Advertisement
ಜಿಲ್ಲೆಯ ಮಾನ್ವಿ ತಾಲೂಕಿನ ಬೆಟ್ಟದೂರು ತಾಂಡಾದಲ್ಲಿ ಮನೆಯಲ್ಲಿ ಒಬ್ಬರಿಗಾದರೂ ಕಿಡ್ನಿ ಸಮಸ್ಯೆ ಕಾಡದೆ ಬಿಟ್ಟಿಲ್ಲ. ಪುರುಷರಿಗೆ ಕಿಡ್ನಿಯಲ್ಲಿ ಕಲ್ಲುಗಳಾದರೆ, ಮಹಿಳೆಯರಿಗೆ ನಾನಾ ದೈಹಿಕ ಬಾಧೆಗಳು ಪೀಡಿಸುತ್ತಿವೆ. ಈಗ ಬೇಸಿಗೆ ಶುರುವಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಗ್ರಾಮದಲ್ಲಿ 110ಕ್ಕೂ ಅಧಿಕ ಮನೆಗಳಿದ್ದು, 800ಕ್ಕೂ ಹೆಚ್ಚು ಜನರಿದ್ದಾರೆ. ಆದರೆ, ತಾಂಡಾಕ್ಕೆ ಶುದ್ಧ ಕುಡಿವ ನೀರಿನ ಭಾಗ್ಯವಿಲ್ಲ. ಕೊಳವೆಬಾವಿಗಳ ನೀರನ್ನೇ ಸೇವಿಸಬೇಕಿದ್ದು, ಅದರಲ್ಲಿನ ಫ್ಲೋರೈಡ್, ಲವಣ ಹಾಗೂ ಸುಣ್ಣದ ಅಂಶಗಳಿಂದ ಕಿಡ್ನಿಯಲ್ಲಿ ಕಲ್ಲುಗಳಾಗುತ್ತಿವೆ ಎಂಬುದು ಗ್ರಾಮಸ್ಥರ ಅಳಲು.
ಹಲವು ವರ್ಷಗಳಿಂದ ಈ ಸಮಸ್ಯೆ ಗ್ರಾಮವನ್ನು ಬೆಂಬಿಡದೆ ಕಾಡುತ್ತಿದೆ. ತುಂಗಭದ್ರಾ ಎಡದಂಡೆ ಕಾಲುವೆ ಬಂದಿದೆಯಾದರೂ ಕೊನೆ ಭಾಗದ ರೈತರಿಗೆ ನೀರು ತಲುಪುವುದಿಲ್ಲ. ಮಿಗಿಲಾಗಿ ಬೇಸಿಗೆಯಲ್ಲಿ ಕಾಲುವೆಯಲ್ಲಿ ನೀರೇ ಇರುವುದಿಲ್ಲ. ಹೀಗಾಗಿ ಗ್ರಾಮಸ್ಥರಿಗೆ ಈ ಕೊಳವೆಬಾವಿ ನೀರೆ ಗತಿ. ನೋಡಲು ತಿಳಿಯಾಗಿದ್ದರೂ, ದೇಹಕ್ಕೆ ಮಾತ್ರ ಹಿತವಲ್ಲ. ನಿಯಮಿತವಾಗಿ ನೀರು ಕುಡಿಯುವುದರಿಂದಲೂ ದೇಹಕ್ಕೆ ತೊಂದರೆ ತಪ್ಪಿದ್ದಲ್ಲ. ಮೊದಲಿನಿಂದಲೂ ಇಲ್ಲಿ ಈ ಸಮಸ್ಯೆ ಇದೆ. ಆದರೆ, ಈಚೆಗೆ ಯುವಕರು ವಿದ್ಯಾವಂತರಾದ ಕಾರಣ ಸಮಸ್ಯೆ ಮೂಲ ಗೊತ್ತಾಗಿದೆ. ಒಮ್ಮೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು 30ರಿಂದ 40 ಸಾವಿರ ರೂ. ಖರ್ಚಾಗುತ್ತಿದೆ. ತಿಂಗಳುಗಟ್ಟಲೇ ವಿಶ್ರಾಂತಿ ಬೇಕಿದ್ದು, ದುಡಿಯದಿದ್ದರೆ ಹೊಟ್ಟೆ ಪಾಡೇನು ಎಂದು ಪ್ರಶ್ನಿಸುತ್ತಾರೆ ತಾಂಡಾ ನಿವಾಸಿಗಳು. ಈ ಬಗ್ಗೆ ಜನಪ್ರತಿನಿಧಿಧಿಗಳಿಗೆ, ಅಧಿಧಿಕಾರಿಗಳಿಗೆ ಸಲ್ಲಿಸಿದ ಮನವಿಗಳು ಧೂಳು ತಿನ್ನುತ್ತಿವೆ ಎಂಬುದು ನಿವಾಸಿಗಳ ದೂರು.
