ದುಬಾೖ: “ಮರ ಮುಪ್ಪಾದರೇನು ಹುಳಿ ಮುಪ್ಪೇ’ ಎಂಬ ಮಾತಿನಂತೆ, ದುಬೈನಲ್ಲಿರುವ ಭಾರತ ಮೂಲದ 97 ವರ್ಷದ ವೃದ್ಧರೊಬ್ಬರು ಈ ಇಳಿ ವಯಸ್ಸಿನಲ್ಲಿ ತಮ್ಮ ಚಾಲನಾ ಪರವಾನಗಿಯನ್ನು ನವೀಕರಣ ಗೊಳಿಸಿಕೊಂಡಿದ್ದಾರೆ!
ಅವರ ಹೆಸರು ಧುಂಜಿಬೊಯ್ ಮೆಹ್ತಾ. 1922ರಲ್ಲಿ ಜನಿಸಿರುವ ಇವರು ತಮ್ಮ ಚಾಲನಾ ಪರವಾನಗಿಯನ್ನು ನಿಗದಿತ ಅವಧಿಯ ನಂತರ ನವೀಕರಣಗೊಳಿಸುತ್ತಾ ಬಂದಿದ್ದರು. 100ನೇ ವರ್ಷದ ಸನಿಹಕ್ಕೆ ಬಂದಿದ್ದರೂ, ಅವರಲ್ಲಿನ ಚಾಲನಾ ಹವ್ಯಾಸವಿನ್ನೂ ಹರೆಯದ ಉತ್ಸಾಹದಲ್ಲೇ ಇದೆ. ಅದೇ ಕಾರಣಕ್ಕಾಗಿ, ಇತ್ತೀಚೆಗೆ, ಮೆಹ್ತಾ ತಮ್ಮ ಚಾಲನಾ ಪರವಾನಗಿಯನ್ನು
ನವೀಕರಣಗೊಳಿಸಿಕೊಂಡಿದ್ದಾರೆ. ಮುಂದಿನ ನಾಲ್ಕು ವರ್ಷದವರೆಗೆ (2022ರವರೆಗೆ) ಇವರಿಗೆ ಚಾಲನಾ ಪರವಾನಗಿ ನೀಡಲಾಗಿದೆ. ಈ ಮೂಲಕ, ದುಬೈ ರಸ್ತೆಗಳಲ್ಲಿ ಕಾರು ಓಡಿಸಬಹುದಾದ ಅತಿ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಮೆಹ್ತಾ ಪಾತ್ರರಾಗಿದ್ದಾರೆ.
ಅತ್ತ, ಬ್ರಿಟನ್‌ನಲ್ಲಿ ಇತ್ತೀಚೆಗೆ ರಾಣಿ 2ನೇ ಎಲಿಜಬೆತ್ ಅವರ ಪತಿ ಪ್ರಿನ್ಸ್ ಫಿಲಿಪ್, ತಮಗೀಗಾಗಲೇ 97 ವರ್ಷ ವಯಸ್ಸಾಗಿದೆ ಎಂದು ಹೇಳಿ, ತಮ್ಮ ಲೈಸನ್ಸ್‌ನು° ಸರಕಾರಕ್ಕೆ ಹಿಂದಿರುಗಿಸಿದ್ದರು. ಇದಕ್ಕೆ ತದ್ವಿರುದ್ಧ ಎಂಬಂತೆ, ದುಬೈನಲ್ಲಿ 97 ವರ್ಷದ ಮೆಹ್ತಾ, ತಮ್ಮ ಚಾಲನಾ ಪರವಾನಗಿ ನವೀಕರಣ ಗೊಳಿಸಿಕೊಂಡು ಸುದ್ದಿಯಾಗಿದ್ದಾರೆ. ಅಂದ ಹಾಗೆ, ಭಾರತೀಯ ಮೂಲವಿದ್ದರೂ, ಕೀನ್ಯಾದ ಪ್ರಜೆಯೆಂದೇ ಗುರುತಿಸಿಕೊಳ್ಳುವ ಇವರು ಅವಿವಾಹಿತರಾಗಿದ್ದು, 1980ರಲ್ಲಿ ದುಬೈಗೆ ಬಂದು ನೆಲೆಸಿದ್ದರು.