ಹುಬ್ಬಳ್ಳಿ: ಮೂರನೇ ದಿನವೂ ಸಾರಿಗೆ ಸಂಸ್ಥೆಯ ಬಸ್ ಸಂಚಾರಕ್ಕೆ ಪ್ರಯಾಣಿಕರು ಕೊಂಚ ಉತ್ಸಾಹ ತೋರಿದ್ದು, ಗುರುವಾರ ಹುಬ್ಬಳ್ಳಿ ಗ್ರಾಮಾಂತರ ವಿಭಾಗದಿಂದ 94 ಹಾಗೂ ನಗರ ಸಾರಿಗೆ ವಿಭಾಗದಿಂದ 71 ಬಸ್‌ಗಳನ್ನು ಬಿಡಲಾಗಿದೆ. ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಮೂರನೇ ದಿನ ಕೊಂಚ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ.
ಗೋಕುಲ ರಸ್ತೆ ಹೊಸ ಬಸ್ ನಿಲ್ದಾಣ, ಹೊಸುರು ಪ್ರಾದೇಶಿಕ ಬಸ್ ನಿಲ್ದಾಣ ಹಾಗೂ ಹಳೇ ಬಸ್ ನಿಲ್ದಾಣದಿಂದ ಬಸ್ ಬಿಡಲಾಗಿದ್ದು, ಮೂರು ನಿಲ್ದಾಣಗಳಿಂದ ಗುರುವಾರ 5581 ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳಿದ್ದಾರೆ. 4.43 ಲಕ್ಷ ರೂ. ಸಾರಿಗೆ ಆದಾಯ ಬಂದಿದೆ.
ಬೆಂಗಳೂರಿಗೆ-16, ಬೆಳಗಾವಿ-7,ಹಾವೇರಿ-8, ಹಾನಗಲ್ಲ-2, ವಿಜಯಪುರ-7, ಬಾಗಲಕೋಟೆ-7, ಗಂಗಾವತಿ-2, ಗದಗ-9, ಲಕ್ಷ್ಮೇಶ್ವರ-1, ಶಿರಶಿ-3 ಹಾಗೂ ಜಿಲ್ಲೆಯ ವಿವಿಧ ಸ್ಥಳಗಳಿಗೆ 32 ಬಸ್ ಸೇರಿದಂತೆ ಒಟ್ಟು 94 ಬಸ್‌ಗಳು ಕಾರ್ಯಾಚರಣೆಗೊಂಡಿವೆ. ಎರಡನೇ ದಿನ 91 ಬಸ್‌ಗಳು ಸಂಚರಿಸಿದ್ದವು. ಇನ್ನೂ ವಿವಿಧೆಡೆಯಿಂದ ಆಗಮಿಸಿದ ಬಸ್‌ಗಳ ಮೂಲಕವೂ ಪ್ರಯಾಣಿಕರು ಇಲ್ಲಿಂದ ಬೇರೆ ಕಡೆಗಳಿಗೆ ತೆರಳಿದ್ದಾರೆ.
ಮಧ್ಯಾಹ್ನ ನಿಲ್ದಾಣ ಖಾಲಿ: ಬೆಳಿಗ್ಗೆ 7:00 ರಿಂದ 10:00 ಗಂಟೆಯೊಳಗೆ ದೂರದ ಊರುಗಳಿಗೆ ಬಸ್‌ಗಳ ಸಂಚಾರ ಮಾಡುವುದರಿಂದ ನಿಲ್ದಾಣದಲ್ಲಿ ಬೆಳಗಿನ ವೇಳೆ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಮಯ ಕಳೆದಂತೆಲ್ಲಾ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತದೆ. ಮುನ್ನೆಚ್ಚರಿಕೆ ಕ್ರಮವಾಗಿ ಪ್ರಮುಖ ಮಾರ್ಗಗಳಿಗೆ ಬಸ್‌ಗಳ ವ್ಯವಸ್ಥೆ ಮಾಡಲಾಗಿರುತ್ತದೆ. ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಬಸ್‌ಗಳನ್ನು ವಾಪಸ್ ಡಿಪೋಗಳಿಗೆ ಕಳುಹಿಸಲಾಗುತ್ತದೆ.
ಬಸ್ ಸ್ಯಾನಿಟೈಸ್: ಒಮ್ಮೆ ಕಾರ್ಯಾಚರಣೆಗೊಳಿಸಿದ ಬಸ್‌ಗಳನ್ನು ಪುನಃ ಬಳಸದಿರಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಹೊರ ಹೋಗಿ ಬಂದ ಬಸ್‌ಗಳನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗುತ್ತಿದೆ. ದ್ರಾವಣ ಸಿಂಪಡಿಸಿದ ಬಸ್‌ಗಳನ್ನು ಎರಡು ದಿನಗಳ ಕಾಲ ಡಿಪೋಗಳಲ್ಲಿ ನಿಲ್ಲಿಸಲಾಗುತ್ತಿದೆ. ಹೆಚ್ಚಿನ ಮಾರ್ಗದಲ್ಲಿ ಬಸ್‌ಗಳ ಸಂಚಾರವಿಲ್ಲದೆ ಕಾರಣ ಇತರೆ ಬಸ್‌ಗಳನ್ನು ಬಳಸಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸೋಂಕು ಹರಡದಂತೆ ನಿಯಂತ್ರಿಸುವ ನಿಟ್ಟಿನಲ್ಲಿ ಎಲ್ಲಾ ಘಟಕಗಳಲ್ಲಿ ಈ ಕಾರ್ಯ ಮಾಡಲಾಗುತ್ತಿದೆ.
ನಗರ ಸಾರಿಗೆ ವಿಭಾಗ : ನಗರ ಸಾರಿಗೆ ವಿಭಾಗದಿಂದ ಮಹಾನಗರ ವ್ಯಾಪ್ತಿಯಲ್ಲಿ ಗುರುವಾರ 71 ಬಸ್‌ಗಳ ಸಂಚಾರವಾಗಿದ್ದು, ಮೂರನೇ ದಿನಬಸ್ ಹಾಗೂ ಪ್ರಯಾಣಿಕರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ನಗರ-25, ಹುಬ್ಬಳ್ಳಿ-ಧಾರವಾಡ ನಡುವೆ-39, ಉಪನಗರ-7 ಬಸ್ ಸಂಚಾರ ಮಾಡಿವೆ. ಕಳೆದ ಮೂರು ದಿನಗಳಿಂದ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನಡುವೆ ಸಂಚರಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಕೊಂಚ ಹೆಚ್ಚಳವಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ವಿಶ್ವಜ್ಞ ತಿಳಿಸಿದ್ದಾರೆ.
ಒಮ್ಮೆ ಕಾರ್ಯಾಚರಣೆಯಾದ ಬಸ್‌ಗಳನ್ನು ಸೋಡಿಯಂ ಹೈಪೋಕ್ಲೋರೈಡ್ ದ್ರಾವಣ ಸಿಂಪರಿಸಲಾಗುತ್ತಿದ್ದು, ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪ್ರಯಾಣಿಕರು ಯಾವುದೇ ಆತಂಕವಿಲ್ಲದೆ ಸಂಸ್ಥೆಯ ಬಸ್‌ಗಳಲ್ಲಿ ಸಂಚರಿಸಬಹುದು.
–ಎಚ್.ರಾಮನಗೌಡರ, ವಿಭಾಗೀಯ ನಿಯಂತ್ರಣಾಧಿಕಾರಿ