ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ಸಂಚಾರ ಪೊಲೀಸರು ರಸ್ತೆ ಬದಿ ನಿಂತು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ. ಆದರೆ, ಸಂಪರ್ಕ ರಹಿತ(ಕಾಂಟ್ಯಾಂಕ್ಟ್ ಲೆಸ್ ಎನ್ ಫೋರ್ಷ್ ಮೆಂಟ್) ಮೂಲಕ ಆ.1ರಿಂದ ಆ.17 ರವರೆಗೆ ಬರೋಬರಿ 17,49,610 ಪ್ರಕರಣ ದಾಖಲಿಸಿದ್ದು, 96,26,74,100 ರೂ. ದಂಡ ವಸೂಲಿ ಮಾಡಿದ್ದಾರೆ.
ಅಲ್ಲದೆ, ಸಂಪರ್ಕ ರಹಿತ ಮೂಲಕ ನಿಯಮ ಉಲ್ಲಂಘಿಸಿದ ವಾಹನ ಸವಾರನ ಮನೆಗೆ ನೋಟಿಸ್ ಕಳುಹಿಸಲಾಗುವುದು ಎಂದು ಸಂಚಾರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಲಾಕ್ ಡೌನ್ ಆರಂಭವಾದ ಮಾ.22ರಿಂದ ಜುಲೈ 30ರವರೆಗೆಸಂಪರ್ಕ ರಹಿತ ಮೂಲಕ 17,49,610 ಪ್ರಕರಣ ದಾಖಲಿಸಿದ್ದು, 96,26,74,100 ದಂಡ ಸಂಗ್ರಹಿಸಲಾಗಿದೆ.
ಸಂಚಾರ ಕಣ್ಗಾವಲು ಕ್ಯಾಮೆರಾಗಳು, ಸಂಚಾರ ಪೊಲೀಸರು ಹೊಂದಿರುವ ಡಿಜಿಟಲ್ ಕ್ಯಾಮೆರಾಗಳು(ಡಿಜಿಟಲ್ ಎಫ್ ಟಿವಿಆರ್), ಸಾರ್ವಜನಿಕರು ಗಮನಿಸಿದ ಸಂಚಾರ ಉಲ್ಲಂಘನೆಗಳ ದೂರುಗಳನ್ನು ಫೋಟೋಗಳ ಮೂಲಕ ಪಬ್ಲಿಕ್ ಐ ಆ್ಯಪ್ ಮೂಲಕ ಕಳುಹಿಸುತ್ತಿದ್ದು, ಈ ಮೂಲಕ ಪ್ರಕರಣ ದಾಖಲಿಸಲಾಗುತ್ತದೆ. ಜಂಪಿಂಗ್ ಟ್ರಾಫಿಕ್ ಸಿಗ್ನಲ್ ಉಲ್ಲಂಘನೆಗಳನ್ನು ಮತ್ತು ಅತೀ ವೇಗವಾಗಿ ಚಲಿಸಿ ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಸ್ವಯಂ ಚಾಲಿತಾವಾಗಿ ಪ್ರಕರಣಗಳನ್ನು ದಾಖಲಿಸಲು ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ರೆಡ್‌ಲೈಟ್ ವಯಲೇಷನ್ ಡಿಟೆಕ್ಷನ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಇದರೊಂದಿಗೆ ಈ-ಮೇಲ್, ಫೇಸ್ ಬುಕ್, ಟ್ವಿಟರ್, ಇಂಟೆರಾಕ್ಟೀವ್ ವಾಯ್ಸ್ ರೆಕಾರ್ಡ್ ಸಿಸ್ಟಂ ಮೂಲಕ ಪ್ರಕರಣಗಳನ್ನು ದಾಖಲಾಗುತ್ತಿದೆ. ಹೀಗಾಗಿ ಸಾರ್ವಜನಿಕರು ರಸ್ತೆಯಲ್ಲಿ, ಜಂಕ್ಷನ್ ಹಾಗೂ ಟ್ರಾಫಿಕ್ ಸಿಗ್ನಲ್‌ಗಳ ಬಳಿ ಸಂಚಾರ ಪೊಲೀಸರು ಇಲ್ಲ ಎಂದು ನಿಯಮ ಉಲ್ಲಂಘಿಸಿದರೆ ದಂಡ ತೆರಬೇಕಾಗುತ್ತದೆ.