ಉಡುಪಿ: ಕೃಷ್ಣನಗರಿ ಉಡುಪಿ ಜಿಲ್ಲೆಯಲ್ಲಿ ಇಂದು ಮತ್ತೆ ಕೋವಿಡ್ ಸ್ಪೋಟವಾಗಿದೆ. ಶನಿವಾರ ಒಂದೇ ದಿನ ಉಡುಪಿ ಜಿಲ್ಲೆಯಲ್ಲಿ 90 ಜನರಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ.
ಇಂದಿನ 90 ಪ್ರಕರಣಗಳಿಂದ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 1567ಕ್ಕೆ ಏರಿಕೆಯಾಗಿದೆ. ಕಳೆದ ಕೆಲವು ದಿನಗಳಿಂದ 50ಕ್ಕಿಂತ ಕಡಿಮೆ ಸೋಂಕಿತರು ಕಂಡುಬರುತ್ತಿದ್ದ ಜಿಲ್ಲೆಯಲ್ಲಿ ಇಂದು ಒಂದೇ ದಿನ 90 ಮಂದಿಗೆ ಸೋಂಕು ತಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಇಂದು 663 ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ 90 ಜನರ ಸ್ಯಾಂಪಲ್ ಪಾಸಿಟಿವ್ ಬಂದಿದ್ದು, ಉಳಿದ 573 ಜನರ ವರದಿ ನೆಗೆಟಿವ್ ಆಗಿದೆ.
ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 1567ಕ್ಕೆ ಏರಿಕೆಯಾಗಿದ್ದು, ಅದರಲ್ಲಿ 1245 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಮೂವರು ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ ಜಿಲ್ಲೆಯಲ್ಲಿ 319 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ 21,678 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದ್ದು, ಅದರಲ್ಲಿ 1567 ವರದಿಗಳು ಪಾಸಿಟಿವ್ ಆಗಿದೆ. 18,081 ಜನರ ವರದಿಗಳು ನೆಗಟಿವ್ ಆಗಿದ್ದು, ಇನ್ನೂ 2030 ಜನರ ಪರೀಕ್ಷಾ ವರದಿ ಬಾಕಿ ಉಳಿದಿದೆ.
ಉಡುಪಿ ಜಿಲ್ಲೆಯ ಕಾಪು ತಾಲೂಕಿನಲ್ಲಿ ಶನಿವಾರ ಕೋವಿಡ್-19 ಸೋಂಕಿತರ ಸಂಖ್ಯೆ ಸ್ಪೋಟಗೊಂಡಿದೆ. ಕಾಪು ಪೊಲೀಸ್ ಠಾಣೆಯ ಎಎಸ್ಐ ಸೇರಿದಂತೆ 30ಕ್ಕೂ ಅಧಿಕ ಪ್ರಕರಣಗಳು ದೃಢಪಟ್ಟಿವೆ. ಕಾಪು ಪೊಲೀಸ್ ಠಾಣೆಯ 56 ವರ್ಷ ಪ್ರಾಯದ ಎಎಸ್ಐ ಗೆ ಸೋಂಕು ದೃಢಪಟ್ಟಿದ್ದು, ಅವರು ಈಗಾಗಲೇ ಕೋಟದ ತನ್ನ ಮನೆಯಲ್ಲೇ ಹೋಂ ಕ್ವಾರಂಟೈನ್ ನಲ್ಲಿ ಇರುವುದರಿಂದ ಇತರ ಪೊಲೀಸರ ಭೀತಿ ಕಡಿಮೆಯಾಗಿದೆ