Advertisement

ರೈತರಿಗೆ ಸರಿಯಾಗಿ ಸಿಗುತ್ತಿಲ್ಲ “ಸಮ್ಮಾನ’; ಡಿಬಿಟಿ ವ್ಯವಸ್ಥೆಯಲ್ಲೂ ಲೋಪ

09:46 PM Sep 14, 2022 | Team Udayavani |

ವಿಧಾನಸಭೆ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಆರ್ಥಿಕ ನೆರವು ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಫ‌ಲಾನುಭವಿಗಳಿಗೆ ತಲುಪಿಸಲು ರೂಪಿಸಿರುವ ಡಿಬಿಟಿ ವ್ಯವಸ್ಥೆಯಲ್ಲೂ ಲೋಪ ಇರುವುದು ಪತ್ತೆಯಾಗಿದೆ.

Advertisement

ಮಹತ್ವಾಕಾಂಕ್ಷಿ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿಯಲ್ಲಿ 91.99 ಕೋಟಿ ರೂ. ಡಿಬಿಟಿ ಪಾವತಿ ಪ್ರಕ್ರಿಯೆ 2019-20ರಿಂದಲೂ ಬಾಕಿ ಇರುವುದು ಭಾರತ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಅದೇ ರೀತಿ ಕ್ಷೀರಸಿರಿ ಯೋಜನೆಯಲ್ಲಿ ಕಡತಗಳ ರಚನೆ ಮತ್ತು ಅನುಮೋದನೆಯಲ್ಲಿ ವಿಳಂಬವಾಗಿದ್ದರಿಂದ 8464 ಹಾಲು ಉತ್ಪಾದಕರಿಗೆ 56.08 ಲಕ್ಷ ರೂ. ಪಾವತಿಯು 2020ರ ಜನವರಿಯಿಂದ ಬಾಕಿ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಡಿಬಿಟಿ ಮೂಲಕ ನಡೆಸಿದ ಒಟ್ಟಾರೆ ವಹಿವಾಟುಗಳಲ್ಲಿ ಕೇವಲ ಶೇ.83ರಷ್ಟು ಮಾತ್ರ ಯಶಸ್ವಿಯಾಗಿದ್ದು, ಶೇ.14ರಷ್ಟು ವಹಿವಾಟುಗಳು ತಿರಸ್ಕೃತವಾಗಿರುವ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ರಾಷ್ಟ್ರೀಯ ಆಹಾರ ಭದ್ರತಾ ಮಿಷನ್‌ ಮತ್ತು ರೈತಸಿರಿ ಯೋಜನೆಗಳನ್ನು ಡಿಬಿಟಿ ಪೋರ್ಟಲ್‌ಗೆ ಅಳವಡಿಸಿದ್ದರೂ ಎರಡು ಯೋಜನೆಗಳ 5.94 ಕೋಟಿ ರು. ಡಿಬಿಟಿ ಪಾವತಿಯನ್ನು ಪೋರ್ಟಲ್‌ ಮೂಲಕ ಮಾಡಿಲ್ಲ ಎಂಬುದು ಸೇರಿದಂತೆ, ನೇರ ನಗದು ವರ್ಗಾವಣೆ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ ನಡೆಸಿದ ಸಿಎಜಿ, ಕ್ಷೀರಸಿರಿ ಯೋಜನೆ, ರಾಷ್ಟ್ರೀಯ ಆಹಾರ ಭದ್ರತಾ ಮಿಷನ್‌, ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ, ರೈತ ಸಿರಿ ಯೋಜನೆಗಳ ನ್ಯೂನತೆಗಳನ್ನು ಪತ್ತೆ ಮಾಡಿದೆ.

Advertisement

ಬುಧವಾರ ಸದನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವರದಿ ಮಂಡಿಸಿದ್ದು, ಸರ್ಕಾರದ ಫ‌ಲಾನುಭವಿಗಳಿಗೆ ನಗದು, ಪ್ರೋತ್ಸಾಹಧನ ವಿತರಣೆಯನ್ನು ಒಳಗೊಂಡಿರುವ ಎಲ್ಲಾ ಯೋಜನೆಗಳನ್ನು ಗುರುತಿಸಲು ಮತ್ತು ಸೇರ್ಪಡೆ ಮಾಡಲು ಹೊಸದಾಗಿ ಕಾಲಮಿತಿಯನ್ನು ನಿಗದಿಗೊಳಿಸಬೇಕು ಎಂದು ಸಿಎಜಿ ಶಿಫಾರಸ್ಸು ಮಾಡಿದೆ.

ಯೋಜನೆಗಳ ಫ‌ಲಾನುಭವಿಗಳಿಗೆ ಸೂಕ್ತರೀತಿಯಲ್ಲಿ ತಲುಪಬೇಕಾದರೆ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬೇಕು. ಇಲಾಖೆಗಳ ಅನುಸರಣೆಯನ್ನು ಮೇಲ್ವಿಚಾರಣೆ ಮಾಡಬೇಕು. ತಪ್ಪಾದ ಖಾತೆಗಳಿಗೆ ಹಣ ಜಮೆ ಮತ್ತು ಬಾಕಿ ಇರುವ, ತಿರಸ್ಕೃತಗೊಂಡಿರುವ ವಹಿವಾಟುಗಳ ಬಗ್ಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸಮಯಮಿತಿಯನ್ನು ನಿಗದಿ ಪಡಿಸಲು ಇಲಾಖೆಗಳಿಗೆ ನಿರ್ದೇಶನ ನೀಡಬೇಕು. ಪಶುಸಂಗೋಪನಾ ಇಲಾಖೆಯ ಕ್ಷೀರಸಿರಿ ಯೋಜನೆಯ ದತ್ತಾಂಶಗಳು ಡಿಜಿಟಲೀಕರಣದ ದೃಢಪಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.

ಮುಖ್ಯಾಂಶಗಳು
1. ವಿಫ‌ಲವಾದ ವಹಿವಾಟು ಸರಿಪಡಿಸುವಲ್ಲಿ ಹಾಗೂ ಪುನರಾರಂಭಿಸುವಲ್ಲಿ ಎಡವಿರುವುದು
2. 30 ದಿನ ಕಳೆದರೂ 91,283 ವಹಿವಾಟು ಪುನರಾರಂಭ ಆಗದಿರುವುದು.
3. ಪಾವತಿಗೆ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ವಿಫ‌ಲತೆ
4. 2018-19 ಹಾಗೂ 2019-20 ಅವಧಿಯಲ್ಲಿ 6.66 ಲಕ್ಷ ಫ‌ಲಾನುಭವಿಗಳಿಗೆ ಸಿಗದ ಯೋಜನೆ
5. 153.30 ಕೋಟಿ ರೂ.ಗಳಷ್ಟು ಆರ್ಥಿಕ ಪ್ರಯೋಜನದಿಂದ ವಂಚಿತರು.

 

Advertisement

Udayavani is now on Telegram. Click here to join our channel and stay updated with the latest news.

Next