Related Articles
ಬೆಟ್ಟದೂರು ತಾಂಡಾ ಮಾತ್ರವಲ್ಲದೆ ಈ ಭಾಗದ ಜನರಲ್ಲಿ ಬೇಸಿಗೆ ವೇಳೆ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಬೇಸಿಗೆ ವೇಳೆ ಬಿಸಿಲಿನ ತಾಪ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿರುತ್ತದೆ. ಪ್ರಖರ ಬಿಸಿಲಿಗೆ ದೇಹದಲ್ಲಿ ನೀರಿನಂಶ ಕುಗ್ಗಿ ಕ್ಯಾಲ್ಸಿಯಂ ಹಾಗೂ ಯೂರಿಕ್ ಆ್ಯಸಿಡ್‌ನಿಂದ ಕೂಡಿದ ಕಲ್ಲುಗಳು ಸೃಷ್ಟಿಯಾಗುವ ಸಾಧ್ಯತೆಗಳಿವೆ. ಬೇಸಿಗೆಯಲ್ಲಿ ಮೂತ್ರ ವಿಸರ್ಜನೆ ಕಡಿಮೆ ಮಾಡುವುದರಿಂದಲೂ ಕಲ್ಲುಗಳಾಗಬಹುದು. ಬಿಸಿಲಲ್ಲೇ ದುಡಿಯುವವರು, ಹೆಚ್ಚು ಮಾಂಸ ಸೇವಿಸುವವರು, ಹೆಚ್ಚು ಶಾಖವಿರುವ ಕಡೆ ಕೆಲಸ ಮಾಡುವವರು ಈ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ಒಪೆಕ್‌ನ ನ್ಯೂರಾಲಿಜಿಸ್ಟ್ ಡಾ| ಪ್ರದೀಪ ಕುಲಕರ್ಣಿ.
Advertisement
ಈ ತಾಂಡಾದ ಪ್ರತಿ ಮನೆಯಲ್ಲಿ ಒಬ್ಬರಿಗಾದರೂ ಕಿಡ್ನಿಯಲ್ಲಿ ಕಲ್ಲುಗಳು ಪತ್ತೆಯಾಗಿವೆ. ಇದು ಕುಡಿವ ನೀರಿನದ್ದೇ ಸಮಸ್ಯೆಯಾಗಿದ್ದು, ಈ ಬಗ್ಗೆ ಯಾರೊಬ್ಬರೂ ಎಚ್ಚೆತ್ತುಕೊಳ್ಳುತ್ತಿಲ್ಲ. ಬೆಟ್ಟದೂರು ತಾಂಡಾ ಸೇರಿ ಸುತ್ತಲಿನ ತಾಂಡಾಗಳಿಗೆ ಅನುಕೂಲವಾಗುವ ಹಾಗೆ ಕೆರೆ ನಿರ್ಮಿಸಿ ಟಿಎಲ್‌ಬಿಸಿಯಿಂದ ನೀರು ತುಂಬಿಸಿದರೆ ಮಾತ್ರ ಸಮಸ್ಯೆ ಬಗೆಹರಿಯಲಿದೆ.– ಗೋವಿಂದರಾಜ್, ಬಂಜಾರ ಸೇವಾ ಸಂಘದ ರಾಜ್ಯ ಕಾರ್ಯದರ್ಶಿ ಬೆಟ್ಟದೂರು ತಾಂಡಾದಲ್ಲಿ ಕುಡಿವ ನೀರಿನ ಸಮಸ್ಯೆ ಗಂಭೀರವಾಗಿರುವ ಬಗ್ಗೆ ನಿವಾಸಿಗಳು ಮನವಿ ಸಲ್ಲಿಸಿದ್ದು, ಸಿಇಒ ಅವರಿಗೆ ಕ್ರಮಕ್ಕೆ ಸೂಚಿಸಲಾಗಿದೆ. ಶೀಘ್ರದಲ್ಲಿ ಗ್ರಾಮಕ್ಕೆ ಶುದ್ಧ ಕುಡಿವ ನೀರಿನ ಘಟಕ ಅಳವಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.
– ಡಾ| ಬಗಾದಿ ಗೌತಮ, ಜಿಲ್ಲಾಧಿಕಾರಿ – ಸಿದ್ಧಯ್ಯಸ್ವಾಮಿ ಕುಕನೂರು