Advertisement

“94 –ಸಿ ಹಕ್ಕುಪತ್ರ ಪರಿಶೀಲನೆಗಾಗಿ ಶೀಘ್ರವೇ ಜನಸ್ಪಂದನ ಸಭೆ’

08:41 PM Aug 29, 2019 | Sriram |

ಪಡುಬಿದ್ರಿ: ಜನತೆಯ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮೂಲಭೂತ ಸೌಕರ್ಯಗಳತ್ತ ಒತ್ತು ನೀಡುವ ರಾಜ್ಯ ಬಿಜೆಪಿ ಸರಕಾರವು ಬಡವರ 94 – ಸಿ ಹಕ್ಕುಪತ್ರ ವಿತರಣೆಗಳಲ್ಲಾಗುತ್ತಿರುವ ವಿಳಂಬವನ್ನೂ ಗಣನೆಗೆ ತೆಗೆದುಕೊಂಡಿದೆ. ಇವುಗಳ ಪರಿಶೀಲನೆಗಾಗಿ ಪಡುಬಿದ್ರಿಯಲ್ಲೇ ಶೀಘ್ರವಾಗಿ ಜನಸ್ಪಂದನ ಸಭೆಯನ್ನು ನಡೆಸಲಾಗುವುದೆಂದು ಕಾಪು ಶಾಸಕ ಲಾಲಾಜಿ ಮೆಂಡನ್‌ ಹೇಳಿದರು.

Advertisement

ಅವರು ಆ. 29ರಂದು ಪಡುಬಿದ್ರಿ ಗ್ರಾ. ಪಂ. ನ 2019 -20ನೇ ಸಾಲಿನ ಪ್ರಥಮ ಗ್ರಾಮಸಭೆಯಲ್ಲಿ ಮಾತನಾಡಿದರು. ಹೆಜಮಾಡಿ ಬಂದರು, ಪಡುಬಿದ್ರಿಯ ಎಸ್‌ಎಲ್‌ಆರ್‌ಎಂ ಘಟಕದಿಂದಾದ ಸಾರ್ವಜನಿಕ ತೊಂದರೆ, ಪಡುಬಿದ್ರಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಸಮರ್ಪಕ ಕಾಮಗಾರಿ, ಕೃಷಿ ಹಾನಿ ಇತ್ಯಾದಿಗಳನ್ನು ವೀಕ್ಷಿಸಲು ಸೆ. 4 ಅಥವಾ 5ರಂದು ತನ್ನ ಆಶಯದಂತೆ ಆಗಮಿಸಲಿರುವ ಉಡುಪಿ ಜಿಲ್ಲಾಧಿಕಾರಿ, ತಹಶೀಲ್ದಾರ್‌ ಸಮೇತ ತಾವು ಈ ಭಾಗಕ್ಕೆ ಭೇಟಿ ನೀಡಲಿದ್ದೇವೆ. ವಿಳಂಬವಾಗುತ್ತಿರುವ ಗ್ರಾ. ಪಂ. ಕಟ್ಟಡವನ್ನು ಶೀಘ್ರ ಪೂರ್ಣಗೊಳಿಸುವ ನಿಟ್ಟಿನಲ್ಲಿ ತನ್ನ ಶಾಸಕರ ನಿಧಿಯಿಂದ 10ಲಕ್ಷ ರೂ. ಗಳನ್ನು ನೀಡುವುದಾಗಿಯೂ ಶಾಸಕ ಲಾಲಾಜಿ ಮೆಂಡನ್‌ ಭರವಸೆಯನ್ನಿತ್ತರು.

