ಹುಬ್ಬಳ್ಳಿ: ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವುದನ್ನು ಶಿಕ್ಷಕರು ತಡೆಯದಿದ್ದರೆ 2025-26ರ ವೇಳೆಗೆ ನಗರ ವ್ಯಾಪ್ತಿಯ ಶೇ.90 ಸರಕಾರಿ ಕನ್ನಡ ಶಾಲೆಗಳು ಮುಚ್ಚಲಿದ್ದು, ಸಹಸ್ರಾರು ಸರಕಾರಿ ಶಿಕ್ಷಕರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಭಾರತರತ್ನ ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ ಅಂಗವಾಗಿ ಗುರುವಾರ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇನ್ನು 5 ವರ್ಷಗಳ ನಂತರ ಗ್ರಾಮೀಣ ಭಾಗದಲ್ಲಿ ಕೂಡ ಸರಕಾರಿ ಕನ್ನಡ ಶಾಲೆಗಳ ಸಂಖ್ಯೆ ವಿರಳವಾಗಲಿದೆ. ಮಕ್ಕಳು ಶಾಲೆಗೆ ಬರುವಂತೆ ಮಾಡುವುದು ಶಿಕ್ಷಕರ ಜವಾಬ್ದಾರಿ. ಗುಣಮಟ್ಟದ ಶಿಕ್ಷಣ ನೀಡಿದರೆ ಸಹಜವಾಗಿಯೇ ಮಕ್ಕಳು ಸರಕಾರಿ ಶಾಲೆಗೆ ಬಂದೇ ಬರುತ್ತಾರೆ. ಕಾನ್ವೆಂಟ್ ಶಾಲೆಯ ವ್ಯಾಮೋಹದ ಕಾರಣ ಹೇಳುವುದು ಬೇಡ. ಕನ್ನಡ ಶಾಲೆಗಳ ಅಭಿವೃದ್ಧಿಗೆ ಸರಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಗುಣಮಟ್ಟದ ಶಿಕ್ಷಣದ ಕೊರತೆಯಿದೆ. ಶಿಕ್ಷಕರು ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮುಂದೆ ಕೆಲಸ ಉಳಿಸಿಕೊಳ್ಳುವುದು ದುಸ್ತರವಾಗಲಿದೆ ಎಂದರು.
ರಾಜ್ಯದಲ್ಲಿ 88,000 ಡಿಎಡ್ ಪದವೀಧರರು, 39,000 ಬಿಎಡ್ ಪದವೀಧರರು ಹಾಗೂ 12,000 ಎಂಎಡ್/ಎಂಪಿಎಡ್ ಪದವೀಧರರು ಸರಕಾರಿ ಉದ್ಯೋಗಕ್ಕಾಗಿ ಕಾಯುತ್ತಿದ್ದಾರೆ. ಪ್ರಸ್ತುತ ಸರಕಾರಿ ಶಿಕ್ಷಕರಾದವರು ಸರಿಯಾಗಿ ಶಿಕ್ಷಣ ನೀಡದೆ ಶಾಲೆ ಮುಚ್ಚಲು ಕಾರಣರಾದರೆ ಭಾವಿ ಶಿಕ್ಷಕರು ನಿಮಗೆ ಹಿಡಿಶಾಪ ಹಾಕುವುದು ಖಚಿತ. ಈ ಬಗ್ಗೆ ಆತ್ಮಾವಲೋಕನ ಅಗತ್ಯ ಎಂದು ಹೇಳಿದರು.
ಪ್ರತಿ ತಿಂಗಳು ಸರಕಾರಿ ಶಿಕ್ಷಕರಿಗೆ ಕನಿಷ್ಟ 30,000 ರೂ. ಸಂಬಳ ಲಭಿಸುತ್ತದೆ. ಖಾಸಗಿ ಶಾಲೆಗಳಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಪಾಠ ಮಾಡಿದರೂ 5000 ರೂ. ಕೂಡ ದೊರೆಯುವುದಿಲ್ಲ. ಒಣ ರಾಜಕೀಯದಲ್ಲಿ ಸಮಯ ವ್ಯರ್ಥ ಮಾಡದೇ, ವಾಚ್ ನೋಡಿಕೊಂಡು ಪಾಠ ಮಾಡದೇ ಮಕ್ಕಳಿಗೆ ಜ್ಞಾನ ನೀಡುವ ಉದ್ದೇಶದಿಂದ ಬೋಧನೆ ಮಾಡಬೇಕು. ಮಕ್ಕಳಿಂದ ನಿಮ್ಮ ಹೊಟ್ಟೆ ತುಂಬುತ್ತದೆ, ಆದ್ದರಿಂದ ಮಕ್ಕಳಿಗೆ ನೀವೆಲ್ಲ ಋಣಿಯಾಗಿರಬೇಕು ಎಂದು ಸಲಹೆ ನೀಡಿದರು.
ಶಿಕ್ಷಕರ ಸಂಘಟನೆಗಳು ಶಿಕ್ಷಕರ ಒಳಿತಿಗಾಗಿ ಕೆಲಸ ಮಾಡಬೇಕೇ ಹೊರತು ಸಾರ್ವಜನಿಕ ಶಿಕ್ಷಣ ಇಲಾಖೆ ಏಜೆಂಟರಂತೆ ಕಾರ್ಯ ನಿರ್ವಹಿಸುವುದು ಸೂಕ್ತವಲ್ಲ. ಸ್ವಾರ್ಥಕ್ಕಾಗಿ ಸಂಘಗಳ ಬಳಕೆ ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಮಣಕವಾಡ ಶ್ರೀ ಗುರು ಅನ್ನದಾನೇಶ್ವರ ದೇವಮಂದಿರದ ಶ್ರೀ ಸಿದ್ದರಾಮ ದೇವರು ಸಾನ್ನಿಧ್ಯ ವಹಿಸಿ ಮಾತನಾಡಿ, ಭಾರತ ವಿಶ್ವಕ್ಕೆ ಜಗದ್ಗುರುವಾಗಲು ಶಿಕ್ಷಕರ ಕೊಡುಗೆ ಮಹತ್ವದ್ದಾಗಿದೆ. ಶಿಕ್ಷಕರ ಮಾತಿಗೆ ಕಿಮ್ಮತ್ತಿದೆ. ಪಾಲಕರು ಹೇಳಿದ್ದಕ್ಕಿಂತ ಶಿಕ್ಷಕರು ಹೇಳಿದ್ದನ್ನು ಮಕ್ಕಳು ಬೇಗನೇ ನಂಬುತ್ತಾರೆ. ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದು ನುಡಿದರು.
ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಕುಸುಮಾವತಿ ಶಿವಳ್ಳಿ ಮಾತನಾಡಿದರು. ತಾಪಂ ಅಧ್ಯಕ್ಷೆ ಚೆನ್ನಮ್ಮ ಗೊರ್ಲ, ಚನ್ನಮ್ಮ ಶಿವನಗೌಡರ, ಗಜಾನನ ಮನ್ನಿಕೇರಿ, ಎಂ.ಆರ್. ಗೌರಮ್ಮ ಇದ್ದರು. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಸಾಧನೆ ಮಾಡಿದ ಅಶ್ವಿನಿ ಉಣಕಲ್ಲ, ಚೈತ್ರಾ ಹುಲಮನಿ, ಜ್ಯೋತಿ ಅವರಿಗೆ ಲ್ಯಾಪ್‌ಟಾಪ್ ನೀಡಲಾಯಿತು.