Advertisement

ಅನಧಿಕೃತ ಶಾಲೆಗಳು: ಜಿಲ್ಲೆಯಲ್ಲಿ 96 ವಿದ್ಯಾಲಯಗಳಿಗೆ ಬೀಗ!

08:50 AM Mar 26, 2018 | Karthik A |

ಕೇರಳದಲ್ಲಿ ಒಟ್ಟು 1,585 ಅನಧಿಕೃತ ಶಾಲೆಗಳಿಗೆ ನೊಟೀಸ್‌ ಕಳುಹಿಸಲಾಗಿದೆ. ಅನುಮತಿ ಇಲ್ಲದ ಶಾಲೆಗಳನ್ನು ಮುಚ್ಚುವುದರಿಂದ ತಲೆದೋರುವ ಸಮಸ್ಯೆಗಳ ಕುರಿತು ಈಗಾಗಲೇ ಸರಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗಿದೆ. ರಾಜ್ಯದಲ್ಲಿ ಮುಚ್ಚುಗಡೆಗೊಳ್ಳುವ ಶಾಲೆಗಳಿಂದಾಗಿ 3 ಲಕ್ಷದಷ್ಟು ವಿದ್ಯಾರ್ಥಿಗಳ ಹಾಗೂ 2,500ದಷ್ಟು ಅಧ್ಯಾಪಕರ ಮರು ವಿನ್ಯಾಸದ ಬಗ್ಗೆಯೂ ಸಮಾಲೋಚಿಸಲಾಗಿದೆ.

Advertisement

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೇರಳ ರಾಜ್ಯ ಸರಕಾರ, ಸಿಬಿಎಸ್‌ಇ, ಐಸಿಎಸ್‌ಇ ಇವುಗಳ ಅಂಗೀಕಾರ ಇಲ್ಲದೆ ಕಾರ್ಯಾಚರಿಸುತ್ತಿರುವ 96 ಶಾಲೆಗಳ ಅನುಮತಿ ರದ್ದುಗೊಳಿಸಿ ಶಿಕ್ಷಣ ಇಲಾಖೆ ನೊಟೀಸು ಜಾರಿ ಮಾಡಿದೆ. ಕಳೆದ ವರ್ಷ ಇದೇ ರೀತಿ ಅನುಮತಿ ಇಲ್ಲದ 16 ಶಾಲೆಗಳನ್ನು ಜಿಲ್ಲೆಯಲ್ಲಿ  ಮುಚ್ಚಲಾಗಿತ್ತು.

ಅಂಗೀಕಾರಗೊಳ್ಳದ ಖಾಸಗಿ ಶಾಲೆಗಳ ಅನುಮತಿ ರದ್ದುಗೊಳಿಸಲು ಶಿಕ್ಷಣ ಇಲಾಖೆಯು ನೊಟೀಸ್‌ ನೀಡಿದಾಗ ಕೆಲವು ಶಾಲಾ ಆಡಳಿತ ಮಂಡಳಿ ನ್ಯಾಯಾಲಯದ ಮೆಟ್ಟಿಲೇರಿ ನೊಟೀಸ್‌ಗೆ ತಡೆ ತಂದ ಕಾರಣ 2018ರ ಮಾರ್ಚ್‌ 31ರ ವರೆಗೆ ಅಂತಹ ಶಾಲೆಗಳನ್ನು ಕಾರ್ಯಾಚರಿಸಲು ನ್ಯಾಯಾಲಯವು ಅನುಮತಿ ಕೊಟ್ಟಿತ್ತು.

ಜಿಲ್ಲೆಯಲ್ಲಿ ಅತ್ಯಧಿಕ ಎಂಬಂತೆ ಕಾಸರಗೋಡು ಶಿಕ್ಷಣ ಉಪಜಿಲ್ಲೆಯಲ್ಲಿ 31ರಷ್ಟು ಅನುಮತಿ ಇಲ್ಲದ ಶಾಲೆಗಳು ಕಾರ್ಯಾಚರಿಸುತ್ತಿವೆ. ಚಿತ್ತಾರಿಕ್ಕಲ್‌ ಉಪಜಿಲ್ಲೆಯಲ್ಲಿ  ಕೇವಲ 5 ಮಾತ್ರ ಅನುಮತಿ ಇಲ್ಲದ ಶಾಲೆಗಳಿವೆ. ಅಲ್ಲದೆ ಮಂಜೇಶ್ವರ ಉಪಜಿಲ್ಲೆಯಲ್ಲಿ 14, ಬೇಕಲದಲ್ಲಿ 11, ಹೊಸದುರ್ಗದಲ್ಲಿ 20, ಚೆರ್ವತ್ತೂರಿನಲ್ಲಿ  8, ಕುಂಬಳೆ ಉಪಜಿಲ್ಲಾ ವ್ಯಾಪ್ತಿಯಲ್ಲಿ 7 ಇಂತಹ ಶಾಲೆಗಳಿವೆ. ಇವುಗಳಲ್ಲಿ ಎಲ್‌ಪಿಯಿಂದ ಹಿಡಿದು ಹೈಸ್ಕೂಲು ತನಕದ ತರಗತಿಗಳು ಕಾರ್ಯವೆಸಗುತ್ತಿವೆ. ಹೆಚ್ಚಿನ ಶಾಲೆಗಳು ಕಿರಿಯ ಪ್ರಾಥಮಿಕ ಶಾಲೆಗಳಾಗಿವೆ. ಇವಲ್ಲದೆ ಎಲ್‌ಕೆಜಿ, ಯುಕೆಜಿ ವಿಭಾಗಗಳ ಶಾಲೆಗಳು ಕೂಡ ಒಳಗೊಂಡಿವೆ. ಸಿಬಿಎಸ್‌ಇ ಅಂಗೀಕಾರದೊಂದಿಗೆ ಕಾರ್ಯಾಚರಿಸುತ್ತಿರುವ 24ರಷ್ಟು ಎಲ್‌ಪಿ, ಯುಪಿ ಶಾಲೆಗಳು ಜಿಲ್ಲೆಯಲ್ಲಿವೆ.

