ಮಂಗಳೂರು: ಸಂಸದ ನಳಿನ್ ಕುಮಾರ್ ಕಟೀಲು ಶಿಫಾರಸಿನ ಮೇರೆಗೆ ಜಿಲ್ಲೆಯ ವಿವಿಧ ರಸ್ತೆಗಳು ಹಾಗೂ ಕಾಲೇಜುಗಳು ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಸರಕಾರ ಒಟ್ಟು 91.2 ಕೋ. ರೂ. ಅನುದಾನ ನೀಡಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಜಿತೇಂದ್ರ ಕೊಟ್ಟಾರಿ ತಿಳಿಸಿದರು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ರಸ್ತೆ ನಿಧಿ (ಸಿಆರ್‌ಎಫ್)ಯಿಂದ ಜಪ್ಪಿನಮೊಗರು ರಸ್ತೆಗೆ 3 ಕೋ. ರೂ., ಕಂಕನಾಡಿ- ಪಂಪುವೆಲ್ ಬೈಪಾಸ್ ರಸ್ತೆಗೆ 4 ಕೋ.ರೂ., ಪುತ್ತೂರಿನ ಮುಡಿಪಿನಡ್ಕ, ಮೈಂದನಡ್ಕ, ಸುಳ್ಯಪದವು ರಸ್ತೆಗಳಿಗೆ 5.5 ಕೋ. ರೂ, ಬಂಟ್ವಾಳದ ಬದನಾಜೆ, ಕುಂಡಡ್ಕ, ಪರಿಯಾಲ್ತಡ್ಕ 10 ಕಿ.ಮೀ. ರಸ್ತೆ ಅಗಲ ಹಾಗೂ ಅಭಿವೃದ್ಧಿಗೆ 10 ಕೋ.ರೂ. ನೀಡಲಾಗಿದೆ.
ರಾಷ್ಟ್ರೀಯ ಉಚ್ಚತರ ಶಿಕ್ಷಾ ಅಭಿಯಾನ ಯೋಜನೆಯಲ್ಲಿ ರಥಬೀದಿ, ಬೆಟ್ಟಂಪಾಡಿ, ವಾಮದಪದವು, ಹಳೆಯಂಗಡಿ, ಉಪ್ಪಿನಂಗಡಿ ಸರಕಾರಿ ಕಾಲೇಜುಗ ಳಿಗೆ ತಲಾ 2 ಕೋ. ರೂ., ಮಂಗಳೂರು ವಿ.ವಿ. ಅಭಿ ವೃದ್ಧಿಗೆ 20 ಕೋ.ರೂ. ಮಂಜೂರಾಗಿದ್ದು, ವಿ.ವಿ.ಗೆ ಈಗಾಗಲೇ 5.7 ಕೋ.ರೂ. ಬಿಡುಗಡೆಯಾಗಿದೆ.
ಸ್ವದೇಶ್ ದರ್ಶನ್ ಯೋಜನೆಯಡಿ ಪ್ರವಾಸೋದ್ಯಮ ಇಲಾಖೆಗೆ 19.64 ಕೋ.ರೂ., ನ್ಯಾಶನಲ್ ಸೈಕ್ಲೋನ್ ರಿಸ್ಕ್ ಮಿಟಿಗೇಶನ್ ಯೋಜನೆಯಡಿ ಜಿಲ್ಲೆಯ ಕರಾವಳಿಯ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ 19.06 ಕೋ.ರೂ. ಬಿಡುಗಡೆಯಾಗಿದೆ ಎಂದು ತಿಳಿಸಿದರು.
ರಾಜ್ಯ ಸರಕಾರವು ನಿರಂತರವಾಗಿ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು, ಇದಕ್ಕೆ ಪೂರಕವಾಗಿ ಮಠ, ಮಂದಿರಗಳನ್ನು ಸರಕಾರದ ಸುಪರ್ದಿಗೆ ತರುವ ನಿಟ್ಟಿನಲ್ಲಿ ಸಾರ್ವಜನಿಕರ ಅಭಿಪ್ರಾಯ ಕೇಳಿದೆ. ಮಂಗಳೂರಿನ ಈದ್ಗಾ ಮೈದಾನದಲ್ಲಿ ಪ್ರಾರ್ಥನಾ ಮಂದಿರಕ್ಕೆ 19 ಸೆಂಟ್ಸ್ ಜಾಗವನ್ನು ನೀಡಲು ಸರಕಾರ ಫೆ. 6ರಂದು ಗೆಜೆಟ್ ನೊಟಿಫಿಕೇಶನ್ ನೀಡಿದೆ. ಇದೇ ರೀತಿ ಹಿಂದೂ ಧಾರ್ಮಿಕ ಕ್ಷೇತ್ರಗಳಿಗೂ ಜಾಗ ಮಂಜೂರಾತಿ ನೀಡಬೇಕು ಎಂದು ಕೊಟ್ಟಾರಿ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಂದಾಳುಗಳಾದ ಡಿ. ವೇದವ್ಯಾಸ ಕಾಮತ್, ರಮೇಶ್ ಕಂಡೆಟ್ಟು, ಸತೀಶ್ ಪ್ರಭು ಉಪಸ್ಥಿತರಿದ್ದರು.