Advertisement

Dubai: ಫಾರ್ಚೂನ್‌ ಗ್ರೂಪ್‌ ಆಫ್‌ ಹೋಟೆಲ್ಸ್ ಗೆ ವಂಚನೆ: ಆರೋಪಿ 3 ದಿನ ಪೊಲೀಸ್‌ ಕಸ್ಟಡಿಗೆ

12:48 AM Oct 14, 2024 | Team Udayavani |

ಉಡುಪಿ: ಅನಿವಾಸಿ ಭಾರತೀಯ, ತಾಲೂಕಿನ ವಕ್ವಾಡಿ ಮೂಲದ ಉದ್ಯಮಿ ಪ್ರವೀಣ್‌ ಕುಮಾರ್‌ ಶೆಟ್ಟಿ ಮಾಲಕತ್ವದ ದುಬಾೖಯ ಹೊಟೇಲೊಂದಕ್ಕೆ ಅಕೌಂಟೆಂಟ್‌ ಆಗಿ ಸೇರಿ 2.5 ಕೋ.ರೂ. ಗೂ ಅಧಿಕ ಹಣ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಉಡುಪಿ ಸೆನ್‌ ಠಾಣೆ ಪೊಲೀಸರು ಮೈಸೂರು ಜಿಲ್ಲೆಯ ನಂಜನಗೂಡು ಬಳಿ ಬಂಧಿಸಿದ್ದಾರೆ.

Advertisement

ಬಾರ್ಕೂರು ಮೂಲದ ನಾಗೇಶ್‌ ಪೂಜಾರಿ (31) ಬಂಧಿತ ಆರೋಪಿ.

ಈತನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಈತನನ್ನು ಅ.16 ರವರೆಗೆ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜೆ.ಎಂ.ಎಫ್‌.ಸಿ ನ್ಯಾಯಾಲಯದಲ್ಲಿ ಆರೋಪಿ ಪಡೆದಿದ್ದ ಜಾಮೀನನ್ನು ಜಿಲ್ಲಾ ಸೆಶನ್ಸ್‌ ನ್ಯಾಯಾಲಯ ಹಾಗೂ ರಾಜ್ಯ ಉಚ್ಚ ನ್ಯಾಯಾಲಯ ರದ್ದುಪಡಿಸಿತ್ತು. ಈ ಹಿನ್ನೆಲೆ ಯಲ್ಲಿ ತಲೆಮರೆಸಿ ಕೊಂಡಿದ್ದ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ಹಿನ್ನೆಲೆ
ದುಬೈನ ಫಾರ್ಚೂನ್‌ ಗ್ರೂಪ್‌ ಆಫ್‌ ಹೊಟೇಲ್ಸ ಸಂಬಂಧಿತ ಹೊಟೇಲೊಂದರಲ್ಲಿ ಉದ್ಯೋಗಕ್ಕೆ ಸೇರಿದ್ದ ನಾಗೇಶ್‌ ಪೂಜಾರಿ 2.5ಕೋ.ರೂ.ಗೂ ಅಧಿಕ ಹಣ ವಂಚಿಸಿದ ಆರೋಪಕ್ಕೆ ಗುರಿಯಾಗಿದ್ದ. ಹೊಟೇಲ್‌ ಮ್ಯಾನೇಜರ್‌ ಸುನೀಲ್‌ ಕುಮಾರ್‌ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣವು ಉಡುಪಿ ಸೆನ್‌ ಠಾಣೆಗೆ ವರ್ಗಾವಣೆಗೊಂಡಿತ್ತು.

ಈ ಸಂಬಂಧ ಆರೋಪಿ ಹೈಕೋರ್ಟ್‌ ನಲ್ಲಿ ತನಿಖೆ ಸ್ಥಗಿತಗೊಳಿ ಸಲು ಕೋರಿ ಅರ್ಜಿ ಸಲ್ಲಿಸಿದ್ದ. ಅದರೆ ಕೋರ್ಟ್‌ ಅರ್ಜಿಯನ್ನು ಹಿಂದಿನ ವರ್ಷ ವಜಾಗೊಳಿಸಿತ್ತು. ಬಳಿಕ ಆರೋಪಿ ಕುಂದಾಪುರದಲ್ಲಿರುವ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯೂ ತಿರಸ್ಕೃತವಾಗಿತ್ತು. ಬಳಿಕ ಉಳಿದ ನ್ಯಾಯಾಲಯದ ಆದೇಶಗಳನ್ನು ಮರೆಮಾಚಿ ಬ್ರಹ್ಮಾವರದ ಜೆ.ಎಂ.ಎಫ್‌.ಸಿ ನ್ಯಾಯಾ ಲಯದಲ್ಲಿ ಶರಣಾಗಿ ಜಾಮೀನು ಪಡೆದಿದ್ದ. ಈ ಆದೇಶವನ್ನು ಸರಕಾರ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು, ನ್ಯಾಯಾಲಯವು ಜಾಮೀನು ರದ್ದುಗೊಳಿಸಿ ಆದೇಶಿಸಿತ್ತು. ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ ಆರೋಪಕ್ಕೆ ಗುರಿಯಾಗಿದ್ದ.

Advertisement
Advertisement

Udayavani is now on Telegram. Click here to join our channel and stay updated with the latest news.

Next