ಮುಂಬಯಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗಾಗಿ ವಿವಿಧ ರೀತಿಯಲ್ಲಿ ಶ್ರಮಿಸುತ್ತಿರುವ ಮುಂಬಯಿಯಲ್ಲಿ ನೆಲೆಸಿದ ಕರ್ನಾಟಕದ ಕರಾವಳಿಯ ಎಲ್ಲ ಜಾತೀಯ ಹಾಗೂ ವಿವಿಧ ಭಾಷೀಯ ಸಂಘಟನೆಗಳನ್ನೊಳಗೊಂಡ ಸರಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಮಾರ್ಗದರ್ಶಕರಾಗಿದ್ದ ಮಾಜಿ ಕೇಂದ್ರ ಸಚಿವ ಹಾಗೂ ಕಾರ್ಮಿಕ ಮುಂದಾಳು ಮಂಗಳೂರಿನವರೇ ಆದ ದಿ| ಜಾರ್ಜ್ ಫೆರ್ನಾಂಡಿಸ್ ಅವರ 92ನೇ ಜನ್ಮದಿನಾಚರಣೆ ಪ್ರಯುಕ್ತ ಜೂ. 3ರಂದು ಅಂತರ್ಜಾಲದ ಝೂಮ್ ಸಭೆಯನ್ನು ರಾತ್ರಿ 7.30ಕ್ಕೆ ಆಯೋಜಿಸಲಾಗಿದೆ.
ಸಭೆಯಲ್ಲಿ ಜಾರ್ಜ್ ಫೆರ್ನಾಂಡಿಸ್ ಅವರ ಬದುಕಿನ ಸಾರ್ಥಕತೆಯನ್ನು ಸ್ಮರಿಸಿ ಅವರ ಹೆಸರನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಿಡುವುದರ ಮೂಲಕ ಮಂಗಳೂರು ವಿಮಾನ ನಿಲ್ದಾಣದ ಹೆಸರನ್ನು ಜಾರ್ಜ್ ಫೆರ್ನಾಂಡಿಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂಬುದಾಗಿ ಪುನರ್‌ನಾಮಕರಣ ಮಾಡಲು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸರಕಾರವನ್ನು ಒತ್ತಾಯಿಸಲಾಗು ವುದು. ಮಂಗಳೂರು ವಿಮಾನ ನಿಲ್ದಾಣದಲ್ಲಿ ರಾತ್ರಿ ಸಮಯವೂ ವಿಮಾನ ಸಂಚಾರದ ಬಗ್ಗೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಬೇಡಿಕೆಗೆ ಮಾನ್ಯತೆ ನೀಡಲು ಕಾರಣಿಭೂತರಾದ
ಜಾರ್ಜ್ ಫೆರ್ನಾಂಡಿಸ್ ಮತ್ತು ಅವರ ಸಹೋದ್ಯೋಗಿ ಸಚಿವರ ಸಹಾಯ ಮತ್ತು ಬೆಂಬಲ ಅವಿಸ್ಮರಣೀಯ. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ಹಾಗೂ ಅಧ್ಯಕ್ಷ ತೋನ್ಸೆ ಜಯಕೃಷ್ಣ ಶೆಟ್ಟಿಯವರು ಸಮಿತಿಯ ಪರವಾಗಿ ಈಗಾಗಲೇ ಕೇಂದ್ರ ಸರಕಾರವನ್ನು ಸಂಪರ್ಕಿಸಿದ್ದು, ಈ ಬಗ್ಗೆ ಕಳೆದ ತಿಂಗಳು ಪ್ರಧಾನ ಮಂತ್ರಿಯವರ ಕಾರ್ಯಾಲಯವು ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ರವಾನಿಸಿದ್ದು, ಅದರ ಪ್ರತಿಯನ್ನು ಸಮಿತಿಯ ಅಧ್ಯಕ್ಷ ತೋನ್ಸೆ ಜಯಕೃಷ್ಣ ಶೆಟ್ಟಿಯವರಿಗೆ ಕಳುಹಿಸಿದ್ದಾರೆ.
ಪ್ರಧಾನ ಮಂತ್ರಿಯವರ ಕಾರ್ಯಾಲ ಯದಿಂದ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಒಂದೂವರೆ ತಿಂಗಳ ಮೊದಲೇ ಪತ್ರ ಬರೆಯಲಾಗಿದ್ದು, ಈ ವರೆಗೆ ಯಾವುದೇ ಕ್ರಮ ಕೈಕೊಳ್ಳದ ಕಾರಣ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ಹಾಗೂ ಅಧ್ಯಕ್ಷ ತೋನ್ಸೆ ಜಯಕೃಷ್ಣ ಶೆಟ್ಟಿಯವರು ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದು, ಪ್ರಧಾನ ಮಂತ್ರಿಯವರ ಕಾರ್ಯಾಲಯದ ಪತ್ರದಂತೆ ಮುಖ್ಯಮಂತ್ರಿಯವರಲ್ಲಿ ಚರ್ಚಿಸಿ ಮಂಗಳೂರು ವಿಮಾನ ನಿಲ್ದಾಣದ ಹೆಸರನ್ನು ಜಾರ್ಜ್ ಫೆರ್ನಾಂಡಿಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂಬುದಾಗಿ ಪುನರ್ ನಾಮಕರಣ ಮಾಡಲು ತಿಳಿಸಿದ್ದಾರೆ.
ಜಾರ್ಜ್ ಫೆರ್ನಾಂಡಿಸ್ ಅವರು ದೇಶಕ್ಕಾಗಿ ಸಲ್ಲಿಸಿದ ಸೇವಾಕಾರ್ಯಗಳನ್ನು ಈ ಸಭೆಯಲ್ಲಿ ಸ್ಮರಿಸಿ ಸಮಿತಿಯ ಮುಂದಿನ ಯೋಜನೆಗಳಿಗಾಗಿ ಚರ್ಚಿಸಲಾಗುವುದೆಂದು ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನ್ ದಾಸ್ ಮತ್ತು ಕೋಶಾಧಿಕಾರಿ ಸುರೇಂದ್ರ ಸಾಲ್ಯಾನ್ ತಿಳಿಸಿದ್ದಾರೆ.