Advertisement

ಜಿಲ್ಲೆಯ 900 ಗ್ರಾಮಗಳಿಗಿಲ್ಲ ಶುದ್ಧ ನೀರು

03:56 PM Aug 10, 2023 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕುಡಿಯುವ ನೀರಿನಲ್ಲಿ ಅಪಾಯಕಾರಿ ಲವಣಾಂಶ ಗಳು ಕಂಡು ಬರುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ, ಜಿಲ್ಲೆಯಲ್ಲಿನ ಅರ್ಧದಷ್ಟು ಗ್ರಾಮಗಳಿಗೆ ಇಂದಿಗೂ ಕೂಡ ಶುದ್ಧ ಕುಡಿಯುವ ನೀರಿನ ಖಾತ್ರಿ ಇಲ್ಲದೇ ಜನ ಪತಾಳಕ್ಕೆ ಕುಸಿದಿರುವ ಅಂತರ್ಜಲ ದಿಂದ ಬರುವ ಅಪಾಯಕಾರಿ ಜೀವ ನೀರು ಬಳಸುವ ದುಸ್ಥಿತಿ ಎದುರಾಗಿದೆ.

Advertisement

ಹೌದು… ಜಿಲ್ಲೆಯಲ್ಲಿ 1800 ಕ್ಕೂ ಹೆಚ್ಚು ಗ್ರಾಮಗಳಿದ್ದರೂ ಇಲ್ಲಿವರೆಗೂ ಸರ್ಕಾರ ಕೇವಲ ಅರ್ಧದಷ್ಟು ಗ್ರಾಮಗಳಿಗೆ ಮಾತ್ರ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪಿಸಿದ್ದು, ಉಳಿದಂತೆ ಸುಮಾರು 900 ಕ್ಕೂ ಹೆಚ್ಚು ಗ್ರಾಮಗಳಿಗೆ ಶುದ್ದ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಕಾರ್ಯ ನನೆಗುದಿಗೆ ಬಿದ್ದಿವೆ.

ಜಿಲ್ಲೆಗೆ ಅನ್ಯಾಯ:  ಹೇಳಿ ಕೇಳಿ ಬಯಲು ಸೀಮೆ ಜಿಲ್ಲೆಗಳ ವ್ಯಾಪ್ತಿಗೆ ಬರುವ ಚಿಕ್ಕಬಳ್ಳಾಪುರ ಜಿಲ್ಲೆಯು ದಶಕಗಳ ಮಳೆ, ಬೆಳೆ ಕೊರತೆಯಿಂದ ಹನಿ ಹನಿ ನೀರಿಗೂ ಪರದಾಟ ನಡೆಸಿದ್ದು, ಇಂದಿಗೂ ಶಾಶ್ವತ ನೀರಾವರಿ ಇಲ್ಲದೇ ಕುಡಿ ಯುವ ನೀರಿಗೆ ಅಂತರ್ಜಲವನ್ನೆ ಅಶ್ರಯಿಸಿಕೊಂಡಿವೆ. ಬರಗಾಲ ಬಂತು ಅಂದರೆ ಅಂತರ್ಜಲ ಇನ್ನಷ್ಟು ಕ್ಷೀಣಿಸುವ ಪರಿಸ್ಥಿತಿಗೆ ಹೋಗುತ್ತದೆ. ಆದರೆ ಜಿಲ್ಲೆಯಲ್ಲಿ ಮಾತ್ರ ಜನರಿಗೆ ದಶಕಗಳಿಂದಲೂ ಕುಡಿಯುವ ನೀರು ಶುದ್ಧೀಕರಣ ವಿಚಾರದಲ್ಲಿ ಆನ್ಯಾಯವಾಗುತ್ತಲೇ ಇದ್ದು, ಜನ ಅನಿರ್ವಾಯವಾಗಿ ಸ್ಥಳೀಯವಾಗಿ ಗ್ರಾಪಂಗಳು ನೀಡುವ ಕೊಳವೆ ಬಾವಿ ನೀರನ್ನೆ ಕುಡಿಯಲು ಬಳಸುವಂತಾಗಿದೆ.

