Advertisement
ತಾ.ಪಂ. ಸಾಮಾನ್ಯಸಭೆಯು ಮಂಗಳ ವಾರ ತಾ.ಪಂ. ಸಭಾಂಗಣದಲ್ಲಿ ಅಧ್ಯಕ್ಷೆ ಭವಾನಿ ಚಿದಾನಂದ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್. ವಿಷಯ ಪ್ರಸ್ತಾವಿಸಿ, 3 ತಿಂಗಳ ಹಿಂದೆ ರಾಜ್ಯದಲ್ಲಿನ ಉತ್ತಮ ಯೋಜನಾ ಪ್ರಗತಿ ಕುರಿತು ಪ್ರಸ್ತಾವನೆ ಕಳುಹಿ ಸಲು ಎಂಎಚ್‌ಆರ್‌ಡಿ ಇಲಾಖೆ ತಿಳಿಸಿತ್ತು. ಪುತ್ತೂರು ಶಿಕ್ಷಣ ಇಲಾಖೆ ಕಳುಹಿಸಿದ 95+ ಯೋಜನೆಯ ಕುರಿತ ವರದಿ ರಾಜ್ಯದಿಂದ ಆಯ್ಕೆಯಾಗಿದೆ ಎಂದರು.
ತಾಲೂಕಿನ ಶಾಲೆಗಳಿಗೆ ವಿತರಣೆ ಆಗಿರುವ ಸೈಕಲ್ ಗುಣಮಟ್ಟ ಕಳಪೆಯಾಗಿದೆ. ಇದಕ್ಕೆ ಅಗತ್ಯವಿರುವ ಸಾಕ್ಷಿ ನನ್ನ ಬಳಿ ಇದೆ. ಹಾಗಿದ್ದರೂ ಸೈಕಲ್ ಗುಣಮಟ್ಟ ಉತ್ತಮವಾಗಿದೆ ಎಂಬ ವರದಿಯನ್ನು ಯಾವ ಆಧಾರದಲ್ಲಿ ನೀಡಿದ್ದೀರಿ ಎಂದು ಸದಸ್ಯ ಶಿವರಂಜನ್ ಪ್ರಶ್ನಿಸಿದರು.
Related Articles
Advertisement
ಮಾಹಿತಿ ನೀಡಿದರೆ ಕ್ರಮಪ್ರತಿಕ್ರಿಯಿಸಿದ ಬಿಇಒ ಶಶಿಧರ್ ಜಿ.ಎಸ್., ನಿಗದಿತ ವ್ಯಕ್ತಿಗೆ ಟೆಂಡರ್ ಕರೆಯಲಾಗಿದೆ. ಪುತ್ತೂರು ತಾಲೂಕಿನ ಎರಡು ಕೇಂದ್ರಗಳಲ್ಲಿ ಸೈಕಲ್ ಜೋಡಣೆ ನಡೆಸಿ, ಶಾಲಾ ಮುಖ್ಯ ಶಿಕ್ಷಕರಿಗೆ ತಲುಪಿಸಲಾಗಿದೆ. ಶಾಲೆಯಲ್ಲಿ ಪರಿಶೀಲಿಸಿಯೇ ಸೈಕಲ್ ಪಡೆದುಕೊಳ್ಳಲಾಗಿದೆ. ತಮ್ಮ ಶಾಲೆಗೆ ನೀಡಿದ ಸೈಕಲ್ ಹಾಳಾಗಿದೆ ಎಂಬ ಯಾವ ವರದಿಯೂ ನನಗೆ ಬಂದಿಲ್ಲ. ಸೈಕಲ್ ಗುಣಮಟ್ಟ ಕಳಪೆಯಾಗಿದ್ದರೆ ಅಂತಹ ಸೈಕಲ್‌ನನಂಬರ್ ಸಹಿತ ಮಾಹಿತಿ ನೀಡಿ. ಖಂಡಿತ ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಉತ್ತರ ಯಾವಾಗ ?
