Advertisement
ಸಾಂಸ್ಕೃತಿಕವಾಗಿ ತನ್ನನ್ನು ಮನರಂಜನೆಗೆ ಒಡ್ಡಿಕೊಳ್ಳುವ ಮೂಲಕ ಆತ್ಮ ಸಂತೋಷವನ್ನು ಪಡೆದುಕೊಳ್ಳಬಹುದು ಎಂದು ಅರಿವಾದ ಕಾಲಘಟ್ಟದಿಂದ ಮನುಷ್ಯ ನಾಟಕ, ದೊಡ್ಡಾಟ, ಯಕ್ಷಗಾನ, ಹರಿಕಥೆ, ಹಾಡು, ಸಂಗೀತ ಮುಂತಾದ ನಾನಾ ರೂಪಗಳಿಂದ ಮನರಂಜನೆ ಪಡೆಯತೊಡಗಿದ. ರಂಗಭೂಮಿ, ಪರದೆಯಂತಹ ಕಲ್ಪನೆಗಳನ್ನು ಸಾಕಾರಗೊಳಿಸಿಕೊಂಡು ಈ ಮಾಧ್ಯಮಕ್ಕೆ ಮತ್ತಷ್ಟು ರಂಗನ್ನು ತಂದುಕೊಟ್ಟ. ನಾಟಕ, ಸಂಗೀತ ಇವಿಷ್ಟೇ ಮನರಂಜನೆಯ ಮಾಧ್ಯಮವಾಗಿದ್ದಾಗ 18ನೇ ಶತಮಾನದ ಅಂತ್ಯದಲ್ಲಿ ವಿಶ್ವದಲ್ಲಿ ಒಂದು ಅಚ್ಚರಿ ಘಟಿಸಿತು. 1895ರ ನವೆಂಬರ್ 28ರಂದು ಪ್ಯಾರಿಸ್‌ನಲ್ಲಿ ಲುಮಿನರ್ ಸಹೋದರರು ಚಲನಚಿತ್ರವೆಂಬ ಅದ್ಭುತ, ರೋಮಾಂಚಕತೆಯನ್ನು ತೆರೆದಿಟ್ಟರು. ಕೇವಲ ಆರು ತಿಂಗಳಲ್ಲಿಯೇ ಈ ವಿಸ್ಮಯ ಭಾರತಕ್ಕೂ ಕಾಲಿರಿಸಿತು. 1907ರಲ್ಲಿ ಭಾರತದ ಮೊತ್ತ ಮೊದಲ ಚಿತ್ರಮಂದಿರ ಎಲ್ಫಿನ್ಸ$rನ್ ಪಿಕ್ಚರ್ ಪ್ಯಾಲೇಸ್’ ಕಲ್ಕತ್ತದಲ್ಲಿ ಪ್ರಾರಂಭವಾಯಿತು.
Related Articles
Advertisement
ರಾಜ್ ಕುಮಾರ್ ಯುಗ ಆರಂಭ…
1954ರಲ್ಲಿ “ಬೇಡರ ಕಣ್ಣಪ್ಪ’ ಚಿತ್ರದ ಮೂಲಕ ರಾಜಕುಮಾರ್ ಚಿತ್ರರಂಗ ಪ್ರವೇಶಿಸಿದರು. ಕನ್ನಡದ ಮೊದಲ ವಾಕಿcತ್ರ “ಸತಿ ಸಲೋಚನ’ ಬಿಡುಗಡೆಗೊಂಡ 20 ವರ್ಷಗಳ ನಂತರ ರಾಜಕುಮಾರ್ ನಾಯಕರಾಗಿ ಅಭಿನಯಿಸಿದ ಮೊದಲ ಚಿತ್ರ ತೆರೆಗೆ ಬಂದಿತು. ಮೊದಲ 20 ವರ್ಷಗಳ ದೀರ್ಘಾವಧಿಯಲ್ಲಿ ಬಿಡುಗಡೆಗೊಂಡ ಕನ್ನಡ ಚಿತ್ರಗಳ ಸಂಖ್ಯೆ ಕೇವಲ 41. ಆದರೆ ರಾಜಕುಮಾರ್ ಚಿತ್ರರಂಗ ಪ್ರವೇಶಿಸಿದ ಒಂದು ದಶಕದಲ್ಲಿ ಬಿಡುಗಡೆಗೊಂಡ ಕನ್ನಡ ಚಲನಚಿತ್ರಗಳ ಸಂಖ್ಯೆ ಸುಮಾರು 125. ಕನ್ನಡ ಭಾಷೆಯ ರಾಯಭಾರಿಯಾಗಿ ಅಮೋಘ ಚಿತ್ರಗಳನ್ನು ನೀಡಿದ ರಾಜಕುಮಾರ್ ಅವರ ಸಾಧನೆಯೇ ಒಂದು ವಿಸ್ಮಯ. ಭಕ್ತಿಪ್ರಧಾನ ಚಿತ್ರದಿಂದ ಚಿತ್ರರಂಗ ಪ್ರವೇಶಿಸಿದ ರಾಜಕುಮಾರ್, ವಿಭಿನ್ನ ಪಾತ್ರಗಳನ್ನು ಲೀಲಾಜಾಲವಾಗಿ ನಿರ್ವಹಿಸುವ ಮೂಲಕ ಚಲನಚಿತ್ರ ಕ್ಷೇತ್ರದಲ್ಲಿ ಜನಪ್ರಿಯರಾದರು.
