Advertisement

950 ಮರಗಳನ್ನು ಪೋಷಿಸಿದ ಸಾಲು ಮರದ ನಿಂಗಣ್ಣ!

09:25 PM Jun 04, 2019 | Lakshmi GovindaRaj |

ರಾಮನಗರ: ಈ ರೈತನಿಗೆ ಪರಿಸರ ಪಾಠವನ್ನು ಯಾರು ಹೇಳಿಕೊಡಲಿಲ್ಲ. ಪರಿಸರ ಸಂರಕ್ಷಿಸಿ ಎಂದು ಯಾರು ಬೇಡಿಕೆ ಇಡಲಿಲ್ಲ. ಜೀವ ಸಂಕುಲದ ಉಸಿರೇ ಹಸಿರು ಎಂದಷ್ಟೇ ಗೊತ್ತು! ಇಷ್ಟು ತಿಳುವಳಿಕೆಯಿಂದಾಗಿಯೇ ಇಂದು 950 ಮರಗಳ ನಳನಳಿಸುತ್ತಿವೆ!

Advertisement

ವಿಶ್ವ ಖ್ಯಾತಿಯ ಸಾಲು ಮರದ ತಿಮ್ಮಕ್ಕನ ಮಾದರಿಯಲ್ಲೇ ರಾಮನಗರ ತಾಲೂಕಿನ ಅರೇಹಳ್ಳಿಯ ನಿವಾಸಿ ನಿಂಗಣ್ಣ ಕೂಟಗಲ್‌ ಹೋಬಳಿ ಬಿಳಗುಂಬ -ಅರೇಹಳ್ಳಿ ರಸ್ತೆಯ ಎರಡೂ ಬದಿಗಳಲ್ಲಿ ಸುಮಾರು 950 ಸಸಿಗಳನ್ನು ನೆಟ್ಟು ಪೋಷಿಸಿದ್ದಾರೆ. ಸಾಲು ಮರದ ನಿಂಗಣ್ಣ ಎಂಬ ಖ್ಯಾತಿಗಳಿಸಿದ್ದಾರೆ. ಈ ಸಸಿಗಳಿಂದು ಹೆಮ್ಮರಗಳಾಗಿ ಬೆಳೆದಿವೆ. ಕುಟುಂಬದ ಸಹಕಾರದಲ್ಲಿ 20 ವರ್ಷಗಳ ನಿಂಗಣ್ಣರ ಕಾಯಕದಿಂದಾಗಿ ಈ ರಸ್ತೆಯಲ್ಲಿ ಸಾಗುವ ಪ್ರಯಾಣಿಕರು, ಸ್ಥಳೀಯರಿಗೆ ತಂಪರೆದು ಸ್ವಾಗತಿಸುತ್ತಿವೆ.

ಜೀವನಕ್ಕೆ ಕೃಷಿ ಕೂಲಿ: ಜೀವನ ಪೋಷಣೆಗೆ ಕೃಷಿ ಕೂಲಿಯನ್ನು ಅವಲಂಭಿಸಿರುವ ನಿಂಗಣ್ಣ ಇಂದಿಗೂ ಕೆಲವೊಂದು ಲೇಔಟ್‌ಗಳಲ್ಲಿ ಸಸಿ ನೆಟ್ಟು ಪೋಷಿಸುವ ಸೇವೆ ಮುಂದುವರಿಸಿದ್ದಾರೆ. ಪರಿಸರವಿಂದು ಮಾಲಿನ್ಯಗೊಂಡು ಜೀವ ಸಂಕುಲಕ್ಕೆ ಅಪಾಯ ಎದುರಾಗಿರುವ ಈ ಸಂದರ್ಭದಲ್ಲಿ ತಿಮ್ಮಕ್ಕ ಮತ್ತು ನಿಂಗಣ್ಣರಂತಹ ನಿಸ್ವಾರ್ಥ ಸೇವೆ ಇತರರಿಗೆ ಮಾದರಿಯಾಗಿದೆ. ನಿಂಗಣ್ಣರ ಸೇವೆಯನ್ನು ಜನಸಾಮಾನ್ಯರು ಮನದಾಳದಿಂದ ಶ್ಲಾ ಸುತ್ತಿದ್ದಾರೆ. ಹತ್ತು, ಹಲವು ಸಂಘ-ಸಂಸ್ಥೆಗಳು ಇವರ ಸೇವೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿದೆ. ಆದರೆ, ಸರ್ಕಾರ ಮಾತ್ರ ಇವರ ಮನವಿಗಳಿಗೆ ಕಿಮ್ಮತ್ತು ನೀಡುತ್ತಿಲ್ಲ ಎಂಬುದೇ ವಿಪರ್ಯಾಸ!