ನೆಲ್ಯಾಡಿ ಬಸ್ ನಿಲ್ದಾಣದ ಅಭಿವೃದ್ಧಿ ಕುರಿತ ವಿಚಾರದ ಪ್ರಗತಿಯ ಕುರಿತ ಪ್ರಶ್ನೆಗೆ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂಬ ಕೆಎಸ್‌ಆರ್‌ಟಿಸಿ ಅಧಿಕಾರಿಯ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯೆ ಉಷಾ ಅಂಚನ್, ಯಾವಾಗಲೂ ಪತ್ರ ಬರೆಯುತ್ತಿದ್ದರೆ ಉತ್ತರ ಸಿಗುವುದು ಯಾವಾಗ ಎಂದು ಪ್ರಶ್ನಿಸಿದರು. ಅಧಿಕಾರಿಗಳಲ್ಲಿ ಗಂಭೀರತೆ ಇಲ್ಲ. ಉತ್ತರ ಸಿಗದಿದ್ದರೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಎಚ್ಚರಿಸಿದರು. ಅಧ್ಯಕ್ಷರು ಮಾತನಾಡಿ, 2 ದಿನದಲ್ಲಿ ಬಸ್ ನಿಲ್ದಾಣ ಅಭಿವೃದ್ಧಿ ಕುರಿತ ಬೆಳವಣಿಗೆಯನ್ನು ತಿಳಿಸಬೇಕು ಎಂದು ಸೂಚಿಸಿದರು. ಜನಸಂಪರ್ಕ ಸಭೆ ಹೀಗೆಯೇ?
ಇತ್ತೀಚೆಗೆ ನಡೆದ ಕೆಎಸ್‌ಆರ್‌ಟಿಸಿಯ ಜನಸಂಪರ್ಕ ಸಭೆಯಲ್ಲಿ ತಾ.ಪಂ. ಸದಸ್ಯರನ್ನು ಕರೆಯದ ಕುರಿತು ಅಸಮಾ ಧಾನ ವ್ಯಕ್ತಪಡಿಸಿದ ಉಷಾ ಅಂಚನ್, ಸಭೆ ಉಸ್ತುವಾರಿ ಸಚಿವರಿಗೆ ಮತ್ತು ಶಾಸಕರಿಗೆ ಮಾತ್ರವೇ? ಎಂದು ಪ್ರಶ್ನಿಸಿದರು. ಸದಸ್ಯ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ಸಭೆಗೆ ತಾ.ಪಂ. ಸದಸ್ಯರಿಗೆ ಹೇಳಿಲ್ಲ. 11 ಗಂಟೆಗೆ ಸಭೆ ಎಂದು ಹೇಳಿ 2 ಗಂಟೆಗೆ ನಡೆಸಿದರೆ ಜನ ಬರಲು ಸಾಧ್ಯವಿಲ್ಲ. ಇದು ಯಾವ ಪುರುಷಾರ್ಥಕ್ಕೆ ನಡೆದ ಸಭೆ ಎಂದು ಪ್ರಶ್ನಿಸಿದರು. ಡಿಪೋ ವ್ಯಾಪ್ತಿಯ ಸಭೆ ಇನ್ನೊಮ್ಮೆ ನಡೆಸಲಾಗುವುದು ಎಂದು ಇಲಾಖೆಯ ಅಧಿಕಾರಿ ತಿಳಿಸಿದರು. ಅಂಚೆ ಪಾವತಿ ಸಮಸ್ಯೆ