ಮೊದಲ ವರ್ಣ, ಸಿನಿಮಾ ಸ್ಕೋಪ್ ಚಿತ್ರ:
ಕನ್ನಡ ನಾಡಿನಲ್ಲಿಯೇ ಕನ್ನಡ ಚಿತ್ರೋದ್ಯಮ ನೆಲೆಯೂರಬೇಕೆಂಬ ಕಾರಣದಿಂದ ಸಹಾಯಧನ ಪದ್ಧತಿಯನ್ನು ಜಾರಿಗೊಳಿಸಬೇಕೆಂಬ ಸಲಹೆಯನ್ನು 1962ರಲ್ಲಿ ಡಿ.ಶಂಕರಸಿಂಗ್ ಸರ್ಕಾರಕ್ಕೆ ನೀಡಿದರು. ಅಂದಿನ ಹಣಕಾಸು ಸಚಿವರಾದ ರಾಮಕೃಷ್ಣ ಹೆಗ್ಡೆ 50,000 ರೂ. ಸಹಾಯಧನ ಘೋಷಿಸಿದರು. ಕನ್ನಡದ ಮೊದಲ ಚಿತ್ರ ತೆರೆ ಕಂಡ 30 ವರ್ಷಗಳ ನಂತರ 1964ರಲ್ಲಿ ಕನ್ನಡದ ಮೊಟ್ಟ ಮೊದಲ ವರ್ಣಚಿತ್ರ “ಅಮರಶಿಲ್ಪಿ ಜಕಣಾಚಾರಿ’ ಬಿಡುಗಡೆಗೊಂಡಿತು.
1966ರಲ್ಲಿ ಸರ್ಕಾರ ಚಲನಚಿತ್ರಗಳಿಗೆ ಪ್ರಶಸ್ತಿ ನೀಡುವ ಪರಿಪಾಠಕ್ಕೆ ನಾಂದಿ ಹಾಡಿತು. 1977ರಲ್ಲಿ ಬಿಡುಗಡೆಯಾದ “ಸೊಸೆ ತಂದ ಸೌಭಾಗ್ಯ’ ಕನ್ನಡದ ಮೊದಲ ಸಿನಿಮಾಸ್ಕೋಪ್ ಚಿತ್ರ. ಅರವತ್ತರ ದಶಕದಲ್ಲಿ ವಾರ್ಷಿಕ 10-15 ಕನ್ನಡ ಚಲನಚಿತ್ರಗಳು ಬಿಡುಗಡೆಗೊಳ್ಳುತ್ತಿದ್ದರೆ, 90ರ ದಶಕಕ್ಕೆ ಅವುಗಳ ಸಂಖ್ಯೆ 50-60ಕ್ಕೆ ಏರಿತು. ಹಲವು ವರ್ಷ 100 ಚಿತ್ರಗಳನ್ನು ದಾಟಿದ್ದೂ ಉಂಟು.