ಜಿಲ್ಲೆಯನ್ನು ದಶಕಗಳ ಕಾಲ ಕಾಡಿದ ಬರದಿಂದ ಜಿಲ್ಲೆಯಲ್ಲಿ ಅಧಿಕ ಪ್ರಮಾಣದಲ್ಲಿ ಕೊರೆಸಿದ ಕೊಳವೆ ಬಾವಿಗಳಿಂದಾಗಿ ಜಿಲ್ಲೆಯ ಅಂತರ್ಜಲ ಪತಾಳಕ್ಕೆ ಕುಸಿದಿದ್ದು, ಇದರಿಂದಾಗಿ ಜಿಲ್ಲೆಯ ಕುಡಿಯುವ ನೀರಿನಲ್ಲಿ ಜನರ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುವ ಪ್ಲೋರೈಡ್‌ ಜತೆಗೆ ಇತ್ತೀಚೆಗೆ ಇತ್ತೀಚೆಗೆ ಭಾರತೀಯ ವಿಜ್ಞಾನ ಸಂಸ್ಥೆ ನಡೆಸಿದ ಅಧ್ಯಯನ ವರದಿಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಬಳಸುವ ಅಂತರ್ಜದಲ್ಲಿ ಅಪಾಯಕಾರಿ ಯೋರೇನಿಯಂ ಅತ್ಯಧಿಕ ಪ್ರಮಾಣದಲ್ಲಿ ಇರುವುದನ್ನು ದೃಢಪಡಿಸಿದೆ.

920 ಶುದ್ಧ ನೀರಿನ ಘಟಕಗಳು:  ಜಿಲ್ಲೆಯಲ್ಲಿ ಒಟ್ಟು 920 ಶುದ್ದ ಕುಡಿಯುವ ನೀರಿನ ಘಟಕಗಳು ಇದ್ದು ಆವುಗಳ ಪೈಕಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆ ವ್ಯಾಪ್ತಿಯಲ್ಲಿಯೆ ಬರೋಬರಿ 758 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಉಳಿದಂತೆ 162 ಘಟಕಗಳು ಕೋಚಿಮುಲ್‌, ಟಿಎಪಿಸಿಎಂಎಸ್‌, ವಿವಿಎಸ್‌ಎನ್‌ ಸೇರಿದಂತೆ ಹಲವು ಸಹಕಾರಿ ಸಂಘ ಸಂಸ್ಥೆಗಳು ಮುಂದೆ ಬಂದು ಶುದ್ಧ ನೀರಿನ ಘಟಕಗಳು ಸ್ಥಾಪಿಸಿವೆ. ಆದರೆ ಬಹುತೇಕ ಶುದ್ಧ ನೀರಿನ ಘಟಕಗಳು ಸೂಕ್ತ ನಿರ್ವಹಣೆ ಇಲ್ಲದೇ ಸೊರಗುವಂತಾಗಿವೆ. ಕೆಲವೊಂದು ದುರಸ್ತಿಗೆ ಬಂದು ತಿಂಗಳಗಳೇ ಕಳೆದರೂ ನಿರ್ವಹಣೆ ಹೊಣೆ ಹೊತ್ತ ಸಂಸ್ಥೆಗಳು ಕಾಳಜಿವಹಿಸಿ ರಿಪೇರಿ ಮಾಡಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಗ್ರಾಪಂಗಳಿಗೂ ಈ ಬಗ್ಗೆ ಸರ್ಕಾರದಿಂದ ಸೂಕ್ತ ನಿರ್ದೇಶನ ಇಲ್ಲದ ಕಾರಣ ಗ್ರಾಪಂಗಳ ಅಧಿಕಾರಿಗಳು ಕೂಡ ಶುದ್ಧ ನೀರಿನ ಘಟಕಗಳಿಗೆ ನೀರು ಸರಬರಾಜು ಮಾಡುವುದು ಬಿಟ್ಟರೆ ರಿಪೇರಿ ಬಂದಾಗ ಅವುಗಳ ಕಡೆ ತಲೆ ಹಾಕುತ್ತಿಲ್ಲ. ಹೀಗಾಗಿ  ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನಲ್ಲಿ ಪ್ಲೋರೈಡ್‌ ಮತ್ತಿತರ ಅಪಾಯಕಾರಿ ಅಂಶಗಳು ಇರುವ ಕಡೆ ಸ್ಥಾಪಿಸಿರುವ ಶುದ್ಧ ನೀರಿನ ಘಟಕಗಳು ಕೂಡ ಕೇವಲ ಹೆಸರಿಗಷ್ಟೇ ಇದ್ದು, ಜನ ಅನಿವಾರ್ಯಯವಾಗಿ ಸ್ಥಳೀಯವಾಗಿ ಸಿಗುವ ಜೀವ ಜಲವನ್ನೇ ಬಳಕೆ ಮಾಡುವ ಮೂಲಕ ಗೊತ್ತಿಲ್ಲದೇ ರೋಗ ರುಜನಗಳಿಗೆ ತುತ್ತಾಗುತ್ತಿದ್ದಾರೆ.