ಬಾಲ ಹಕ್ಕು ಆಯೋಗದ ನಿರ್ದೇಶನದ ಪ್ರಕಾರ ಕೇರಳ ಸರಕಾರ, ಸಿಬಿಎಸ್‌ಇ, ಐಸಿಎಸ್‌ಇ ಇವುಗಳ ಅನುಮತಿ ಇಲ್ಲದ ಶಾಲೆಗಳನ್ನು ಮುಚ್ಚುಗಡೆಗೊಳಿಸಲು ಆದೇಶ ಹೊರಡಿಸಲಾಗಿದ್ದು, ಅದರಂತೆ ಶಿಕ್ಷಣ ಇಲಾಖೆಯು ಮುಂದಡಿಯಿರಿಸಿದೆ. ಜಿಲ್ಲೆಯಲ್ಲಿ 96 ಶಾಲೆಗಳನ್ನು  ಮುಚ್ಚುವ ಮೂಲಕ ಸಾರ್ವಜನಿಕ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಾಗಲಿದೆ.

Advertisement

2017-18ನೇ ಶೈಕ್ಷಣಿಕ ವರ್ಷದಲ್ಲಿ ಕೇರಳ ಸರಕಾರದ ಸಾರ್ವಜನಿಕ ಶಿಕ್ಷಣ ಯಜ್ಞದ ಅಂಗವಾಗಿ ಹಿಂದಿನ ವರ್ಷಕ್ಕಿಂತ 12,198 ಮಂದಿ ಮಕ್ಕಳು ಒಂದನೇ ತರಗತಿಗೆ ಹೆಚ್ಚುವರಿಯಾಗಿ ಸೇರ್ಪಡೆಗೊಂಡಿದ್ದಾರೆ. ಅಲ್ಲದೆ ಸರಕಾರಿ ಮತ್ತು  ಅನುದಾನಿತ ಶಾಲೆಗಳಲ್ಲಿ  2ರಿಂದ 9ನೇ ತರಗತಿ ವರೆಗೆ ಕೆಳಗಿನ ತರಗತಿಯಿಂದ ತೇರ್ಗಡೆ ಹೊಂದಿದವರಲ್ಲದೆ 1,45,208 ಮಂದಿ ಮಕ್ಕಳು ಅಧಿಕವಾಗಿ ಸೇರಿದ್ದಾರೆ.

ಸರಕಾರಿ ಶಾಲೆಗಳತ್ತ ಹೆಚ್ಚುತ್ತಿರುವ ಆಕರ್ಷಣೆ
ಕೇರಳದಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಅನುಮತಿ ಇಲ್ಲದ ವಿದ್ಯಾಲಯಗಳು ಮುಚ್ಚುವ ಹಿನ್ನೆಲೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ವಿವಿಧ ತರಗತಿಗಳಿಗೆ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಲ್ಲಿ ಸೇರ್ಪಡೆಗೊಳ್ಳುತ್ತಿದ್ದಾರೆ. ಇನ್ನೊಂದೆಡೆ ಮಂಜೇಶ್ವರ ಮತ್ತು ಕಾಸರಗೋಡು ಉಪಜಿಲ್ಲೆಗಳಲ್ಲಿ  ಅನುಮತಿ ಇಲ್ಲದೆ ಕಾರ್ಯಾಚರಿಸುತ್ತಿರುವ ಹಾಗೂ ಮುಚ್ಚುವ ಭೀತಿಯಲ್ಲಿರುವ ಖಾಸಗಿ ಶಾಲೆಗಳ ಮಕ್ಕಳನ್ನು ಸೆಳೆಯಲು ಅನುದಾನಿತ ಶಾಲೆಗಳು ಪೈಪೋಟಿ ನಡೆಸುತ್ತಿವೆ. ಅಲ್ಲದೆ ಅಂಗೀಕಾರವಿರುವ ಇತರ ಖಾಸಗಿ ಶಾಲೆಗಳು ಕೂಡ ಈ ಮಕ್ಕಳನ್ನು ತಮ್ಮತ್ತ ಆಕರ್ಷಿಸಲು ತಂತ್ರಗಾರಿಕೆಯಲ್ಲಿ ತೊಡಗಿವೆ. ಆದರೆ ಅನುಮತಿ ಇಲ್ಲದ ಶಾಲೆಗಳಲ್ಲಿ ಮಕ್ಕಳನ್ನು ದಾಖಲಿಸಿರುವ ಹೆತ್ತವರು ಅಥವಾ ಪೋಷಕರು ಭವಿಷ್ಯದ ದೃಷ್ಟಿಯಿಂದ ಸರಕಾರಿ ಶಾಲೆಗಳಲ್ಲಿಯೇ ತಮ್ಮ  ಮಕ್ಕಳನ್ನು ದಾಖಲಿಸಲು ಹೆಚ್ಚು ಕಾಳಜಿ ತೋರುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next