ಸುಭದ್ರ ಹೆಜ್ಜೆಗುರುತು :
ಸಿದ್ಧಲಿಂಗಯ್ಯ ನಿರ್ದೇಶಿಸಿ, ರಾಜಕುಮಾರ್ ಅಭಿನಯಿಸಿದ “ಬಂಗಾರದ ಮನುಷ್ಯ’ (1972) ಸಾರ್ವಕಾಲಿಕ ದಾಖಲೆ ಪ್ರದರ್ಶನವನ್ನು ಕಂಡಿತು. 1972ರಲ್ಲಿಯೇ ತೆರೆ ಕಂಡ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ “ನಾಗರಹಾವು’ ಚಿತ್ರದ ಮೂಲಕ ಮತ್ತೂಬ್ಬ ನಾಯಕ ನಟ ವಿಷ್ಣುವರ್ಧನ್ ಚಿತ್ರರಂಗಕ್ಕೆ ಪ್ರವೇಶಿಸಿದರು. ಈ ಚಿತ್ರದಿಂದಲೇ ಪರಿಚಯವಾದ ಅಂಬರೀಷ್ ಮುಂದೆ ನಾಯಕ ನಟರಾದರು. 1987ರಲ್ಲಿ ರವಿಚಂದ್ರನ್ ಅಭಿನಯಿಸಿ ತೆರೆಗೆ ತಂದ “ಪ್ರೇಮಲೋಕ’ ಶ್ರೀಮಂತ ನಿರ್ಮಾಣ ಹಾಗೂ ಪ್ರೇಮರಾಗಧಾರೆಯ ಚಿತ್ರಗಳಿಗೆ ಪ್ರೇರಣೆಯಾಯಿತು ಕಲ್ಯಾಣಕುಮಾರ್, ಉದಯಕುಮಾರ್, ಲೋಕೇಶ್, ಶ್ರೀನಾಥ್, ಶಂಕರ್ ನಾಗ್, ಅನಂತ ನಾಗ್, ದ್ವಾರಕೀಶ್, ರಮೇಶ್ ಅರವಿಂದ್, ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಪುನೀತ್ ರಾಜಕುಮಾರ್, ಸುದೀಪ್, ದರ್ಶನ್, ಯಶ್ ಸೇರಿದಂತೆ ಹಲವು ನಾಯಕರು, ಬಿ.ಸರೋಜಾ ದೇವಿ, ಲೀಲಾವತಿ, ಜಯಂತಿ, ಭಾರತಿ, ಆರತಿ, ಜಯಮಾಲ, ತಾರಾ, ಪ್ರೇಮಾ, ರಮ್ಯಾ ಮೊದಲಾದ ನಾಯಕಿಯರು ಇರಿಸಿದ ಹೆಜ್ಜೆಗುರುತುಗಳಲ್ಲಿ ಮುಂದೆ ಸಾಗಿ ಬಂದ ಹಲವಾರು ನಾಯಕ- ನಾಯಕಿಯರು ಕನ್ನಡ ಚಿತ್ರರಂಗದ ಬೆಳವಣಿಗೆಗೆ ಕಾರಣರಾದರು.
ದಶಕಗಳು ಉರುಳಿದಂತೆ ಚಲನಚಿತ್ರಗಳ ಸ್ವರೂಪದಲ್ಲಿ ಮಹತ್ತರ ಬದಲಾವಣೆಗಳಾದವು. ಚಿತ್ರರಂಗ ತಾಂತ್ರಿಕವಾಗಿ ಶ್ರೀಮಂತವಾಯಿತು. ಕಪ್ಪು-ಬಿಳುಪು ಚಿತ್ರಗಳಾಗಿ ಬಿಡುಗಡೆಗೊಂಡು ಪ್ರೇಕ್ಷಕರ ಮನ ತಣಿಸಿದ್ದ “ಕಸ್ತೂರಿ ನಿವಾಸ’ ಹಾಗೂ “ಸತ್ಯ ಹರಿಶ್ಚಂದ್ರ’ ವರ್ಣ ಚಿತ್ರಗಳಾಗಿ ಬಿಡುಗಡೆಗೊಳ್ಳುವಷ್ಟು ತಂತ್ರಜ್ಞಾನ ಮೇಲೇರಿತು. 90ರ ಇಳಿ ವಯಸ್ಸಿನ ವರ್ಣಸುಂದರಿ ಈಗ ಕೃತಕ ಬುದ್ಧಿಮತ್ತೆಯ ಯುಗದತ್ತ ಮುನ್ನೆಡೆಯುತ್ತಿದ್ದಾಳೆ.
ಕಾಲ ಮತ್ತು ಲೆಕ್ಕಾಚಾರ ಬದಲಾಗಿದೆ…
90 ವರ್ಷಗಳ ಈ ಸುದೀರ್ಘ ಅವಧಿಯಲ್ಲಿ ನಮ್ಮ ಊಹೆಗೂ ನಿಲುಕದಂಥ ಬದಲಾವಣೆಗಳಾಗಿವೆ. ಒಂದು ಸಣ್ಣ ಉದಾಹರಣೆ ಕೇಳಿ: 1934ರಲ್ಲಿ ತೆರೆ ಕಂಡ ಕನ್ನಡದ ಮೊದಲನೆಯ ಚಿತ್ರ “ಸತಿ ಸುಲೋಚನ’ ನಿರ್ಮಾಣಕ್ಕೆ ಅಗ ತಗುಲಿದ ವೆಚ್ಚ 70,000 ರೂ.ಗಳು. 2022ರಲ್ಲಿ ತೆರೆ ಕಂಡ ಯಶ್ ಅಭಿನಯದ ‘ಕೆಜಿಎಫ್ 2’ ಚಲನಚಿತ್ರ ಗಳಿಸಿದ ಹಣ 1200 ಕೋಟಿ ಎನ್ನಲಾಗಿದೆ. ಈ ಚಿತ್ರದ ನಿರ್ಮಾಣಕ್ಕೆ ತೊಡಗಿಸಿದ ಹಣ ಸುಮಾರು 100 ಕೋಟಿ ರೂ.
