ಬೆಂಗಳೂರು: ಸಾರ್ವಜನಿಕರಿಗೆ ಬೆದರಿಕೆಯೊಡ್ಡುತ್ತಿದ್ದ ಭೂಗತ ಪಾತಕಿ ರವಿ ಪೂಜಾರಿ ಯನ್ನು ಪಶ್ಚಿಮ ಆಫ್ರಿಕಾದ ಸೆನೆಗಲ್‌ನಲ್ಲಿ ಜ.19ರಂದೇ ಬಂಧಿಸಲಾಗಿದೆ. ಸ್ಥಳೀಯ ಸರ್ಕಾರದ ಸಹಕಾರದಲ್ಲಿ ಆತನನ್ನು ರಾಜ್ಯಕ್ಕೆ ಕರೆತರುವ ಕಾರ್ಯ ನಡೆದಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಶುಕ್ರವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಕುಮಾರಸ್ವಾಮಿ, ಭೂಗತ ಪಾತಕಿ ರವಿ ಪೂಜಾರಿ ಹೆಸರಿನಲ್ಲಿ ಶ್ರೀಮಂತರು, ವ್ಯಾಪಾರಿಗಳು, ಬಿಲ್ಡರ್‌ಗಳಿಗೆ ದೂರವಾಣಿ ಕರೆ ಮೂಲಕ ಬೆದರಿಕೆ ಒಡ್ಡಿ ಹಣ ವಸೂಲಿ ಮಾಡಲಾಗುತ್ತಿತ್ತು. ಹಾಗಾಗಿ ನಮ್ಮ ಸರ್ಕಾರ ರಚನೆಯಾದ ಆರಂಭದಲ್ಲೇ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಗುಪ್ತಚರ ಇಲಾಖೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರೊಂದಿಗೆ ಸಭೆ ನಡೆಸಿ ಚರ್ಚಿಸಿದ್ದೆ. ರವಿ ಪೂಜಾರಿ ಯಾವ ಪ್ರದೇಶದಲ್ಲಿ ಕುಳಿತು ದೂರವಾಣಿ ಕರೆ ಮಾಡಿ ಬೆದರಿಸುತ್ತಿದ್ದಾನೆ ಹಾಗೂ ವ್ಯವಹಾರ ನಿರ್ವಹಿಸುತ್ತಿದ್ದಾನೆ ಎಂಬುದನ್ನು ಪತ್ತೆ ಹಚ್ಚುವಂತೆ ಸೂಚಿಸಿದ್ದೆ ಎಂದು ಹೇಳಿದರು.
ಅದರಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಗುಪ್ತಚರ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾದರು. ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಕೇರಳ, ಗುಜರಾತ್ ರಾಜ್ಯಗಳಲ್ಲಿ 2001ರಿಂದ ರವಿ ಪೂಜಾರಿಯ ಚಟುವಟಿಕೆ, ಹಿನ್ನೆಲೆ ಪರಿಶೀಲಿಸ ಲಾಯಿತು. ದೂರವಾಣಿ ಕರೆ ಮೂಲಕ ಬೆದರಿಕೆಯೊಡ್ಡುತ್ತಿದ್ದ ಕಾರಣ ಸಾಕಷ್ಟು ಕೊಲೆಗಳಾಗಿದ್ದು, ಇವರ ಹಣದಾಸೆಗೆ ಹಲವು ಕುಟುಂಬಗಳು ಬೀದಿಪಾಲಾಗಿವೆ. ಹಾಗಾಗಿ ಪೊಲೀಸರು ತೀವ್ರ ಪರಿಶೀಲನೆ ನಡೆಸಿದ್ದರು ಎಂದು ತಿಳಿಸಿದರು. ಅಂತಿಮವಾಗಿ ಪಶ್ಚಿಮ ಆಫ್ರಿಕಾದ ಸೆನೆಗಲ್ ರಾಷ್ಟ್ರದಲ್ಲಿ ರವಿ ಪೂಜಾರಿ ಇರುವುದು ಪತ್ತೆಯಾಯಿತು. ಆ ಮೂಲಕ ರವಿ ಪೂಜಾರಿ ಇತರೆ ಪ್ರದೇಶದಲ್ಲಿ ಕುಳಿತು ಬೆದರಿಕೆಯೊಡ್ಡುತ್ತಿದ್ದ ಎಂಬುದು ಸುಳ್ಳು ಎಂಬುದು ದೃಢಪಟ್ಟಿತು. ಡಿ.30ರಂದು ಕ್ರಿಕೆಟ್ ಪಂದ್ಯಾವಳಿ ಆಯೋಜನೆ, ಕೆಲ ಛಾಯಾಚಿತ್ರಗಳ ಆಧಾರದ ಮೇಲೆ ಪೊಲೀಸರು ಮೂರ್‍ನಾಲ್ಕು ತಿಂಗಳಿನಿಂದ ಆತನ ಮೇಲೆ ನಿಗಾ ವಹಿಸಿದ್ದರು ಎಂದು ಹೇಳಿದರು.