ಅಂಚೆ ಕಚೇರಿಯಲ್ಲಿ ವಿದ್ಯುತ್ ಬಿಲ್ ಪಾವತಿಸಿದರೂ ಸಂಪರ್ಕ ಸ್ಥಗಿತ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಉತ್ತರಿಸಿದ ಮೆಸ್ಕಾಂ ಅಧಿಕಾರಿ, ಅಂಚೆ ಕಚೇರಿಯಲ್ಲಿ ಪಾವತಿಸಿದ ಬಿಲ್ ಕುರಿತ ಮಾಹಿತಿಯನ್ನು 3-4 ದಿನ ಕಳೆದು ನೀಡಲಾಗುತ್ತಿದೆ. ಇದರಿಂದ ಆಗುತ್ತಿರುವ ಸಮಸ್ಯೆ ಕುರಿತು ಅಂಚೆ ಇಲಾಖೆ ಉನ್ನತ ಅಧಿಕಾರಿಗಳಿಗೆ ತಿಳಿಸಲಾಗಿದೆ. ಅಂಚೆ ಪಾವತಿಯ ರಶೀದಿ ತೋರಿಸಿದರೆ ವಿದ್ಯುತ್ ಕಡಿತ ಮಾಡುವುದಿಲ್ಲ. ಮಾಮೂಲಾಗಿ ವಿದ್ಯುತ್ ಬಿಲ್ ಪಾವತಿಸಲು 1 ತಿಂಗಳ ಕಾಲಾವಕಾಶ ನೀಡಲಾಗುತ್ತಿದೆ ಎಂದರು. ಕ್ರಮವೂ ಗೊತ್ತು!
ಹಿಂದಿನ ಸಭೆಯ ಪಾಲನಾ ವರದಿ ಸಲ್ಲಿಸದ ಇಲಾಖೆಗಳ ಕುರಿತು ತಾ.ಪಂ. ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ಸಭೆ ನಡೆದ 15 ದಿವಸದ ಒಳಗೆ ಎಲ್ಲ ಇಲಾಖೆಗಳು ಪಾಲನ ವರದಿ ನೀಡಬೇಕು. ನಾವು ಸುಮ್ಮನಿದ್ದೇವೆ ಎಂದು ಕೆಲವರು ನಿರ್ಲಕ್ಷಿÂಸುತ್ತಿದ್ದೇವೆ. ನಮಗೆ ಕ್ರಮ ಕೈಗೊಳ್ಳಲೂ ಗೊತ್ತು ಎಂದು ಭವಾನಿ ಚಿದಾನಂದ ಎಚ್ಚರಿಸಿದರು. ಅಂತ್ಯ ಸಂಸ್ಕಾರ ಅನುದಾನ
ಅಂತ್ಯ ಸಂಸ್ಕಾರಕ್ಕೆ ಸಂಬಂಧಿಸಿದ ಹಣ ಸಿಗುತ್ತಿಲ್ಲ ಎಂಬ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ತಹಶೀಲ್ದಾರ್ ಅನಂತಶಂಕರ್, 2014ರ ಎಪ್ರಿಲ್ ಬಳಿಕದ 15.6 ಲಕ್ಷ ರೂ. ಹಣ ಇದೀಗ ಬಿಡುಗಡೆಯಾಗಿದೆ. ಇನ್ನು 20.4 ಲಕ್ಷ ರೂ. ಬರಲು ಬಾಕಿ ಇದೆ. ಕಡಬಕ್ಕೆ 6.30 ಲಕ್ಷ ರೂ. ಬಂದಿದೆ ಎಂದು ಮಾಹಿತಿ ನೀಡಿದರು. 94ಸಿ, 94ಸಿಸಿ ಸಹಿತ ಹಕ್ಕುಪತ್ರ ಸಲ್ಲಿಕೆ ಶುಲ್ಕದಲ್ಲಿ ಕಡಿಮೆಗೊಂಡು ಸರಕಾರದಿಂದ ಗೆಜೆಟ್ ನೋಟಿಫಿಕೇಶನ್ ಬಂದಿದೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದರು. ಕಾರ್ಮಿಕ ಇಲಾಖೆ ಸಮಸ್ಯೆ
