Advertisement

ದೇಶದ ಕಾರ್ಮಿಕರಲ್ಲಿ ಶೇ.92 ಅಸಂಘಟಿತ

07:16 AM Mar 02, 2019 | Team Udayavani |

ಹಾಸನ: ಅಸಂಘಟಿತ ಕಾರ್ಮಿಕರ ಜೀವನ ಮಟ್ಟ ಸುಧಾರಣೆಗಾಗಿ ಸರ್ಕಾರ ರೂಪಿಸಿರುವ ಕಾರ್ಯಕ್ರಮಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ ರೇವಣ್ಣ ಸಲಹೆ ನೀಡಿದರು. 

Advertisement

ನಗರದ ಅಂಬೇಡ್ಕರ್‌ ಭವನದಲ್ಲಿ ಕಾರ್ಮಿಕ ಇಲಾಖೆ, ರಾಜ್ಯ ಅಸಂಘಟಿತ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಏರ್ಪಡಿಸಿದ್ದ ಕಾರ್ಮಿಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಶೇ.92ಕ್ಕಿಂತ ಹೆಚ್ಚು ಕಾರ್ಮಿಕರು ಅಸಂಘಟಿತ ಕ್ಷೇತ್ರದಲ್ಲಿ ದುಡಿಯುತ್ತಿದ್ದು, ರಾಜ್ಯದಲ್ಲಿ 2.35 ಕೋಟಿ ಅಸಂಘಟಿತ ಕಾರ್ಮಿಕರಿದ್ದಾರೆ. ಅವರಲ್ಲಿ 1.70 ಕೋಟಿ ಅಸಂಘಟಿತ ವಲಯದಲ್ಲಿ ದುಡಿಯುತ್ತಿದ್ದಾರೆ ಎಂದು ಹೇಳಿದರು.

ಪರಿಹಾರ ಯೋಜನೆ: ಅಸಂಘಟಿತ ವಲಯದ ಬಹುತೇಕ ಕಾರ್ಮಿಕರು ಶಾಸನಬದ್ಧ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಕಾರ್ಮಿಕರ ಜೀವನ ಮಟ್ಟವನ್ನು ಸುಧಾರಿಸಬೇಕಾಗಿದೆ. ಆ ನಿಟ್ಟಿನಲ್ಲಿ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಕಾಯ್ದೆಯನ್ನು ಜಾರಿಗೆ ತರಲಾಗಿದ್ದು, ಇದರ ಸದ್ಬಳಕೆ ಆಗಬೇಕು.

ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಈಗಾಗಲೇ 144 ಅಸಂಘಟಿತ ವಲಯಗಳ ಕಾರ್ಮಿಕರನ್ನು ಗುರುತಿಸಿದೆ. ಖಾಸಗಿ, ವಾಣಿಜ್ಯ, ಸಾರಿಗೆ ಕಾರ್ಮಿಕರಿಗೆ 5 ಲಕ್ಷ ರೂ. ಅಪಘಾತ ಪರಿಹಾರ ಯೋಜನೆ ಜಾರಿಗೆ ತಂದಿದೆ. ಚಾಲಕರಿಗೆ ಅಪಘಾತ ಜೀವ ರಕ್ಷಕ ಯೋಜನೆಯಡಿ ಪ್ರಥಮ ಚಿಕಿತ್ಸಾ ತರಬೇತಿ ನೀಡಿ, ಕಿಟ್‌ ನೀಡಲಾಗುತ್ತಿದೆ ಎಂದು ರೇವಣ್ಣ ತಿಳಿಸಿದರು.

ಗುರುತಿನ ಚೀಟಿ ಪಡೆಯಿರಿ: ಹಿರಿಯ ಸಿವಿಲ್‌ ನ್ಯಾಯಾಧೀಶ ಸಿ.ಕೆ.ಬಸವರಾಜ್‌ ಮಾತನಾಡಿ, ಪ್ರತಿ ಜಿಲ್ಲೆಯಲ್ಲೂ ಕಾರ್ಮಿಕರಿಗೆ ಸೌಲಭ್ಯ ದೊರೆಯುತ್ತಿದ್ದು, ಅರಿವು ಮೂಡಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಕಾರ್ಡ್‌ ನೀಡಲಾಗುತ್ತಿದ್ದು, ಪಡೆಯುವಂತೆ ಹೇಳಿದರು. 

Advertisement

11.5 ಕೋಟಿ ರೂ. ಸೌಲಭ್ಯ: ಕಾರ್ಮಿಕ ಇಲಾಖೆ ಉಪ ಆಯುಕ್ತ ವೆಂಕಟೇಶ್‌ ಅಪ್ಪಯ್ಯ ಮಾತನಾಡಿ, ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಜಿಲ್ಲೆಗೆ ಸಂಬಂಧಿಸಿದ ಒಟ್ಟು 34,616 ಫ‌ಲಾನುಭವಿಗಳನ್ನು ಗುರುತಿಸಿ ಚೀಟಿ ನೀಡಲಾಗಿದೆ. ಇದುವರೆಗೂ ಫ‌ಲಾನುಭವಿಗಳಿಗೆ ಪಿಂಚಣಿ ಸೌಲಭ್ಯ, ಮದುವೆ, ಶೈಕ್ಷಣಿಕ ಸಹಾಯಧನ, ಹೆರಿಗೆ ಸೌಲಭ್ಯ, ಅಪಘಾತ ಪರಿಹಾರ, ಅಂತ್ಯಕ್ರಿಯೆ ವೆಚ್ಚದಂತಹ 14 ಸೌಲಭ್ಯಗಳನ್ನು ಒದಗಿಸಲಾಗಿದೆ. ಇದುವರೆಗೂ 14,937 ಫ‌ಲಾನುಭವಿಗಳಿಗೆ 11.5 ಕೋಟಿ ರೂ. ಸೌಲಭ್ಯ ನೀಡಲಾಗಿದೆ ಎಂದು ವಿವರ ನೀಡಿದರು.

ಸನ್ಮಾನ: ಕಾರ್ಯಕ್ರಮದಲ್ಲಿ ಕಟ್ಟಡ ಕಾರ್ಮಿಕರು, ಟೈಲರ್‌ಗಳು, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಮೆಕ್ಯಾನಿಕ್‌ಗಳು, ಮೂರು ಮತ್ತು ನಾಲ್ಕು ಚಕ್ರದ ಸಾರಿಗೆ ಚಾಲಕರು, ಹಮಾಲರು, ಮಂಡಕ್ಕಿ ಭಟ್ಟಿ ಕಾರ್ಮಿಕರು, ಮನೆ ಕೆಲಸದವರು, ಕ್ಷೌರಿಕರು ಮತ್ತು ಚಿಂದಿ ಆಯುವವರು ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಒಟ್ಟು 14 ಕಾರ್ಮಿಕರಿಗೆ ತಲಾ 10,000 ನಗದು ಮತ್ತು ಶ್ರಮ ಸನ್ಮಾನ ಪ್ರಶಸ್ತಿ ಹಾಗೂ 130 ಕಾರ್ಮಿಕರಿಗೆ ತಲಾ 1,000 ರೂ. ನಗದು, ವಿಶೇಷ ಪುರಸ್ಕಾರ ಮತ್ತು 50 ಸಾರಿಗೆ ಚಾಲಕರಿಗೆ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next