ವಿಶೇಷ ವರದಿ
ಹಾವೇರಿ: ಸಂಭವನೀಯ ಕೋವಿಡ್ 3ನೇ ಅಲೆಯನ್ನು ಆರಂಭಿಕ ಹಂತದಲ್ಲಿಯೇ ನಿಯಂತ್ರಿಸಲು ಜಿಲ್ಲಾಡಳಿತ ರಾಜ್ಯದಲ್ಲಿಯೇ ಮೊದಲ ಬಾರಿಗೆ ಹಮ್ಮಿಕೊಂಡಿರುವ “ವಾತ್ಸಲ್ಯ’ ಮಕ್ಕಳ ಆರೋಗ್ಯ ತಪಾಸಣಾ ಕಾರ್ಯಕ್ರಮ ಶೇ.90ರಷ್ಟು ಪ್ರಗತಿ ಸಾಧಿಸಿದೆ.
3ನೇ ಅಲೆ ಮಕ್ಕಳಿಗೆ ಹೆಚ್ಚಾಗಿ ಬಾಧಿಸಲಿದೆ ಎಂಬ ತಜ್ಞರ ವರದಿಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಂಭವನೀಯ 3ನೇ ಅಲೆಯ ಪ್ರಭಾವವನ್ನು ತಗ್ಗಿಸಲು ಶೂನ್ಯದಿಂದ 16ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆ ನಡೆಸಲು ಈ ಹಿಂದೆ ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರು ಜೂನ್‌ನಲ್ಲಿ ಸೂಚನೆ ನೀಡಿದ್ದರು. ಅವರ ಸೂಚನೆಯಂತೆ ಜಿಲ್ಲಾಡಳಿತ ವಾತ್ಸಲ್ಯ ಎಂಬ ಶಿರೋನಾಮೆಯಡಿ ನಡೆಸಿದ್ದು, ಜಿಲ್ಲೆಯಲ್ಲಿನ ಮಕ್ಕಳ ಆರೋಗ್ಯ ಸುಧಾರಣೆ ಹಾಗೂ ಬೆಳವಣಿಗೆಗೆ ಸಹಕಾರಿಯಾಗಿದೆ. ಅಲ್ಲದೇ, ರಾಜ್ಯದ ಇನ್ನಿತರ ಜಿಲ್ಲೆಗಳಲ್ಲೂ ಇದೇ ಮಾದರಿಯಲ್ಲಿ ಆರೋಗ್ಯ ತಪಾಸಣೆ ನಡೆಸಲು ಆರೋಗ್ಯ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ 4.07ಲಕ್ಷ ಮಕ್ಕಳು: ಜಿಲ್ಲೆಯಲ್ಲಿ ಶೂನ್ಯದಿಂದ 16ವರ್ಷದೊಳಗಿನ ಒಟ್ಟು 4,07,370 ಮಕ್ಕಳಿದ್ದಾರೆ. ಜೂನ್ 25ರಿಂದ ಮಕ್ಕಳ ಆರೋಗ್ಯ ತಪಾಸಣೆ ಆರಂಭಿಸಿದ್ದು, ಈಗಾಗಲೇ 3.50 ಲಕ್ಷಕ್ಕೂ ಅಧಿಕ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗಿದೆ. ದಿನಕ್ಕೆ ಸರಾಸರಿ 10ಸಾವಿರ ಮಕ್ಕಳ ಆರೋಗ್ಯ ತಪಾಸಣೆಯನ್ನು ಆರೋಗ್ಯ ಇಲಾಖೆ ಶಾಲೆ, ಅಂಗನವಾಡಿಗಳಿಗೆ ತೆರಳಿ ನಡೆಸುತ್ತಿದೆ. ಮಕ್ಕಳ ಆರೋಗ್ಯ ತಪಾಸಣೆ ಮೂಲಕ ಎಷ್ಟು ಮಕ್ಕಳು ಯಾವ ಪ್ರಮಾಣದಲ್ಲಿ ಆರೋಗ್ಯವಂತರಿದ್ದಾರೆ. ಯಾವ ಮಕ್ಕಳಲ್ಲಿ ಯಾವ ಕೊರತೆಯಿದೆ ಎಂಬ ಸಂಪೂರ್ಣ ಮಾಹಿತಿ ಆರೋಗ್ಯ ಇಲಾಖೆಗೆ ಸಿಗಲಿದೆ. ಅಪೌಷ್ಟಿಕತೆ, ವಿಕಲಾಂಗತೆ, ಬೆಳವಣಿಗೆ ಕುಂಠಿತ, ಹೃದಯ ಸಂಬಂ ಧಿ ಕಾಯಿಲೆಗಳು ಸೇರಿ ಯಾವ ಮಕ್ಕಳಿಗೆ ಯಾವ ಸಮಸ್ಯೆಯಿದೆ ಎಂಬ ಮಾಹಿತಿ ಬೆರಳ ತುದಿಯಲ್ಲಿ ಸಿಗಲಿದ್ದು, ಮಕ್ಕಳು ಅನಾರೋಗ್ಯಕ್ಕೆ ತುತ್ತಾದರೆ ಅದಕ್ಕೆ ತಕ್ಕ ಚಿಕಿತ್ಸೆ ನೀಡಲು ಸಾಕಷ್ಟು ಅನುಕೂಲವಾಗಲಿದೆ.
ಮಕ್ಕಳ ಆರೋಗ್ಯ ಸುಧಾರಣೆಗೆ ಸಹಕಾರಿ: ವಾತ್ಸಲ್ಯ ಮಕ್ಕಳ ಆರೋಗ್ಯ ತಪಾಸಣಾ ಶಿಬಿರದಲ್ಲಿ ತಪಾಸಣೆಗೆ ಒಳಗಾಗುವ ಮಕ್ಕಳಿಗೆ ವಾತ್ಸಲ್ಯ ಎಂಬ ಹೆಸರಿನ ಆರೋಗ್ಯ ತಪಾಸಣಾ ಕಾರ್ಡ್‌ನ್ನು ನೀಡಲಾಗುತ್ತಿದೆ. ಈ ಕಾರ್ಡ್‌ನಲ್ಲಿ ಮಕ್ಕಳ ಪೂರ್ಣ ವಿವರದೊಂದಿಗೆ ಆರೋಗ್ಯದ ಮಾಹಿತಿಯೂ ದಾಖಲಾಗಿದೆ. ತಪಾಸಣೆ ವೇಳೆಯಲ್ಲಿ ಜನನ ನ್ಯೂನತೆಗಳು, ಪೋಷಕಾಂಶಗಳ ಕೊರತೆಯಿರುವ ಮಕ್ಕಳು, ಬೆಳವಣಿಗೆ ಕುಂಠಿತವಿರುವ ಮಕ್ಕಳು, ಕಾಯಿಲೆಗಳಿರುವ ಮಕ್ಕಳು, ತೀವ್ರ ಅಪೌಷ್ಟಿಕ ಮಕ್ಕಳನ್ನು ಗುರುತಿಸಲಾಗುತ್ತಿದೆ. ಇವರಿಗೆ ಅವಶ್ಯವಿರುವ ಚಿಕಿತ್ಸೆಯನ್ನು ಈಗಲೇ ಅವರಿಗೆ ಆರೋಗ್ಯ ಇಲಾಖೆಯಿಂದ ತಾಲೂಕು ಹಾಗೂ ಜಿಲ್ಲಾಸ್ಪತ್ರೆಗೆ ಶಿಫಾರಸ್ಸು ಮಾಡಿ ಕೊಡಿಸಲಾಗುತ್ತಿದೆ. ಕೊರೊನಾ ಸೋಂಕಿನ ಲಕ್ಷಣಗಳಿದ್ದರೆ ಸ್ಥಳದಲ್ಲಿಯೇ ರ್ಯಾಟ್ ಟೆಸ್ಟ್ ಸಹ ಮಾಡಲಾಗುತ್ತಿದೆ. ಅಲ್ಲದೇ, ಕೊರೊನಾ ಕಾಲದ ಲಸಿಕೆಗಳಿಂದ ವಂಚಿತವಾದ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ.