವರ್ಷಗಳಲ್ಲಿ ಲೋಕಲ್‌ ರೈಲುಗಳಿಂದ 99.46 ಕೋ.ರೂ. ಮೌಲ್ಯದ ಮೊಬೈಲ್‌ ಫೋನ್‌ಗಳು ಕಳ್ಳತನವಾಗಿರುವ ವಿಷಯ ತಿಳಿದುಬಂದಿದೆ.

2018ರಲ್ಲಿ ಅತ್ಯಧಿಕ ಮೊಬೈಲ್‌ ಕಳವು
2013ರಲ್ಲಿ ಲೋಕಲ್‌ ರೈಲುಗಳಲ್ಲಿ 1,045 ಮೊಬೈಲ್‌ಗ‌ಳು ಕಳವಾಗಿವೆ. ಅಂದರೆ 2013ರಲ್ಲಿ ಪ್ರತಿ ದಿನ ಮೂರು ಮೊಬೈಲ್‌ ಕಳ್ಳತನದ ಪ್ರಕರಣಗಳು ವರದಿಯಾಗುತ್ತಿದ್ದವು. ಅದೇ, 2014ರಲ್ಲಿ ಮೊಬೈಲ್‌ ಕಳ್ಳತನದ ಸಂಖ್ಯೆ 1,518 ಕ್ಕೆ ಏರಿತು. 2015ರಲ್ಲಿ ಮೊಬೈಲ್‌ ಕಳ್ಳತನದ ಸಂಖ್ಯೆ 2,092ಕ್ಕೆ ಏರಿಕೆಯಾದರೆ, 2016ರಲ್ಲಿ ಈ ಸಂಖ್ಯೆ ಸ್ವಲ್ಪ ಕಡಿಮೆಯಾಗುತ್ತ 2,009ಕ್ಕೆ ಇಳಿದಿತ್ತು. ಅದೇ, 2017ರಲ್ಲಿ ಮೊಬೈಲ್‌ ಕಳ್ಳತನದ ಪ್ರಕರಣಗಳಲ್ಲಿ ಭಾರೀ ವೃದ್ಧಿ ಕಂಡುಬಂದಿದ್ದು, ಈ ವರ್ಷ 20,734 ಮೊಬೈಲ್‌ ಫೋನ್‌ಗಳನ್ನು ಕಳವು ಮಾಡಲಾಗಿದೆ. ಅದೇ, 2018ರಲ್ಲಿ ಅತ್ಯಧಿಕ 32,476 ಮೊಬೈಲ್‌ ಫೋನ್‌ಗಳು ಕಳವು ಆಗಿವೆ. ಅಂದರೆ, 2018ರಲ್ಲಿ ಲೋಕಲ್‌ ರೈಲುಗಳಲ್ಲಿನ ದೈನಂದಿನವಾಗಿ ಸರಾಸರಿ 89 ಮೊಬೈಲ್‌ ಫೋನ್‌ಗಳು ಕಳವಾಗಿವೆ. ಈ ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿರುವ ಆರ್ಟಿಐ ಕಾರ್ಯಕರ್ತ ಶಕೀಲ್‌ ಅಹ್ಮದ್‌ ಶೇಖ್‌, ಲೋಕಲ್‌ ರೈಲುಗಳಲ್ಲಿ ಮೊಬೈಲ್‌ ಫೋನ್‌ ಕಳ್ಳತನದ ಘಟನೆಗಳಿಗೆ ಲಗಾಮು ಹಾಕಲು ರೈಲ್ವೇ ಪೊಲೀಸರು ವಿಶೇಷ ಕಾರ್ಯ ಪಡೆಯೊಂದನ್ನು ರಚಿಸಬೇಕೆಂದು ಒತ್ತಾಯಿಸಿದ್ದಾರೆ.

ಪ್ರತಿನಿತ್ಯ 70 ಲಕ್ಷ ರೈಲು ಪ್ರಯಾಣಿಕರು

Advertisement

ಮುಂಬಯಿಯಲ್ಲಿ ಲೋಕಲ್‌ ರೈಲು ಮಧ್ಯ, ಪಶ್ಚಿಮ ಮತ್ತು ಹಾರ್ಬರ್‌ ಎಂಬ ಮೂರು ಮುಖ್ಯ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಪಶ್ಚಿಮ ರೈಲ್ವೆಯು ಚರ್ಚ್‌ಗೇಟ್‌ನಿಂದ ಶುರುವಾಗಿ ಡಹಾಣು ತನಕ (37 ನಿಲ್ದಾಣ), ಮಧ್ಯ ರೈಲ್ವೇ ಛತ್ರಪತಿ ಶಿವಾಜಿ ಟರ್ಮಿನಸ್‌ನಿಂದ ಆರಂಭವಾಗಿ ಖೊಪೋಲಿ (41 ನಿಲ್ದಾಣ) ಮತ್ತು ಹಾರ್ಬರ್‌ ಮಾರ್ಗ ಕಲ್ಯಾಣ್‌ನಿಂದ ಕಸಾರ (12 ನಿಲ್ದಾಣ) ಮತ್ತು ಸಿಎಸ್‌ಎಂಟಿ ಪನ್ವೇಲ್‌ (25 ನಿಲ್ದಾಣ) ಹಾಗೂ ಟ್ರಾನ್ಸ್‌ ಹಾರ್ಬರ್‌ ಥಾಣೆಯಿಂದ ವಾಶಿ ನಡುವೆ (8 ನಿಲ್ದಾಣ) ಕಾರ್ಯಾಚರಣೆ ನಡೆಸುತ್ತಿದೆ. ಒಟ್ಟು ನಿಲ್ದಾಣಗಳ ಸಂಖ್ಯೆ 123. ಮುಂಬಯಿ ಲೋಕಲ್‌ ರೈಲುಗಳಲ್ಲಿ ದೈನಂದಿನ ಸುಮಾರು 70 ಲಕ್ಷ ಜನರು ಪ್ರಯಾಣಿಸುತ್ತಾರೆ.

ಕಳವಾಗಿರುವ ಮೊಬೈಲ್‌ಗ‌ಳ ಸಂಖ್ಯೆ

ವರ್ಷ ಪ್ರಮಾಣ
2013 1,045
2014 1,518
2015 2,092
2016 2,009
2017 20,734
2018 32,476

Advertisement

Udayavani is now on Telegram. Click here to join our channel and stay updated with the latest news.

Next