ಸದ್ದು ಮಾಡಿದ ಹೊಸ ಅಲೆಯ ಚಿತ್ರಗಳು
70ರ ದಶಕದಲ್ಲಿ ಕನ್ನಡದಲ್ಲಿ ಒಂದಾದ ನಂತರ ಒಂದು ಹೊಸ ಅಲೆಯ ಚಿತ್ರಗಳು ರೂಪುಗೊಂಡು ಸದ್ದು ಮಾಡಿದವು. ಪಟ್ಟಾಭಿರಾಮರೆಡ್ಡಿ, ಗಿರೀಶ್ ಕಾರ್ನಾಡ್, ಬಿ.ವಿ.ಕಾರಂತ್, ಜಿ.ವಿ.ಅಯ್ಯರ್ ಮುಂತಾದವರು ಇಂತಹ ಪ್ರಯೋಗಗಳನ್ನು ಮಾಡಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಕನ್ನಡ ಚಲನಚಿತ್ರಗಳನ್ನು ತೆಗೆದುಕೊಂಡು ಹೋದರು. ಈ ಪರಂಪರೆಯನ್ನು ಗಿರೀಶ್ ಕಾಸರವಳ್ಳಿ, ಟಿ.ಎಸ್.ನಾಗಾಭರಣ, ಪಿ.ಶೇಷಾದ್ರಿ ಮುಂತಾದವರು ಮುಂದುವರೆಸಿಕೊಂಡು ಹೋದರು. ಪಿ.ಲಂಕೇಶ್ ಅವರ ನಂತರ ಬರಗೂರು ರಾಮಚಂದ್ರಪ್ಪ ಹೊಸ ಪ್ರಯೋಗಗಳನ್ನು ಮಾಡಿದರು. ಎಂ. ಎಸ್.ಸತ್ಯು ಅವರೂ ಹೊಸ ಅಲೆಯ ಚಿತ್ರ ನಿರ್ಮಿಸಿ ತಮ್ಮ ಕೊಡುಗೆ ನೀಡಿದರು.
ಡಿವಿಜಿ ಕಿವಿಮಾತು: ಸ್ಕೂಲ್ ಮಾಸ್ಟರ್ ಬಂತು! :
ಮಹಾತ್ಮ ಪಿಕ್ಚರ್ಸ್ ಸಂಸ್ಥೆ ನಿರ್ಮಾಣ ಮಾಡಿದ ಡಿ.ಶಂಕರಸಿಂಗ್ ಮತ್ತು ವಿಠಲಾಚಾರ್ಯ ನಿರ್ಮಿಸಿದ “ನಾಗಕನ್ನಿಕಾ'(1949) ಜಾನಪದ ಚಿತ್ರ ಜನರನ್ನು ಹುಚ್ಚೆಬ್ಬಿಸಿತು. ವಿಠಲಾಚಾರ್ಯ ಅವರಂತೂ ಜಾನಪದ ಚಿತ್ರಗಳ ಸರಮಾಲೆಯನ್ನೇ ಕೊಟ್ಟರು. 1958ರಲ್ಲಿ ಕನ್ನಡ ಚಿತ್ರರಂಗದ ರಜತ ಮಹೋತ್ಸವ ಬೆಂಗಳೂರಿನ ಪುರಭವನದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಿ.ವಿ.ಗುಂಡಪ್ಪನವರು, ಕನ್ನಡ ಚಿತ್ರರಂಗದ ಬೆಳ್ಳಿಹಬ್ಬ ಅರ್ಥಪೂರ್ಣವಾಗಬೇಕಾದರೆ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಬಲ್ಲಂತಹ ಅತ್ಯುತ್ತಮ ಕನ್ನಡ ಚಿತ್ರವೊಂದನ್ನು ನಿರ್ಮಿಸುವಂತೆ ಪಂತಲು ಅವರಿಗೆ ಕರೆ ನೀಡಿದರು. ಈ ಸ್ಫೂರ್ತಿಯಿಂದ “ಸ್ಕೂಲ್ ಮಾಸ್ಟರ್’ ರೂಪುಗೊಂಡಿತು. 1955ರಲ್ಲಿ ಬಿಡುಗಡೆಗೊಂಡ ‘ಮೊದಲತೇದಿ’ ಚಿತ್ರದಿಂದ ಆರಂಭಿಸಿ ನಿರ್ಮಾಪಕ ಬಿ.ಆರ್.ಪಂತುಲು ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಹಲವಾರು ಉತ್ಕೃಷ್ಟ ಚಿತ್ರಗಳನ್ನು ನೀಡಿದರು. ಒಂದು ಕಾರ್ಖಾನೆಯಂತೆ ಚಿತ್ರ ಸಂಸ್ಥೆಯನ್ನು ನಡೆಸಿದರು.