Advertisement

ಚಂದನವನಕ್ಕೆ ತೊಂಬತ್ತು; ನಡೆದುಬಂದ ಹಾದಿಯಲ್ಲಿ ನೆನಪುಗಳ ಮೆರವಣಿಗೆ

03:19 PM Feb 09, 2024 | Team Udayavani |

ಯಾವುದೇ ಒಂದು ಚಿತ್ರರಂಗ ಗಟ್ಟಿಯಾಗಿ ನೆಲೆನಿಂತು ತನ್ನ ತನ ಪ್ರದರ್ಶಿಸಬೇಕಾದರೆ ಅಲ್ಲೊಂದು ಇಚ್ಛಾಶಕ್ತಿ ಕೆಲಸ ಮಾಡಬೇಕಾಗುತ್ತದೆ. ಜೊತೆಗೆ ಗುರಿ ಮುಟ್ಟುವ ಛಲ ಬೇಕಾಗುತ್ತದೆ. ಇವತ್ತು ಕನ್ನಡ ಚಿತ್ರರಂಗ ಹಲವು ಅಡೆತಡೆಗಳನ್ನು ದಾಟಿ 90ನೇ ವರ್ಷಕ್ಕೆ ಬಂದು ನಿಂತಿದೆ. ಒಂದು ಸೃಜನಶೀಲ ಕ್ಷೇತ್ರ 90 ವರ್ಷ ಪೂರೈಸುವುದು ಸುಲಭದ ಮಾತಲ್ಲ. ಆ ನಿಟ್ಟಿನಲ್ಲಿ ಕನ್ನಡ ಚಿತ್ರರಂಗ ನಡೆದುಬಂದ ಹಾದಿ ಸ್ತುತ್ಯರ್ಹ.

Advertisement

1934ರಲ್ಲಿ ತೆರೆಕಂಡ “ಸತಿ ಸುಲೋಚನಾ’ ಸಿನಿಮಾದಿಂದ ಆರಂಭವಾದ ಚಂದನವನದ ಸಿನಿಯಾನ ಇವತ್ತು ಇಡೀ ದೇಶವೇ ತಿರುಗಿ ನೋಡುವಂತಾಗಿದೆ ಎಂದರೆ ಇದರ ಹಿಂದೆ ಇಡೀ ಚಿತ್ರರಂಗದ ಶ್ರಮವಿದೆ, ಹಿರಿಯರ ಮಾರ್ಗದರ್ಶನವಿದೆ. ಅನೇಕ ಹಿರಿಯರು ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಚಿತ್ರರಂಗ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಸಿದೆ. ನಿರ್ಮಾಪಕರು, ವಿತರಕರು, ಪ್ರದರ್ಶಕರು, ಕಲಾವಿದರು, ತಂತ್ರಜ್ಞರು ಹೀಗೆ ಚಿತ್ರರಂಗವನ್ನು ನಂಬಿಕೊಂಡವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅವರೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು 90 ವರ್ಷದ ಸಂಭ್ರಮವನ್ನು ದೊಡ್ಡಮಟ್ಟದಲ್ಲಿ ಮಟ್ಟದಲ್ಲಿ ಮಾಡಬೇಕಿದೆ.

ಸೋಲು-ಗೆಲುವು, ನೋವು-ನಲಿವುಗಳೊಂದಿಗೆ 90ರ ಹೊಸ್ತಿಲಿನಲ್ಲಿ ಬಂದು ನಿಂತ ಕನ್ನಡ ಚಿತ್ರರಂಗದ ಹಾದಿಯನ್ನು ಮೆಲುಕು ಹಾಕುವ, ಸಂಭ್ರಮಿಸುವ ಕಾರ್ಯ ಆಗಲೇಬೇಕು. ಕನ್ನಡ ಚಿತ್ರರಂಗ 75 ವರ್ಷ ಪೂರೈಸಿದಾಗ ಅಮೃತ ಮಹೋತ್ಸವದಂತಹ ಕಾರ್ಯಕ್ರಮ ಆಯೋಜಿಸಿ ಇಡೀ ಚಿತ್ರರಂಗಕ್ಕೆ ಹೊಸ ಉತ್ಸಾಹ ತುಂಬಲಾಗಿತ್ತು. ಈಗ ಇಡೀ ಚಿತ್ರರಂಗ ಮತ್ತೆ ಒಂದಾಗಬೇಕಿದೆ. 90 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗ ಮಾತೃ ಸಂಸ್ಥೆಯಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತವಾಗಬೇಕಿದೆ. ಒಂದು ಅರ್ಥಪೂರ್ಣ ಕಾರ್ಯಕ್ರಮದ ಮೂಲಕ ಕನ್ನಡ ಚಿತ್ರರಂಗ ತನ್ನ ಸಾಮರ್ಥ್ಯ, ನಡೆದು ಬಂದ ಹಾದಿಯ ಜೊತೆಗೆ ಒಗ್ಗಟ್ಟಿನ ಪ್ರದರ್ಶನ ಮಾಡಲು ಇದು ಸಕಾಲ.

