Advertisement

Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ

09:06 AM Sep 21, 2024 | Team Udayavani |

ಇಂಫಾಲ್: ಮ್ಯಾನ್ಮಾರ್ ನಿಂದ 900 ಕುಕಿ ಉಗ್ರರು ಒಳನುಸುಳಿರುವುದು ಮಣಿಪುರದಲ್ಲಿ ಬೆಳಕಿಗೆ ಬಂದಿದೆ ಎಂದು ರಾಜ್ಯ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್ ಮಾಹಿತಿ ನೀಡಿದ್ದಾರೆ.

Advertisement

ಶುಕ್ರವಾರ (ಸೆ.20) ರಂದು ಪತ್ರಿಕಾಗೋಷ್ಠಿ ನಡೆಸಿದ ಅವರು ಕಳೆದ ಮೂರ್ನಾಲ್ಕು ದಿನಗಳಿಂದ ಮಣಿಪುರದಲ್ಲಿ ಉಗ್ರಗಾಮಿಗಳ ಚಲನವಲನದ ಬಗ್ಗೆ ವರದಿಯಾಗುತ್ತಿದೆ ಒಳನುಸುಳುವ ಉಗ್ರಗಾಮಿಗಳು ಡ್ರೋನ್‌ಗಳು, ಬಾಂಬ್‌ಗಳು, ಸ್ಪೋಟಕಗಳು, ಕ್ಷಿಪಣಿಗಳು ಮತ್ತು ಗೆರಿಲ್ಲಾ ಯುದ್ಧ ಸಾಧನಗಳನ್ನು ಬಳಸುತ್ತಿದ್ದಾರೆ, 30-30 ಜನರ ತಂಡ ವಿವಿಧ ಪ್ರದೇಶಗಳಲ್ಲಿ ಅಡಗಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಸೆಪ್ಟೆಂಬರ್ 28 ರ ಒಳಗೆ ಈ ತಂಡ ಮೈತೆಯ್ ಗ್ರಾಮಗಳ ಮೇಲೆ ದಾಳಿ ನಡೆಸುವ ಮುನ್ಸೂಚನೆ ಇದ್ದು ದಾಳಿಯ ಭೀತಿಯ ಹಿನ್ನೆಲೆಯಲ್ಲಿ ಚುರಾಚಂದ್‌ಪುರ, ತೆಂಗನೌಪಾಲ್, ಉಖ್ರುಲ್, ಕಾಮ್‌ಜಾಂಗ್ ಮತ್ತು ಫರ್ಜೌಲ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಹೇಳಿದ್ದಾರೆ.

ಮಣಿಪುರದಲ್ಲಿ ಮೇ 3, 2023 ರಿಂದ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ಮೀಸಲಾತಿಗಾಗಿ ಹಿಂಸಾಚಾರ ನಡೆಯುತ್ತಿದೆ. ಸರ್ಕಾರಿ ಅಂಕಿಅಂಶಗಳ ಪ್ರಕಾರ, ಹಿಂಸಾಚಾರದಲ್ಲಿ ಇದುವರೆಗೆ 237 ಜನರು ಸಾವನ್ನಪ್ಪಿದ್ದಾರೆ. 1500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 60 ಸಾವಿರಕ್ಕೂ ಹೆಚ್ಚು ಮಂದಿ ಮನೆ ತೊರೆದಿದ್ದಾರೆ.

Advertisement

ಮಣಿಪುರ ಪೊಲೀಸರು, ಸಿಆರ್‌ಪಿಎಫ್ ಮತ್ತು ಬಿಎಸ್‌ಎಫ್ ಜಂಟಿ ಕಾರ್ಯಾಚರಣೆಯಲ್ಲಿ ಸೆಪ್ಟೆಂಬರ್ 12 ರಂದು ಚುರಾಚಂದ್‌ಪುರದಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಸೇನೆ ವಶಪಡಿಸಿಕೊಂಡಿತ್ತು.

ಇಂಫಾಲದಲ್ಲಿ ಸಚಿವರ ಆಪ್ತ ಸಹಾಯಕನ ಅಪಹರಣ:
ಶುಕ್ರವಾರ (ಸೆ.20) ರಂದು ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಅಪರಿಚಿತ ದುಷ್ಕರ್ಮಿಗಳ ತಂಡವೊಂದು ಮಣಿಪುರ ಸಚಿವ ಎಲ್. ಸುಸಿಂದರೊ ಅವರ ಆಪ್ತ ಸಹಾಯಕನನ್ನು ಅವರ ನಿವಾಸದಿಂದಲೇ ಬೆಳಗ್ಗೆ 8:30ರ ಸುಮಾರಿಗೆ ಅಪಹರಿಸಲಾಗಿದೆ, ಆಪ್ತ ಸಹಾಯಕನನ್ನು ಸಾರಂಗ್ತೇಂ ಸೋಮರಂದ್ರೋ(43) ಎಂದು ಗುರುತಿಸಲಾಗಿದೆ. ಘಟನೆಯ ವೇಳೆ ಅವರು ತಮ್ಮ ಅಧಿಕೃತ ಕೆಲಸಕ್ಕಾಗಿ ಹೋಗುತ್ತಿದ್ದರು ಈ ವೇಳೆ ತಂಡ ಹಲವು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಅಪಹರಣ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಹರಣಕ್ಕೊಳಗಾದ ವ್ಯಕ್ತಿಗಾಗಿ ಶೋಧ ನಡೆಯುತ್ತಿದೆ. ಆತನ ಅಪಹರಣದ ಹಿಂದಿನ ಕಾರಣ ತಿಳಿದುಬಂದಿಲ್ಲ. ಅಲ್ಲದೇ ಯಾವುದೇ ಬಂಡುಕೋರ ಗುಂಪು ಘಟನೆಯ ಹೊಣೆ ಹೊತ್ತುಕೊಂಡಿಲ್ಲ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next