ಮನವಿಗೆ ಸ್ಪಂದಿಸದ ಆಡಳಿತ: ಪರಿಚಯಸ್ಥರೊಬ್ಬರು ತಮ್ಮ ಜಮೀನಿನನಲ್ಲಿ ಶುಂಠಿ ಬೆಳೆದು ಕೊಟ್ಟರೆ ಪಾಲು ಕೊಡುವುದಾಗಿ ಹೇಳಿದ್ದರಂತೆ, ಶುಂಠಿ ಬೆಳೆದು ಕೊಟ್ಟ ನಂತರ ಕೊಟ್ಟ ಮಾತು ಈಡೇರಿಸದೇ ನಿಂಗಣ್ಣರ ಪರಿಶ್ರಮವನ್ನು ಕಡೆಗಣಿಸಿದ್ದು, ನಿಂಗಣ್ಣ ಮತ್ತು ಕುಟುಂಬಕ್ಕೆ ಬೇಸರ ತಂದಿದೆ. ಇನ್ನಾರಧ್ದೋ ಭೂಮಿಯಲ್ಲಿ ಕೃಷಿ ಕೂಲಿ ಮಾಡಿಕೊಂಡು ಜೀವನ ನಡೆಸುವ ಬದಲಿಗೆ, ಒಂದಿಷ್ಟು ಭೂಮಿ ಮಂಜೂರು ಮಾಡಲು ಸರ್ಕಾರಕ್ಕೆ ಮಾಡಿಕೊಂಡ ಮನವಿಗಳು ಕೇವಲ ಕಡತಗಳಲ್ಲಿ ದಾಖಲಾಗುತ್ತಿದೆ.

2015ರ ಮಾರ್ಚ್‌ನಲ್ಲಿ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ಅಧೀನ ಕಾರ್ಯದರ್ಶಿ ಭಾಗ್ಯಲಕ್ಷ್ಮೀ ಅವರು ಕಂದಾಯ ಇಲಾಖೆಗೆ ಪತ್ರ ಬರೆದು ಸರ್ಕಾರದ 4 ಎಕರೆ ಭೂಮಿ ಮಂಜೂರು ಮಾಡುವಂತೆ ತಿಳಿಸಿದ್ದಾರೆ. ಈ ಪತ್ರವನ್ನು ಹಿಡಿದು ನಿಂಗಣ್ಣ ತಹಶೀಲ್ದಾರ ಕಚೇರಿಯಿಂದ, ರಾಜ್ಯಪಾಲರ ತನಕ ಅಲೆದಿದ್ದಾರೆ. ರಾಜ್ಯಪಾಲರು ಸೇರಿದಂತೆ ಹಿರಿಯ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಪತ್ರ ಬರೆದು ಭೂಮಿ ಮಂಜೂರು ಮಾಡಿಕೊಡುವಂತೆ ಸೂಚನೆ ಕೊಟ್ಟಿದ್ದಾರೆ. ಆದರೆ, ಇನ್ನೂ ಭೂಮಿ ಮಂಜೂರು ಆಗಲೇ ಇಲ್ಲ. ಜನನಾಯಕರು ಕೊಟ್ಟ ಭರವಸೆಯನ್ನೇ ನಂಬಿರುವ ಈ ವೃಕ್ಷ ಸಂರಕ್ಷಕ ದಿನ ದೂಡುತ್ತಿದ್ದಾರೆ.