ಚಿತ್ರರಂಗದ ಹಬ್ಬವಾಗಲಿ

ಪ್ರತಿ ಶುಕ್ರವಾರ ಸಿನಿಮಾ ಬಿಡುಗಡೆಯಾದಾಗ ಆಯಾ ತಂಡಗಳು ಸಂಭ್ರಮಿಸುತ್ತವೆ. ಆದರೆ, ಇಡೀ ಚಿತ್ರರಂಗ ಒಟ್ಟಾದರೆ ಅದೊಂದು ಹಬ್ಬವಾಗುವುದರಲ್ಲಿ ಎರಡು ಮಾತಿಲ್ಲ. ಚಿತ್ರರಂಗದ ಕಾರ್ಯಕ್ರಮ ಎಂದರೆ ಎಲ್ಲಾ ವಿಭಾಗಗಳು ತಮ್ಮ ವೈಯಕ್ತಿಕ ಮನಸ್ತಾಪ, ಹಿತಾಸಕ್ತಿಗಳನ್ನು ಬದಿಗಿಟ್ಟು “ನಮ್ಮ ಮನೆ ಕಾರ್ಯಕ್ರಮ’ ಎಂದು ಭಾಗವಹಿಸುವುದರಲ್ಲಿ ಎರಡು ಮಾತಿಲ್ಲ. ಆದರೆ, ಇದಕ್ಕೊಂದು ಸೂಕ್ತವಾದ ವೇದಿಕೆ ಬೇಕಷ್ಟೇ. ಈ ಕಾರ್ಯವನ್ನು ವಾಣಿಜ್ಯ ಮಂಡಳಿ ಹಾಗೂ ಚಿತ್ರರಂಗದ ಇತರ ಅಂಗ ಸಂಸ್ಥೆಗಳು ಸೇರಿ ಮಾಡಬೇಕಿದೆ. ಚಿತ್ರರಂಗದ ಎಲ್ಲಾ ವಿಭಾಗಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋದಲ್ಲಿ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ದಾಖಲಾಗುವ ಕಾರ್ಯಕ್ರಮವಾಗುವು ದರಲ್ಲಿ ಎರಡು ಮಾತಿಲ್ಲ.

Advertisement

ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಮಿಂಚು

ಕನ್ನಡ ಚಿತ್ರರಂಗ ಸದ್ಯ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಒಂದು ಸಮಯದಲ್ಲಿ ಸ್ಯಾಂಡಲ್‌ವುಡ್‌ ಬಗ್ಗೆ ಅಸಡ್ಡೆಯಿಂದ ಮಾತನಾಡುತ್ತಿದ್ದ ಪರಭಾಷಾ ಮಂದಿ ಇವತ್ತು ಕನ್ನಡ ಚಿತ್ರರಂಗದ ಮೇಲೆ ಒಂದು ಕಣ್ಣಿಟ್ಟಿದ್ದಾರೆ. ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳು ತಯಾರಾಗುತ್ತಿವೆ ಎಂಬ ಮಾತು ಜೋರಾಗಿಯೇ ಕೇಳಿಬರುತ್ತಿವೆ. ಇವೆಲ್ಲವೂ 90ನೇ ವರ್ಷದ ಕಾರ್ಯಕ್ರಮವನ್ನು ಸುಂದರವನ್ನಾಗಿಸಲು ಸಹಕಾರಿಯಾಗಲಿದೆ. ಎಲ್ಲಾ ಭಾಷೆಯ ನಟ-ನಟಿಯರು, ನಿರ್ದೇಶಕರು, ತಂತಜ್ಞರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಮಾಡುವ ಜವಾಬ್ದಾರಿ ಕೂಡಾ ಮಂಡಳಿ ಮೇಲಿದೆ. ಈ ನಿಟ್ಟಿನಲ್ಲಿ ಮಂಡಳಿ ರೂಪುರೇಷೆ ಸಿದ್ಧಪಡಿಸಬೇಕಿದೆ. ಜೊತೆಗೆ ಸರ್ಕಾರ ಹಾಗೂ ಇತರ ಸಂಘ-ಸಂಸ್ಥೆಗಳ ಸಹಕಾರವನ್ನು ಪಡೆದು ಮುಂದುವರೆದಲ್ಲಿ 90ನೇ ವರ್ಷದ ಕಾರ್ಯಕ್ರಮ ಮತ್ತಷ್ಟು ಅರ್ಥಪೂರ್ಣವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next