ನೂತನ ಗ್ರಾ. ಪಂ. ಕಟ್ಟಡದ ವಿಳಂಬ ನೀತಿ: ಗಂಭೀರ ಚರ್ಚೆ
ಪಡುಬಿದ್ರಿ ಗ್ರಾಮಸಭೆಯಲ್ಲಿ ಇನ್ನೂ ಪೂರ್ಣಗೊಳ್ಳದ ಗ್ರಾ. ಪಂ. ನೂತನ ಕಟ್ಟಡ ಕಾಮಗಾರಿ ವಿಚಾರವಾಗಿ ಗಂಭೀರವಾಗಿ ಚರ್ಚಿಸಲಾಯಿತು. ಅದಾನಿ ಸಿಎಸ್‌ಆರ್‌ ನಿಧಿಯ 50ಲಕ್ಷ ರೂ. ಗಳ ಮೂಲಕ ಈಗಾಗಲೇ ಮುಗಿಯಬೇಕಿದ್ದ ಕಟ್ಟಡಕ್ಕೆ ಈಗ ವಿವಿಧ ಸರಕಾರಿ ಅನುದಾನಗಳನ್ನು ಬಳಸಿಕೊಳ್ಳುವಂತಾಗಿದೆ. ಆದರೂ ಪಂಚಾಯತ್‌ ಅನುಸರಿಸುತ್ತಿರುವ ವಿಳಂಬ ನೀತಿಗೆ ಪ್ರತಿಭಟಿಸಲಾಯಿತು. ಇದುವರೆಗೂ ಪೂರ್ಣಗೊಳ್ಳದಿರುವ ಪಂಚಾಯತ್‌ ಕಟ್ಟಡ ಮತ್ತು ಎರಡೆರಡು ಮಾಳಿಗೆಗಳನ್ನು ಹತ್ತಿ ತಮ್ಮ ಬಾಡಿಗೆ ಗ್ರಾಮಾಡಳಿತ ಕಚೇರಿಗೆ ಬರಬೇಕಾದ ದುಃಸ್ಥಿತಿಗಾಗಿ ಗ್ರಾಮಸ್ಥರು ಗ್ರಾಮಸಭೆಯ ವರದಿಯಲ್ಲಿ ತಮ್ಮ ಆಕ್ಷೇಪವನ್ನು ದಾಖಲಿಸಿಕೊಳ್ಳುವಂತೆ ಆಗ್ರಹಿಸಿದರು.

ಗ್ರಾ. ಪಂ. ಆವರಣದ ಮೈದಾನವನ್ನು ಈಗಾಗಲೇ ಪ್ಲಾಸ್ಟಿಕ್‌ಗಳನ್ನು ಮುಚ್ಚುತ್ತಲೇ ಆ ಭೂಮಿಯ ಫಲವತ್ತತೆಯನ್ನು ಹಾಳುಗೆಡವಿದ್ದಕ್ಕಾಗಿ ಎಸ್‌ಎಲ್‌ಆರ್‌ಎಂ ಘಟಕವನ್ನು ಅಲ್ಲಿಂದ ಬೇರೆಡೆಗೆ ವರ್ಗಾಯಿಸುವಂತೆ ಆಗ್ರಹಿಸಲಾಯಿತು.

ಕಂಚಿನಡ್ಕದ ಲೋಕೇಶ್‌ ಹಾಗೂ ಸುಖೇಶ್‌ ಪಡುಬಿದ್ರಿ ಸಂತೆ ಮಾರುಕಟ್ಟೆ ಸಮೀಪ ಸುತ್ತಮುತ್ತಲಿನ ಹಿಂದುಳಿದ ಬಾಲಕರ ವಸತಿ, ಪೊಲೀಸ್‌ಠಾಣೆ, ಶಾಲೆಗಳು, ಅಂಗನವಾಡಿಗಳಿಗೆ ತೊಂದರೆಯಾಗುತ್ತಿರುವ ಹಸಿ ತ್ಯಾಜ್ಯ ಸಂಗ್ರಹಣಾ ಘಟಕ ಮತ್ತು ಅದರಿಂದ ಹೊರ ಬರುತ್ತಿರುವ ವಾಸನೆಯುಕ್ತ ತ್ಯಾಜ್ಯ ನೀರು, ಶಾಲಾ ಹಿಂಬದಿಯಲ್ಲಿ ವಾಶ್‌ರೂಂ ಬದಿಯಲ್ಲೇ ವಿಷಯುಕ್ತ ಹಾವುಗಳು ವಿದ್ಯಾರ್ಥಿಗಳ ಸುರಕ್ಷತೆ ಕುರಿತಾಗಿ ಇಲಾಖೆಗಳಿಗೆ ಇರದ ಕಾಳಜಿಗಾಗಿ ಪಂಚಾಯತ್‌ ಅಧ್ಯಕ್ಷರ, ಶಿಕ್ಷಣ ಇಲಾಖಾ ಅಧಿಕಾರಿಗಳ ಗಮನ ಸೆಳೆದರು.

