Advertisement

ಶೇ.90ರಷ್ಟು ಸೋಂಕಿತರು ಮನೆಯಲ್ಲೇ ಐಸೋಲೇಟ್‌

08:37 PM May 01, 2021 | Team Udayavani |

ಬೆಂಗಳೂರು: ರಾಜಧಾನಿಯಲ್ಲಿ ನಿತ್ಯ ಕೋವಿಡ್ ಎರಡನೇ ಅಲೆ ಅಟ್ಟಹಾಸ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಕೋವಿಡ್ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಐಸಿಯು ಹಾಸಿಗೆ, ಆಕ್ಸಿಜನ್‌ ಸಿಗದೇ ಮೃತಪಡುತ್ತಿದ್ದಾರೆ. ಇನ್ನೊಂದೆಡೆ ನಗರದಲ್ಲಿ ಶೇ.90 ರಷ್ಟು ಮಂದಿ ಕೋವಿಡ್ ಸೋಂಕಿತರು ಮನೆಯಲ್ಲೇ ಐಸೋಲೇಟ್‌ ಆಗಿ ಆರೈಕೆ ಪಡೆಯುತ್ತಿದ್ದಾರೆ.

Advertisement

ನಗರದ ಅಪಾರ್ಟ್‌ ಮೆಂಟ್‌ ಗಳಲ್ಲಿ ಕೋವಿಡ್‌ ಸೋಂಕು ನಿರ್ವಹಣೆ ಹಾಗೂ ಮೈಕ್ರೊ ಕೋವಿಡ್‌ ಆರೈಕೆ ಕೇಂದ್ರಗಳನ್ನು ತೆರಯುವ ಸಲುವಾಗಿ ಶನಿವಾರ ನಡೆದ ವರ್ಚುವಲ್‌ ಸಭೆಯಲ್ಲಿ ಮಾತನಾಡಿದ ಮುಖ್ಯ ಆಯುಕ್ತರು  ಗೌರವ್‌ ಗುಪ್ತ ಅವರು ಶೇ.90ರಷ್ಟು ಸೋಂಕಿತರು ಮನೆಯಲ್ಲೇ ಐಸೋಲೇಟ್‌ ಆಗಿರುವ ಬಗ್ಗೆ ತಿಳಿಸಿದರು.

ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಜೊತೆ ಸಭೆ ನಡೆಸಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‌ ಸೋಂಕು ನಿತ್ಯ ವ್ಯಾಪಕವಾಗಿ ಹೆಚ್ಚಳವಾಗುತ್ತಿದೆ. ಹಲವಾರು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಅಪಾರ್ಟ್‌ ಮೆಂಟ್‌ಗಳ ಆವರಣದಲ್ಲೇ ಕೋವಿಡ್‌ ಆರೈಕೆ ಕೇಂದ್ರಗಳನ್ನು ತೆರೆಯಲು ಆಸಕ್ತಿ ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಪಾರ್ಟ್‌ ಮೆಂಟ್‌ ಆವರಣದಲ್ಲಿ ಸ್ಥಳಾವಕಾಶವಿದ್ದರೆ, ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ವಯ ವಲಯ ಆಯುಕ್ತರ ಅನುಮೋದನೆ ಪಡೆದು ಪ್ರಾರಂಭಿಸಬಹುದಾಗಿದೆ ಎಂದು ಸೂಚಿಸಿದರು.

ಸ್ವಯಂ ಐಸೋಲೇಟ್‌ ಆಗಿ

ಹೋಟೆಲ್‌ಗ‌ಳಲ್ಲಿ ಕೋವಿಡ್‌ ಆರೈಕೆ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳ ಸಹಯೋಗದಲ್ಲಿ ಸ್ಟೆಪ್‌ ಡೌನ್‌ ಆಸ್ಪತ್ರೆಗಳನ್ನು ಸಹ ತೆರೆಯಲಾಗುತ್ತಿದೆ. ಯಾರೊಬ್ಬರೂ ಭಯಪಡುವ ಅಗತ್ಯವಿಲ್ಲ. ಸೋಂಕು ಲಕ್ಷಣಗಳು ಕಂಡುಬಂದರೆ ಸ್ವಯಂ ಐಸೋಲೇಟ್‌ ಆಗಿ ಜಾಗೃತಿವಹಿಸಬೇಕು. ಹೋಮ್‌ ಐಸೋಲೇಟ್‌ ನಲ್ಲಿರುವವರಿಗೆ ಮೆಡಿಕಲ್‌ ಕಿಟ್‌ ಅನ್ನು ಪಾಲಿಕೆಯಿಂದ ನೀಡುತ್ತೇವೆ. ಅಗತ್ಯ ಮಾಹಿತಿಗೆ, ಆಸ್ಪತ್ರೆಗೆ ದಾಖಲಾಗಬೇಕಾದರೆ ಪಾಲಿಕೆ ಸಹಾಯವಾಣಿ ಸಂಖ್ಯೆಗೆ ಕರೆಮಾಡಿ ಮಾಹಿತಿ ಪಡೆದುಕೊಳ್ಳಬಹುದು. ನಗರದಲ್ಲಿ 1912 ಸಂಖ್ಯೆಗೆ ಹೆಚ್ಚು ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ 500 ಲೈನ್‌ಗಳನ್ನು ಹೆಚ್ಚಿಸಲಾಗಿದೆ ಎಂದರು.

Advertisement

ಮುಖ್ಯ ಆರೋಗ್ಯಾಧಿಕಾರಿ ಡಾ.ವಿಜೇಂದ್ರ ಮಾತನಾಡಿ, ಕೋವಿಡ್‌ ಆರೈಕೆ ಕೇಂದ್ರ ತೆರೆದರೆ ಯಾವುದಾದರು ಆಸ್ಪತ್ರೆ/ನರ್ಸಿಂಗ್ ಹೋಮ್‌ಗಳ ಜೊತೆ ಟೈ-ಅಪ್‌ ಮಾಡಿಕೊಂಡು ಆರೈಕೆ ಪಡೆಯುವವರಿಗೆ ಆರೈಕೆ ಮಾಡಲಾಗುವುದು. ಯಾರಿಗಾದರು ಸಮಸ್ಯೆಯಾದರೆ ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್‌ ವ್ಯವಸ್ಥೆ ಯಿರಬೇಕು. ಮಾಹಿತಿ ಸಂಗ್ರಹಿಸುವ ಸಲುವಾಗಿ ಡಾಟಾ ಎಂಟ್ರಿ ಆಪರೇಟರ್‌ ಇರಬೇಕು. ಯಾರಾದರು ಕೋವಿಡ್‌ ಆರೈಕೆ ಕೇಂದ್ರ ತೆರೆಯಲು ಇಚ್ಛಿಸಿದರೆ ಪಾಲಿಕೆಗೆ ಮಾಹಿತಿ ನೀಡಿದಲ್ಲಿ ಆಯಾ ವಲಯ ಆರೋಗ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕೋವಿಡ್‌ ಆರೈಕೆ ಕೇಂದ್ರ ನಡೆಸಲು ಸ್ಥಳಾವಕಾಶವಿದ್ದಲ್ಲಿ ವಲಯ ಆಯುಕ್ತರು ಅನುಮೋದನೆ ನೀಡಲಿದ್ದಾರೆ. ಅನಂತರ ಮಾರ್ಗಸೂಚಿಗಳ ಅನುಸಾರ ಕೋವಿಡ್‌ ಆರೈಕೆ ಕೇಂದ್ರವನ್ನು ನಡೆಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ಆರೈಕೆ ಕೇಂದ್ರಗಳನ್ನು ತೆರಯಲು ಸೂಕ್ತ ವ್ಯವಸ್ಥೆ ಅಗತ್ಯ:

*ಅಪಾರ್ಟ್‌ಮೆಂಟ್‌ ಆವರಣದಲ್ಲಿ ಕಮ್ಯುನಿಟಿ ಹಾಲ್‌, ಪ್ಲಾಟ್‌ ಇರಬೇಕು

*ಮಹಿಳೆ, ಮಕ್ಕಳಿಗೆ ಪ್ರತ್ಯೇಕ ಸ್ಥಳ ಇರಬೇಕು

*10×10 ಅಡಿ ಯುಳ್ಳ ಶೌಚಾಲಯದ ವ್ಯವಸ್ಥೆಯಿರಬೇಕು,

*ಕೊಠಡಿ ವಿಶಾಲವಾಗಿರಬೇಕು.

*ಹಾಸಿಗೆಗಳ ನಡುವೆ ಕನಿಷ್ಟ 6 ಅಡಿ ಅಂತರವಿರಬೇಕು.

*ವೈದ್ಯಕೀಯ ತ್ಯಾಜ್ಯ ಸಂಗ್ರಹಿಸಲು ಪ್ರತ್ಯೇಕ ಟೆಂಡರ್‌ ವ್ಯವಸ್ಥೆಯಿರಬೇಕು.

*100 ಹಾಸಿಗೆಗೆ ಒಬ್ಬ ವೈದ್ಯ, 50 ಹಾಸಿಗೆಗೆ ಒಬ್ಬ ಸಿಬ್ಬಂದಿ ಇರಬೇಕು.

*25 ಹಾಸಿಗೆಗೆ ಒಬ್ಬ ಗ್ರೂಪ್‌ ಡಿ ನೌಕರರಿರಬೇಕು.

*ಮಾಸ್ಕ್, ಸ್ಯಾನಿಟೈಸರ್‌, ಥರ್ಮಲ್‌ ಸ್ಕ್ಯಾನರ್‌, ಪಲ್ಸಿ ಆಕ್ಸಿಮೀಟರ್‌, ಪಿಪಿಇ ಕಿಟ್‌, ಅಗತ್ಯ ಮಾತ್ರೆಗಳು ಇರಬೇಕು.

Advertisement

Udayavani is now on Telegram. Click here to join our channel and stay updated with the latest news.

Next