Advertisement

ಜಲ ಜೀವನ್‌ ಕಾಮಗಾರಿಗೆ ಗುತ್ತಿಗೆದಾರರ ನಿರಾಸಕ್ತಿ! :

ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಮನೆ ಮನೆಗೆ ನಳದ ಮೂಲಕ ಶುದ್ಧ ನೀರು ಪೂರೈಸುವ ಜಲ ಜೀವನ್‌ ಮಿಷನ್‌ ಯೋಜನೆ ಅನುಷ್ಠಾನಕ್ಕೆ ಗುತ್ತಿಗೆದಾರರರು ನಿರಾಸಕ್ತಿ ವಹಿಸಿದ್ದಾರೆ. ಜಲ ಜೀವನ್‌ ಮಿಷನ್‌ ಯೋಜನೆಯಡಿ ಸುಮಾರು 1500 ಕ್ಕಿಂತ ಹೆಚ್ಚು ಗ್ರಾಮಗಳಲ್ಲಿ ಯೋಜನೆ ಅನುಷ್ಠಾನಗೊಳ್ಳಬೇಕಿದ್ದು, ಕೇವಲ ಇಲ್ಲಿವರೆಗೂ 700 ಗ್ರಾಮಗಳಲ್ಲಿ ಮಾತ್ರ ಯೋಜನೆ ಅನುಷ್ಠಾನಗೊಂಡಿದೆ. ಇನ್ನೂ ಸುಮಾರು 750 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಟೆಂಡರ್‌ ಕರೆದರೂ ಟೆಂಡರ್‌ನಲ್ಲಿನ ಭಾಗವಹಿಸುವಿಕೆಗೆ ಜಿಲ್ಲೆಯ ಗುತ್ತಿಗೆದಾರರ ಹಿಂದೇಟು ಹಾಕುತ್ತಿರುವುದು ಜಲ ಜೀವನ್‌ ಮಿಷನ್‌ ಯೋಜನೆ ಅನುಷ್ಠಾನಕ್ಕೆ ದೊಡ್ಡ ಸವಾಲಾಗಿದೆ. ಇದನ್ನು ಅರಿತು ಜಿಲ್ಲೆಯ ಉಸ್ತುವಾರಿ ಸಚಿವರಾದ ಡಾ.ಎಂ.ಸಿ.ಸುಧಾಕರ್‌ ಜಿಲ್ಲೆಯ ಗುತ್ತಿಗೆದಾರರೊಂದಿಗೆ ಮುಂದಿನ ವಾರದಲ್ಲಿ ಸಭೆ ಕರೆಯಲು ಮುಂದಾಗಿದ್ದಾರೆ.

ಅನೇಕ ರೋಗ ರುಜನಗಳಿಗೆ ಜನ ತುತ್ತು!:

ಜಿಲ್ಲೆಯಲ್ಲಿ ಕುಡಿಯುವ ನೀರಿನಲ್ಲಿ ಶುದ್ಧತೆಯ ಕೊರತೆಯಿಂದಾಗಿ ವಿಶೇಷವಾಗಿ ಗ್ರಾಮೀಣ ಜನರು ಸಾಕಷ್ಟು ರೋಗ ರುಜನಗಳಿಗೆ ತುತ್ತಾಗಿ ತಮಗೆ ಅರಿವು ಇಲ್ಲದಂತೆ ಅನೇಕ ಸಂಕಟಗಳಿಗೆ ತುತ್ತಾಗುವಂತಾಗಿದೆ. ವಿಶೇಷವಾಗಿ ಜಿಲ್ಲೆಯ ಬಾಗೇಪಲ್ಲಿ, ಗುಡಿಬಂಡೆ, ಚಿಂತಾಮಣಿ ತಾಲೂಕುಗಳಲ್ಲಿ ಪ್ಲೋರೈಡ್‌ ಪರಿಣಾಮ ಪ್ಲೋರೋಸಿಸ್‌ ಹಾಗೂ ಮಹಿಳೆಯರು ಗರ್ಭಕೋಶದತಂಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ, ರಾಜ್ಯ ಸರ್ಕಾರ ಜಿಲ್ಲೆಯ ಪ್ರತಿ ಗ್ರಾಮಕ್ಕೂ ಶುದ್ದ ನೀರಿನ ಘಟಕಗಳನ್ನು ತೆರೆದು ಅವುಗಳನ್ನು ಸಮರ್ಪಕವಾಗಿ ನಿರ್ವಹಿಸುವ ಹೊಣೆ ಹೊರಬೇಕಿದೆ.

ಜಿಲ್ಲೆಯಲ್ಲಿ 1,847 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕಗಳ ಅಗತ್ಯವಿದ್ದು, ಈ ಪೈಕಿ 920 ಘಟಕಗಳನ್ನು ಈಗಾಗಲೇ ಸ್ಥಾಪಿಸಲಾಗಿದ್ದು, ಇನ್ನುಳಿದ ಸುಮಾರು 924 ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳ ಸ್ಥಾಪಿಸಬೇಕಿದೆ. ಈಗಾಗಲೇ ಸ್ಥಾಪಿಸಲಾಗಿರುವ ಶುದ್ಧ ನೀರಿನ ಘಟಕಗಳು ಸರಿಯಾಗಿ ಕಾರ್ಯನಿರ್ವಹಿ ಸುತ್ತಿಲ್ಲ . ಪದೇ ಪದೆ ದುರಸ್ತಿಗೆ ಬರುತ್ತಿವೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು, ಈ ಬಗ್ಗೆ ಸಮಗ್ರ ಪರಿಶೀಲನೆ ನಡೆಯಬೇಕಿದೆ.-ಡಾ.ಎಂ.ಸಿ.ಸುಧಾಕರ್‌, ಜಿಲ್ಲಾ ಉಸ್ತುವಾರಿ ಸಚಿವರು.

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಅಂರ್ತಜಲದಲ್ಲಿ ಅಪಾಯಕಾರಿ ರಾಸಾಯನಿಕ ಪತ್ತೆ ಆಗಿದೆ. ಈ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ನಡೆಸಿದ ಅಧ್ಯಯನ ವರದಿ ಕೇಂದ್ರದ ಜಲಶಕ್ತಿ ಸಚಿವರ ಗಮನಕ್ಕೂ ಬಂದಿದೆ. ಸರ್ಕಾರ ಜಿಲ್ಲೆಗೆ ಶುದ್ಧ ಕುಡಿಯುವ ನೀರು ಕೊಡದೇ ಆನ್ಯಾಯವೆಸಗುತ್ತಿದೆ. ಜಿಲ್ಲೆಯ ಕೆರೆಗಳಿಗೆ ತುಂಬಿಸುತ್ತಿರುವ ಹೆಚ್‌ಎನ್‌ ವ್ಯಾಲಿ ನೀರನ್ನು ಕೂಡ ಮೂರನೇ ಹಂತದಲ್ಲಿ ಶುದ್ಧೀಕರಣ ಮಾಡಬೇಕು.-ಆರ್‌.ಆಂಜನೇಯರೆಡ್ಡಿ, ಜಿಲ್ಲಾಧ್ಯಕ್ಷರು, ಶಾಶ್ವತ ನೀರಾವರಿ ಹೋರಾಟ ಸಮಿತಿ.

-ಕಾಗತಿ ನಾಗರಾಜಪ್ಪ

 

Advertisement

Udayavani is now on Telegram. Click here to join our channel and stay updated with the latest news.

Next