ಕಾರ್ಮಿಕ ಇಲಾಖೆಯಲ್ಲಿ ಕಡತಗಳು ಬಾಕಿಯಾಗಿ ಸಮಸ್ಯೆಯಾಗುತ್ತಿವೆೆ ಎಂಬ ಸದಸ್ಯೆ ಉಷಾ ಅಂಚನ್ ಅವರ ಪ್ರಶ್ನೆಗೆ ಉತ್ತರಿಸಿದ ಇಲಾಖೆಯ ಅಧಿಕಾರಿ ರಾಮಚಂದ್ರ, ಸಂಬಂಧಿಸಿದ ಬೋರ್ಡ್ ನಿಂದ ಕಲ್ಪಿಸಲಾದ ಇಂಟರ್‌ನೆಟ್ ಕನೆಕ್ಷನ್ ತೆಗೆಯಲಾಗಿದೆ. ಆದರೆ ಪುತ್ತೂರು ಇಲಾಖೆಯಲ್ಲಿ ನನ್ನ ಸ್ವಂತ ಇಂಟರ್‌ನೆಟ್ ಕನೆಕ್ಷನ್ ಮೂಲಕ ಕಡತ ವಿಲೇವಾರಿ ಪ್ರಕ್ರಿಯೆ ಮಾಡುತ್ತಿದ್ದೇನೆ ಎಂದು ಹೇಳಿದರು. 3 ತಿಂಗಳಿನಿಂದ ಇಂಟರ್‌ನೆಟ್ ಕನೆಕ್ಷನ್ ತೆಗೆದಿದ್ದರೂ ಸರಿಪಡಿಸಿಲ್ಲ. ಕಾರ್ಮಿಕರಿಗೆ ಆಗುತ್ತಿರುವ ಸಮಸ್ಯೆಗೆ ಯಾರು ಹೊಣೆ ಎಂದು ಉಷಾ ಅಂಚನ್ ಪ್ರಶ್ನಿಸಿದರು. ಸಮಸ್ಯೆಯ ಕುರಿತು ಮಾಹಿತಿ ಸಂಗ್ರಹಿಸಿ ಕೊಡಿ. ಈ ಕುರಿತು ನಿರ್ಣಯ ತೆಗೆದುಕೊಳ್ಳೋಣ ಎಂದು ತಾ.ಪಂ. ಇಒ ಹೇಳಿದರು. ಇಂದು ಜನಸಂಪರ್ಕ ಸಭೆ
ಫೆ. 22ರಂದು ತಾ.ಪಂ. ಸಭಾಂಗಣದಲ್ಲಿ ಪೂರ್ವಾಹ್ನ ಮೆಸ್ಕಾಂ ಜನಸಂಪರ್ಕ ಸಭೆ ಕರೆಯಲಾಗಿದೆ. ಸಭೆಯಲ್ಲಿ ತಾ.ಪಂ. ಸದಸ್ಯರ ಸಹಿತ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮೆಸ್ಕಾಂ ಅಧಿಕಾರಿ ವಿನಂತಿಸಿದರು. ಚರ್ಚೆಯ ಪಾಠ
ಸೈಕಲ್ ವಿಚಾರ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರ ನಡುವೆ ಪರಸ್ಪರ ವಾಗ್ವಾದಕ್ಕೆ ಕಾರಣವಾಯಿತು. ತಾ.ಪಂ. ಪ್ರಥಮ ಬಾರಿಯ ಸದಸ್ಯೆ ತೇಜಸ್ವಿನಿ ಅವರು ತಾ.ಪಂ. ಸದಸ್ಯೆ ಉಷಾ ಅಂಚನ್ ಹಾಗೂ ಜಿ.ಪಂ. ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಅವರ ವಿರುದ್ಧ ಹರಿಹಾಯ್ದು, ಯಾವ ವಿಚಾರ ಚರ್ಚೆ ನಡೆಸಬೇಕು ಎಂಬುದನ್ನು ತಮಗೆ ತಿಳಿಸುವ ಅಗತ್ಯವಿಲ್ಲವೆಂದು ಹೇಳಿದರು.