Advertisement

ಕಾರ್ಕಳಕ್ಕೆ ಈವರೆಗೆ 922 ಮಂದಿ ಹೊರ ರಾಜ್ಯದಿಂದ ಆಗಮನ

11:56 PM May 14, 2020 | Sriram |

ಕಾರ್ಕಳ: ಗುರುವಾರ ಸಂಜೆವರೆಗೆ 213 ಮಂದಿ ಹೊರರಾಜ್ಯದಿಂದ ಕಾರ್ಕಳಕ್ಕೆ ಬಂದಿದ್ದು, ಮೇ 9ರಿಂದ ಒಟ್ಟು 922 ಮಂದಿ ಕಾರ್ಕಳ ಹಾಗೂ ಹೆಬ್ರಿ ತಾಲೂಕಿಗೆ ಆಗಮಿಸಿರುತ್ತಾರೆ. ಕ್ವಾರಂಟೈನ್ ಕೇಂದ್ರಗಳಾಗಿ ಸಿದ್ಧಪಡಿಸಲಾಗಿದ್ದ ಸಭಾಂಗಣ, ಹೊಟೇಲ್‌, ಶಾಲಾ ಕಾಲೇಜುಗಳಲ್ಲಿ ಹೊರ ರಾಜ್ಯದಿಂದ ಬಂದವರು ತಂಗಿದ್ದು, ಅಲ್ಲಿಯೇ ಅವರಿಗೆ ಬೇಕಾದ ಸಕಲ ಸೌಕರ್ಯ ಒದಗಿಸಿಕೊಡಲಾಗಿದೆ. ಕಾರ್ಕಳ ತಾಲೂಕಿನಲ್ಲಿ ಶಾಸಕ ವಿ. ಸುನಿಲ್‌ ಕುಮಾರ್‌ ಅವರ ನೇತೃತ್ವದಲ್ಲಿ ತಹಶೀಲ್ದಾರ್‌ ಪುರಂದರ ಹೆಗ್ಡೆ, ಪುರಸಭಾ ಮುಖ್ಯಾ ಧಿಕಾರಿ ರೇಖಾ ಜೆ. ಶೆಟ್ಟಿ, ವಿವಿಧ ಇಲಾಖಾಧಿಕಾರಿ, ಸಿಬಂದಿ ವರ್ಗದವರು ಬಹಳ ಅಚ್ಚುಕಟ್ಟಾಗಿ ಕ್ವಾರಂಟೈನ್ ಕೇಂದ್ರ ನಿರ್ಮಾಣ ಮಾಡಿದ್ದು, ಯಾವೊಂದೂ ಲೋಪವಾಗದಂತೆ ಸಕಲ ವ್ಯವಸ್ಥೆ ಒದಗಿಸಿಕೊಡಲಾಗಿದೆ. ಕೆಲವೊಂದು ಕ್ವಾರಂಟೈನ್ ಕೇಂದ್ರಗಳಿಗೆ ಟಿವಿ ಕಲ್ಪಿಸಲಾಗಿದ್ದು, ದಾನಿಗಳ ಸಹಕಾರದೊಂದಿಗೆ ಶುಚಿರುಚಿಯಾದ ಊಟೋಪಚಾರ ನೀಡಲಾಗುತ್ತಿದೆ.

Advertisement

ಬಂಡಿಮಠ ಏಕಗವಾಕ್ಷಿ ನೋಂದಣಿ ಕೇಂದ್ರ
ಬಂಡಿಮಠ ಬಸ್‌ ನಿಲ್ದಾಣದಲ್ಲಿ ಹೊರ ರಾಜ್ಯದಿಂದ ಆಗಮಿಸುವವರ ತಪಾಸಣೆ, ನೋಂದಣಿ ಕಾರ್ಯ ಮಾಡಲಾಗುತ್ತಿದೆ. ಅಲ್ಲಿಂದ ಹೊರರಾಜ್ಯದವರಿಗಾಗಿ ನಿಗದಿಗೊಳಿಸಿದ ಕ್ವಾರಂಟೈನ್ ಕೇಂದ್ರಗಳಿಗೆ ಕರೆತರಲಾಗುತ್ತಿದೆ. ದಿನದ 24 ಗಂಟೆಯೂ ನೋಂದಣಿ ಕೇಂದ್ರ ತೆರೆದಿದ್ದು, ಅಲ್ಲಿಗೆ ನಿಯೋಜಿಸಿದ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಾ.ಪಂ. ಇಒ ಡಾ. ಮೇ. ಹರ್ಷ ಕೆ.ಬಿ., ಬಿಇಒ ಶಶಿಧರ್‌ ಜಿ.ಎಸ್‌. ಅಲ್ಲಿನ ಉಸ್ತುವಾರಿ ವಹಿಸಿಕೊಂಡಿರುತ್ತಾರೆ.

ಬೃಹತ್ ಪರದೆ ಅಳವಡಿಕೆ
ಬಂಡಿಮಠದಲ್ಲಿ ನೋಂದಣಿ ಸಂದರ್ಭ ಹೊರರಾಜ್ಯದವರಿಗೆ ಸಮಯ ಕಳೆಯಲು ಬೃಹತ್ ಟಿವಿ ಪರದೆ ಅಳವಡಿಸಲಾಗಿದೆ. ಪಕ್ಕದಲ್ಲಿ ಆರೋಗ್ಯ ತಪಾಸಣೆ ಕೇಂದ್ರ, ಮೈಕ್‌ ವ್ಯವಸ್ಥೆಯೂ ಇದೆ. ಸುರಕ್ಷೆತೆಗಾಗಿ ಬಂಡಿಮಠ ಮೈದಾನದಲ್ಲಿ ಬ್ಯಾರಿಕೇಡ್‌ ಅನ್ನೂ ಅಳವಡಿಸಲಾಗಿದೆ. ಶಾಸಕರು ಪದೇ ಪದೇ ಅಲ್ಲಿಗಾಗಮಿಸಿ ಮಾಹಿತಿ ಪಡೆದುಕೊಂಡು ಮಾರ್ಗದರ್ಶನ ನೀಡುತ್ತಿದ್ದಾರೆ.

ಹಗಲಿರುಳು ಶ್ರಮಿಸುತ್ತಿರುವ ಸ್ವಯಂ ಸೇವಕರು
ಬಂಡಿಮಠ ಏಕಗವಾಕ್ಷಿ ಕೇಂದ್ರ, ಕ್ವಾರಂಟೈನ್ ಕೇಂದ್ರ, ಊಟೋಪಚಾರ ಒದಗಿಸುವಲ್ಲಿ ಸರಕಾರಿ ಅಧಿಕಾರಿ, ಸಿಬಂದಿ ವರ್ಗದೊಂದಿಗೆ ಕಾರ್ಕಳದ ಅನೇಕ ಯುವಕರು ಕೈಜೋಡಿಸಿಕೊಂಡಿದ್ದಾರೆ. ಈ ಯುವಕರು ಸೇವಾ ಮನೋಭಾವದೊಂದಿಗೆ ಹಗಲಿರುಳು ಶ್ರಮಿಸುತ್ತಿದ್ದು, ಹೊರರಾಜ್ಯದಿಂದ ಬಂದವರಿಗೆ ಯಾವೊಂದೂ ತೊಂದರೆಯಾಗದಂತೆ ನಿಸ್ವಾರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next