Advertisement

ಬೆದರಿಕೆ ಕರೆಗಳು!: ಅರೇಹಳ್ಳಿ ನಿಂಗಣ್ಣರ ಸಾಲು ಮರಗಳು ಖ್ಯಾತಿ ಪಡೆಯುತ್ತಿವೆ. ಸಾಲು ಮರದ ತಿಮ್ಮಕ್ಕನಂತೆ, ನಿಂಗಣ್ಣರ ಪರಿಸರ ಸೇವೆಯನ್ನು ಜನಸಾಮಾನ್ಯರು ಶ್ಲಾ ಸುತ್ತಿರುವ ಬೆನ್ನಲ್ಲೆ ಕೆಲವು ಕಿಡಿಗೇಡಿಗಳು ನಿಂಗಣ್ಣರ ಮೊಬೈಲ್‌ಗೆ ಕರೆಗಳನ್ನು ಮಾಡಿ ಬೆದರಿಕೆ ಹಾಕುತ್ತಿದ್ದಾರಂತೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದಾಗಿ ಸ್ವತಃ ನಿಂಗಣ್ಣ ತಿಳಿಸಿದ್ದಾರೆ. ಬೆದರಿಕೆ ಕರೆಗಳ ಬಗ್ಗೆ ಗ್ರಾಮಾಂತರ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ. ಪೊಲೀಸರು ಇನ್ನಷ್ಟೇ ಕಿಡಿಗೇಡಿಯನ್ನು ಪತ್ತೆ ಹಚ್ಚಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ.

ಕೈಲಾಗದವನು ಮೈ ಪರಿಚಿಕೊಂಡ ಎಂಬಂತೆ ಕೆಲವರು ನಿಂಗಣ್ಣರ ಖ್ಯಾತಿಯನ್ನು ಸಹಿಸದೆ, ಇವರು ಬೆಳೆಸಿದ ಮರಗಳ ಕೊಂಬೆ ಕತ್ತರಿಸುವುದು, ಬೆಂಕಿ ಹಚ್ಚುವುದನ್ನು ಮಾಡುತ್ತಿದ್ದಾರಂತೆ, ಇದನ್ನು ಕಂಡು ಬೇಸರವಾಗುತ್ತಿದೆ ಎಂದು ನಿಂಗಣ್ಣ ನೋವು ತೋಡಿಕೊಂಡಿದ್ದಾರೆ.

ಭೂಮಿ ತಾಯಿಯ ಸೇವೆ ಮಾಡಬೇಕೆನ್ನಿಸಿತು ಮಾಡಿದ್ದೇನೆ. ತಮಗೆ 62 ವರ್ಷ. ಸರ್ಕಾರದಿಂದ ಒಂದಿಷ್ಟು ಭೂಮಿ ಸಿಕ್ಕರೆ ಸ್ವಂತ ಭೂಮಿಯಲ್ಲಿ ಕೃಷಿ ಮಾಡಿ ಜೀವನ ಸಾಗಿಸುವ ಕನಸಿದೆ. ಸರ್ಕಾರ ಸ್ಪಂದಿಸಬೇಕಾಗಿದೆ. ವಸತಿ ಬಡಾವಣೆಗಳಲ್ಲಿ ಸಸಿ ನೆಡುವಂತೆ ಆ ಬಡಾವಣೆಗಳ ನಿವಾಸಿಗಳು, ಮಾಲೀಕರು ಸೂಚಿಸಿದರೆ ಕೆಲಸ ಮಾಡಿಕೊಡುತ್ತೇನೆ. ಬಡಾವಣೆಗಳಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಗಳಿಗೆ ನೀರು ಹಾಯಿಸಿ ಕೂಲಿ ಪಡೆದು ಜೀವನ ಸಾಗಿಸುತ್ತಿದ್ದೇನೆ.
-ಸಾಲು ಮರದ ನಿಂಗಣ್ಣ

* ಬಿ.ವಿ.ಸೂರ್ಯ ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next