ಬೆಲ್ಜಿಯಂ: ಮಾರಣಾಂತಿಕ ಕೋವಿಡ್ 19 ವೈರಸ್ ಭಯಭೀತಿ ಹುಟ್ಟಿಸಿರುವ ನಡುವೆಯೇ ಹಲವು ಮಾನವೀಯ ಮುಖಗಳ ಪರಿಚಯವಾಗುತ್ತಿದೆ. ಇದಕ್ಕೊಂದು ಉದಾಹರಣೆ ಕೋವಿಡ್ ಪೀಡಿತ 90 ವರ್ಷದ ಅಜ್ಜಿಯ ನಿಧನ. ಹೌದು ಕೋವಿಡ್ ಪೀಡಿತ 90 ವರ್ಷದ ಅಜ್ಜಿ ವೆಂಟಿಲೇಟರ್ ನಿರಾಕರಿಸಿದ್ದರು. ಅದಕ್ಕೆ ಕಾರಣ ನನಗಿಂತ ಕಿರಿಯ ರೋಗಿಯನ್ನು ಬದುಕಿಸಿ ಎಂದು ಹೇಳುವ ಮೂಲಕ ಮಾನವೀಯತೆ ಗುಣ ಮೆರೆದಿದ್ದಾರೆ.
ಬೆಲ್ಜಿಯಂನ 90ವರ್ಷದ ಸುಝಾನ್ನೆ ಹೊಯ್ಲೆರ್ಟ್ಸ್ ಕೋವಿಡ್ 19 ವೈರಸ್ ನಿಂದಾಗಿ ಮಾರ್ಚ್ 20ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿತ್ತು. ಮಾಧ್ಯಮದ ವರದಿ ಪ್ರಕಾರ, ಕೋವಿಡ್ 19 ರೋಗಿಗಳ ಜೀವ ಉಳಿಸಲು ಜಗತ್ತಿನಾದ್ಯಂತ ವೆಂಟಿಲೇಟರ್ ಕೊರತೆ ಇದೆ. ಮನುಷ್ಯನ ಜೀವ ಉಳಿಸಲು ಇರುವ ಏಕೈಕ ಉಪಕರಣ ವೆಂಟಿಲೇಟರ್. ಹೀಗಾಗಿ ತನಗೆ ವೆಂಟಿಲೇಟರ್ ಬೇಡ ಎಂದು ವೈದ್ಯರಲ್ಲಿ ತಿಳಿಸಿದ್ದರು.
ನನಗೆ ಯಾವುದೇ ಕೃತಕ ಉಸಿರಾಟದ ವ್ಯವಸ್ಥೆ ಬೇಡ. ನಾನು ಈಗಾಗಲೇ ಉತ್ತಮ ಜೀವನ ಅನುಭವಿಸಿದ್ದೇನೆ. ಇದೀಗ ನನ್ನ ವಯಸ್ಸು 90 ವರ್ಷ. ನನಗಿಂತ ಕಿರಿಯ ರೋಗಿಗಳ ಜೀವ ಉಳಿಸಲು ವೆಂಟಿಲೇಟರ್ ಬಳಸಿ ಎಂದು ಅಜ್ಜಿ ವಿನಂತಿಸಿಕೊಂಡಿದ್ದರು ಎಂದು ವರದಿ ವಿವರಿಸಿದೆ.
ಹಸಿವಿನ ಕೊರತೆ ಮತ್ತು ಉಸಿರಾಟದ ತೊಂದರೆಯಿಂದ ಸುಝಾನ್ನೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಪರೀಕ್ಷೆಗೊಳಪಡಿಸಿದಾಗ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿತ್ತು. ಬಳಿಕ ಐಸೋಲೇಶನ್ ನಲ್ಲಿ ಇಡಲಾಗಿತ್ತು ಎಂದು ವರದಿ ತಿಳಿಸಿದೆ.
ಡಚ್ ಪತ್ರಿಕೆಯೊಂದಿಗೆ ಮಾತನಾಡಿದ ಆಕೆ ಪುತ್ರಿ ಜುಡಿತಾ, ನಾನಿಗಲೂ ನನ್ನ ತಾಯಿಗೆ ಗುಡ್ ಬೈ ಹೇಳಲಾರೆ. ನನಗೆ ಆಕೆಯ ಅಂತಿಮ ಸಂಸ್ಕಾರಕ್ಕೂ ಹೋಗುವ ಅವಕಾಶ ಕೂಡಾ ಇಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಆಕೆಗೆ ಕೋವಿಡ್ 19 ಸೋಂಕು ಹೇಗೆ ತಗುಲಿತು ಎಂಬುದು ಇಡೀ ಕುಟುಂಬಕ್ಕೆ ದಿಗ್ಭ್ರಮೆ ಹುಟ್ಟಿಸಿದೆ. ದೇಶಾದ್ಯಂತ ಲಾಕ್ ಡೌನ್ ಇದ್ದಿದ್ದರಿಂದ ತಾಯಿ ಮನೆಯಿಂದ ಹೊರಗೆ ಹೋಗಿರಲಿಲ್ಲವಾಗಿತ್ತು ಎಂದು ಮಗಳು ತಿಳಿಸಿದ್ದಾರೆ.