ಪ್ರಕಾಶ ಆರ್. ಗುಳೇದಗುಡ್ಡ
ಕಮತಗಿ: ಈ ಅಜ್ಜಿಯ ವಯಸ್ಸು ಬರೋಬ್ಬರಿ 96. ಯುವಕರೂ ನಾಚುವಂತೆ ನೇಕಾರಿಕೆಯ ಹಣಗಿ ಕಟ್ಟುವ ಕಾರ್ಯ ಮಾಡುತ್ತಾಳೆ. ಎಡ ಕಣ್ಣು ಸರಿಯಾಗಿ ಕಾಣದಿದ್ದರೂ ಬಲ ಕಣ್ಣೊಂದರ ಸಹಾಯದಿಂದಲೇ ಹಣಗಿ ಕಟ್ಟುವ ಕಾಯಕ ಸಲೀಸಾಗಿ ಮಾಡಿ ಮುಗಿಸುತ್ತಾಳೆ.
ನೇಕಾರರು ನೇಯ್ಗೆಗೂ ಮೊದಲು ಹಣಗಿ ಕಟ್ಟುವ ಕಾರ್ಯ ಮಾಡಿಸಿಕೊಳ್ಳುತ್ತಾರೆ. ನಂತರ ನೂಲಿನಿಂದ ನೇಕಾರಿಕೆಯ ಮೂಲಕ ವಿವಿಧ ಬಗೆಯ ಸೀರೆಗಳನ್ನು ನೇಯುತ್ತಾರೆ. ಈ ರೀತಿಯ ಹಣಗಿ ಕಟ್ಟುವ ಕಾರ್ಯ ಮಾಡುವ ಕುಟುಂಬಗಳು ಪಟ್ಟಣದಲ್ಲಿ ಬೆರಳೆಣಿಕೆಯ ಸಂಖ್ಯೆಯಲ್ಲಿದ್ದು, ಇಂತಹ ವಿಶೇಷ ಕಾರ್ಯ ಮಾಡುವ 96ರ ಅಜ್ಜಿ ರೇಣುಕಮ್ಮ ಹಣಗಿ(ಶಿವಯೋಗಿ) ಅವರು ಹಣಗಿ ಕಟ್ಟುವ ಕಾರ್ಯದಲ್ಲಿ ತೊಡಗಿದ್ದರಿಂದಲೇ ಅವರಿಗೆ ಹಣಗಿ ಮನೆತನದವರು ಎಂದು ಕಮತಗಿಯಲ್ಲಿ ಕರೆಯುತ್ತಾರೆ.
3ನೇ ತರಗತಿ ವರೆಗೆ ಓದಿರುವ ರೇಣುಕಮ್ಮ ವಂಶಪರಂಪರೆಯ ಉದ್ಯೋಗ ಹಣಗಿ ಕಟ್ಟುವ ಕಾಯಕವನ್ನು 12ನೇ ವಯಸ್ಸಿನಲ್ಲಿ ತಮ್ಮ ಅತ್ತೆ-ಮಾವರಿಂದ ಬಳುವಳಿಯಾಗಿ ಪಡೆದುಕೊಂಡು ನಿರಂತರವಾಗಿ 8 ದಶಕಗಳ ವರೆಗೆ ಶ್ರದ್ಧೆಯಿಂದ ನಡೆಸಿಕೊಂಡು ಬಂದಿದ್ದಾರೆ. ಹಣಗಿ ಕಟ್ಟುವ ಕಾರ್ಯ ಶ್ರಮದಾಯಕ ಕಾಯಕವಾಗಿದೆ. ವ್ಯವಧಾನ, ಸಮಾಧಾನದಿಂದ ಮಾಡಬೇಕು. ಬೇಕಾಬಿಟ್ಟಿಯಾಗಿ ಮಾಡಿದರೆ ಕಟ್ಟುವ ದಾರದ ಎಳೆಗಳು ಕೈಕೊಡುತ್ತವೆ.
ನಮಗೂ ಸೌಲಭ್ಯ ನೀಡಿ: ಹಣಗಿ ಕಟ್ಟುವ ಕಾಯಕದಿಂದ ಸಿಗುವ ಆದಾಯ ತೀರಾ ಕಡಿಮೆ. ಎರಡು ದಿನಕ್ಕೆ ಒಂದು ಹಣಗಿ ಕಟ್ಟಿಕೊಟ್ಟರೆ 800 ರೂ. ತೆಗೆದುಕೊಳ್ಳುತ್ತೇವೆ. 500ರಿಂದ 600 ರೂ. ಕಚ್ಚಾವಸ್ತುಗಳ ಖರೀದಿಗೇ ಖರ್ಚಾಗುತ್ತದೆ. ಇನ್ನುಳಿದ 200 ರೂ. ಗಳಲ್ಲೇ ಜೀವನ ಸಾಗಿಸಬೇಕಾಗಿದೆ. ನೇಕಾರರಿಗೆ ನೀಡುವ ಸೌಲಭ್ಯಗಳನ್ನು ಹಣಗಿ ಕಟ್ಟುವವರಿಗೂ ನೀಡಬೇಕೆಂಬ ಆಗ್ರಹ ವ್ಯಕ್ತವಾಗಿದೆ.