Advertisement

ನ್ಯಾಯವಾದಿ ರಾಜೇಶ್‌ ಎಸ್‌ಸಿ ಎಸ್‌ಟಿ ಗ್ರಾಮಸಭೆ ನಡೆಸುವಂತೆಯೂ, ಪಂಚಾಯತ್‌ಕಟ್ಟಡಗಳಲ್ಲಿ ಪರಿಶಿಷ್ಟ ವರ್ಗ ಮತ್ತು ಜಾತಿಯವರಿಗೆ ಅಂಗಡಿ ಕೋಣೆಗಳನ್ನು ಮೀಸಲಿಡುವಂತೆಯೂ ಆಗ್ರಹಿಸಿದರು. ಗ್ರಾಮಸ್ಥ ಸಂದೇಶ್‌ ಕೃಷಿಕರಿಗೆ ಅನುಕೂಲವಾಗುವಂತೆ ಯಾವುದೇ ಮಾಹಿತಿ ಶಿಬಿರಗಳನ್ನು ಕೃಷಿ ಅಥವಾ ತೋಟಗಾರಿಕಾ ಇಲಾಖೆಗಳ ಮೂಲಕ ಪಂಚಾಯತ್‌ ನಡೆಸದಿರುವುದಕ್ಕಾಗಿ ಆಕ್ಷೇಪ ವ್ಯಕ್ತಪಡಿಸಿದರು. ಆದಷ್ಟು ಶೀಘ್ರ ಇವುಗಳನ್ನು ನಡೆಸುವುದಾಗಿ ಗ್ರಾ. ಪಂ. ಅಧ್ಯಕ್ಷರು ಭರವಸೆಯಿತ್ತರು.

ಕೃಷಿಕ ರಾಜೇಶ ಶೇರಿಗಾರ್‌ ಈಚೆಗೆ ಮೊದಲ ಮಳೆಯಲ್ಲೇ ಹೊಳೆಯಲ್ಲಿ ಕಪ್ಪು ನೀರು ಹರಿದು ಬಂದು ಭತ್ತದ ಬೆಳೆಗಾಗಿರುವ ನಷ್ಟ, ಮುಟ್ಟಳಿವೆಯಲ್ಲಿ ಸಾಲು, ಸಾಲು ಮೀನುಗಳ ಸಾವಿನ ಕುರಿತಾಗಿ ಇಲಾಖಾ ತನಿಖಾ ವರದಿಯನ್ನು ಸಭೆಯ ಮುಂದಿಡಬೇಕೆಂದು ಆಗ್ರಹಿಸಿ ಗ್ರಾಮಸಭೆಯನ್ನು ಪರಿಸರ ಹಾಗೂ ಮೀನುಗಾರಿಕಾ ಇಲಾಖಾ ಅಧಿಕಾರಿಗಳ ಬರುವಿಕೆಯ ವಿನಹಾ ನಡೆಸಬಾರದಾಗಿ ಆಗ್ರಹಿಸಿದರು. ತತ್‌ಕ್ಷಣವೇ ಅಧಿಕಾರಿಗಳನ್ನು ಸಂಪರ್ಕಿಸಿ ಮೀನುಗಾರಿಕಾ ಇಲಾಖಾ ಅಧಿಕಾರಿ ವಿಳಂಬವಾಗಿಯಾದರೂ ಸಭೆಗೆ ಹಾಜರಾದರು. ಪರಿಸರ ಇಲಾಖೆ ಅಧಿಕಾರಿ ಹಾಜರಾಗಿಲ್ಲ.

ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ | ದಯಾನಂದ ಪೈ ಮಾರ್ಗದರ್ಶಿ ಅಧಿಕಾರಿಯಾಗಿ ಸಭೆಯಲ್ಲಿದ್ದರು. ಸಭಾಧ್ಯಕ್ಷತೆಯನ್ನು ಗ್ರಾ. ಪಂ. ಅಧ್ಯಕ್ಷೆ ದಮಯಂತಿ ಅಮೀನ್‌ ವಹಿಸಿದ್ದರು. ಜಿ. ಪಂ. ಸದಸ್ಯ ಶಶಿಕಾಂತ್‌ಪಡುಬಿದ್ರಿ, ತಾ. ಪಂ. ಅಧ್ಯಕ್ಷೆ ನೀತಾ ಗುರುರಾಜ್‌, ಸದಸ್ಯ ದಿನೇಶ್‌ ಕೋಟ್ಯಾನ್‌, ಗ್ರಾ. ಪಂ. ಉಪಾಧ್ಯಕ್ಷ ವೈ. ಸುಕುಮಾರ್‌, ಗ್ರಾ. ಪಂ. ಸದಸ್ಯರು, ಗ್ರಾ. ಪಂ.ಸಿಬಂದಿಗಳು ಸಭೆಯಲ್ಲಿ ಉಪಸಸ್ಥಿತರಿದ್ದರು. ವಿವಿಧ ಇಲಾಖಾ ಅಧಿಕಾರಿಗಳಾದ ಡಾ | ಬಿ. ಬಿ. ರಾವ್‌, ಸುರೇಶ್‌ ಭಟ್‌, ಶ್ವೇತಾ ಮತ್ತಿತರರು ತಮ್ಮ ಇಲಾಖಾ ಮಾಹಿತಿಗಳನ್ನಿತ್ತರು.

ಪಡುಬಿದ್ರಿ ಗ್ರಾ. ಪಂ. ಪಿಡಿಒ ಪಂಚಾಕ್ಷರೀ ಸ್ವಾಮಿ ಸ್ವಾಗತಿಸಿ, ವರದಿ ವಾಚಿಸಿ, ಕಾರ್ಯಕ್ರಮ ನಿರ್ವಹಿಸಿದರು.

ಆಮ್ಲಜನಕದ ಕೊರತೆ ಮೀನುಗಳ ಸಾವಿಗೆ ಕಾರಣ
ಸಭೆಯಲ್ಲಿ ಮಾತಾಡಿದ ಮೀನುಗಾರಿಕಾ ಇಲಾಖಾ ಸಹಾಯಕ ಎಂಜಿನಿಯರ್‌ ಕಿರಣ್‌ ಕುಮಾರ್‌ ಹೊಳೆಯ ನೀರು ಅದರ ಬದಿಯ ಮನೆಗಳ ಪಾಯಿಖಾನೆಯ ತ್ಯಾಜ್ಯ ಮತ್ತು ತ್ಯಾಜ್ಯ ನೀರಿನಿಂದಾಗಿಯೇ ಕಲುಷಿತಗೊಂಡಿತ್ತು. ಹೊಳೆ ನೀರಿನಲ್ಲಿ ಸಲ್ಫೆàಟ್‌, ಅಮೋನಿಯಾ ಹಾಗೂ ಪಾಯಿಖಾನೆ ನೀರಿನಲ್ಲಿನ ಬ್ಯಾಕ್ಟೀರಿಯಾಗಳಿಂದಾಗಿ ಆಮ್ಲಜನಕದ ಕೊರತೆ ಏರ್ಪಟ್ಟು ಮೀನುಗಳ ಮತ್ತು ಬೆಳೆ ಹಾನಿಗೆ ಕಾರಣವಾಯಿತು ಎಂದು ವರದಿ ಬಂದಿರುವುದಾಗಿ ಸಭೆಯಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next