ಪಣಜಿ: ಕೊರೊನಾ ಮಹಾಮಾರಿಯ ಸಂದರ್ಭವು ಎಲ್ಲರನ್ನೂ ಪರೀಕ್ಷೆ ಮಾಡಿತ್ತು. ಪ್ರಧಾನಿಗಳಿಗೂ ಕಠಿಣ ಸಂದರ್ಭ ಬಂದಿತ್ತು. ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಕೊರೊನಾ ಸಂದರ್ಭದಲ್ಲಿ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿ, ಇಂತಹ ಸಂಕಷ್ಟ ಪರಿಸ್ಥಿತಿಯನ್ನು ಗೆದ್ದಿದ್ದಾರೆ ಎಂದು ಹಿಮಾಚಲ ಪ್ರದೇಶದ ರಾಜ್ಯಪಾಲ ರಾಜೇಂದ್ರ ಅರ್ಲೆಕರ್ ನುಡಿದರು.
ಗೋವಾದ ಪಾಳಿಯ ಶ್ರೀ ನವದುರ್ಗಾ ದೇವಸ್ಥಾನದ ವತಿಯಿಂದ ಆಯೋಜಿಸಿದ್ದ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಗೋವಾದಲ್ಲಿ ಶೇ 90 ರಷ್ಟು ಜನರಿಗೆ ಕೋವಿಡ್ ಎರಡನೇಯ ಡೋಸ್ ವ್ಯಾಕ್ಸಿನೇಶನ್ ಪೂರ್ಣಗೊಂಡಿದೆ. ಇನ್ನುಳಿದ ಶೇ 10 ರಷ್ಟು ಜನೆರಿಗೆ ಲಸಿಕೆ ನೀಡಲು ಜನತೆ ಸಹಕರಿಸಬೇಕು. ಗೋವಾ ರಾಜ್ಯದ ಸಂಪೂರ್ಣ ಜನತೆ ಶೀಘ್ರವಾಗಿ ಎರಡೂ ಡೋಸ್ ವ್ಯಾಕ್ಸಿನ್ ಪಡೆದುಕೊಳ್ಳುವ ಮೂಲಕ ದೇಶದಲ್ಲಿಯೇ ಸಂಪೂರ್ಣ ಲಸಿಕೆ ಪಡೆದ ಪ್ರಪ್ರಥಮ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಬೇಕು ಎಂದರು.
ಇದನ್ನೂ ಓದಿ:ಅಪಾರ ಬೆಂಬಲಿಗರೊಂದಿಗೆ ಲಖನ್ ಜಾರಕಿಹೊಳಿ ನಾಮಪತ್ರ ಸಲ್ಲಿಕೆ
ರಾಜ್ಯಪಾಲ ಅರ್ಲೆಕರ್ ಅವರು ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ದಂಪತಿಗಳನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಹಿರಿಯ ನಾಗರಿಕ ವಿಷ್ಣು ಭಾವೆ, ಶುಭದಾ ಭಾವೆ, ದೇವಸ್ಥಾನ ಸಮೀತಿಯ ಅಧ್ಯಕ್ಷ ವಿಷ್ಣು ಗಾವಸ್, ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರ ಪತ್ನಿ ಸುಲಕ್ಷಣಾ ಸಾವಂತ್ ಉಪಸ್ಥಿತರಿದ್ದರು.