ರವಿ ಪೂಜಾರಿ ಇರುವ ಸ್ಥಳದ ಮಾಹಿತಿ ಪಡೆದ ಬಳಿಕ ಪಶ್ಚಿಮ ಆಫ್ರಿಕಾದಲ್ಲಿನ ಭಾರತದ ರಾಯಭಾರಿ, ಐಎಫ್ಎಸ್ ಅಧಿಕಾರಿ ರಾಜೀವ್ ಅವರನ್ನು ಸಂಪರ್ಕಿಸಲಾಯಿತು. ನಮ್ಮ ಮನವಿಯಂತೆ ಅವರು ಅಲ್ಲಿನ ಪ್ರಧಾನಿ, ಗೃಹ ಸಚಿವರೊಂದಿಗೆ ಚರ್ಚಿಸಿದ್ದು, ಜ.19ರಂದು ಪಾತಕಿಯನ್ನು ಬಂಧಿಸಲಾಗಿದೆ. ಆತನನ್ನು ಕರೆ ತರುವ ನಿಟ್ಟಿನಲ್ಲಿ ಅಲ್ಲಿನ ಗೃಹ ಕಚೇರಿಯೊಂದಿಗೆ ಚರ್ಚಿಸಿ ಮುಂದುವರಿಯಲಾಗುತ್ತಿದೆ. ಮುಂದೆ ಇನ್ನಷ್ಟು ಮಾಹಿತಿ ಬಹಿರಂಗವಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಸಾರ್ವಜನಿಕರಿಗೆ ಬೆದರಿಕೆಯೊಡ್ಡಿ ಆತಂಕ ಸೃಷ್ಟಿಸಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕಾರ್ಯಾಚರಣೆ ನಡೆಸುವ ಮೂಲಕ ಮೈತ್ರಿ ಸರ್ಕಾರದಲ್ಲಿ ಯಶಸ್ಸು ಸಾಧಿಸಲಾಗಿದೆ. ಪೊಲೀಸರ ಕಾರ್ಯ ನಿರ್ವಹಣೆಗೆ ಅಭಿನಂದನೆ ಸಲ್ಲಿ ಸುತ್ತೇನೆ. ಹಾಗೆಯೇ ಸಹಕಾರ ನೀಡಿದ ಪಶ್ಚಿಮ ಆಫ್ರಿಕಾದ ಸೆನೆಗಲ್‌ನಲ್ಲಿನ ಭಾರತದ ರಾಯಭಾ ರಿಗೂ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದೇವೆ. ಮುಂದೆ ರವಿ ಪೂಜಾರಿ ಹಾಗೂ ಆತನ ಹೆಸರಿನಲ್ಲಿ ನಡೆಯುತ್ತಿದ್ದ ಕಾನೂನು ಬಾಹಿರ ಚಟುವಟಿಕೆಗಳಿಗೆ ಸಂಬಂಧಪಟ್ಟಂತೆ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದರು.
97 ಕ್ರಿಮಿನಲ್ ಕೇಸ್
ಪಶ್ಚಿಮ ಆಫ್ರಿಕಾದ ಸೆನೆಗಲ್ ಪೊಲೀಸರ ಬಲೆಗೆ ಬಿದ್ದಿರುವ ದೇಶದ ಮೋಸ್ಟ್ ವಾಂಟೆಂಡ್ ಭೂಗತ ಪಾತಕಿ ರವಿ ಪೂಜಾರಿ ವಿರುದ್ಧ ಕೊಲೆ ಸೇರಿ 97 ಕ್ರಿಮಿನಲ್ ಕೇಸ್‌ಗಳಿವೆ. ಬೆಂಗಳೂರು, ಮಂಗಳೂರು, ಉಡುಪಿ, ಹುಬ್ಬಳ್ಳಿ ಧಾರವಾಡ, ಮೈಸೂರು ಸೇರಿದಂತೆ ವಿವಿದ ಭಾಗಗಳಲ್ಲಿ 97 ಕೇಸ್‌ಗಳಲ್ಲಿ ಆರೋಪಿಯಾಗಿದ್ದಾನೆ. ಬೆಂಗಳೂರಿನಲ್ಲಿ 2007ರಲ್ಲಿ ತಿಲಕ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಶೈಲಜಾ ಹಾಗೂ ಶಬನಮ್ ಡೆವಲಪರ್ನ ರವಿ ಕೊಲೆ ಕೇಸ್ ಸೇರಿ 39 ಕೇಸ್‌ಗಳಿವೆ. ಎಂದು ಅಧಿಕಾರಿ ಮಾಹಿತಿ ನೀಡಿದರು.