ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿ-ಎನ್ ಸಿಆರ್ ನಲ್ಲಿ ಧಾರಾಕಾರ ಮಳೆಯಿಂದಾಗಿ ಜನಜೀವನ ಗುರುವಾರವೂ(ಆ.1) ತತ್ತರಿಸಿಹೋಗಿದ್ದು, ನಗರದ ಹಲವೆಡೆ ಜಲಾವೃತಗೊಂಡಿರುವುದರಿಂದ ಟ್ರಾಫಿಕ್ ಜಾಮ್ ಉಂಟಾಗಿ ಜನರು ಪರದಾಡುವಂತಾಗಿದೆ.
ದೆಹಲಿಯಲ್ಲಿ ಇಂದೂ ಕೂಡಾ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಜನರು ಮನೆಯೊಳಗೆ ಇದ್ದು, ಸುರಕ್ಷಿತವಾಗಿರುವಂತೆ ಐಎಂಡಿ ಸಲಹೆ ನೀಡಿದೆ. ಭಾರೀ ಮಳೆ, ವಿದ್ಯುತ್, ಗೋಡೆ ಕುಸಿತ ಸೇರಿದಂತೆ ವಿವಿಧ ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ನಿರಂತರ ಮಳೆಯ ಹಿನ್ನೆಲೆಯಲ್ಲಿ ಗುರುವಾರವೂ ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿದೆ. ಟ್ರಾಫಿಕ್ ಜಾಮ್ ಸಮಸ್ಯೆ ದೆಹಲಿ ಮಾತ್ರವಲ್ಲ, ದೆಹಲಿ-ನೋಯ್ಡಾ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲೂ ವಾಹನ ಸವಾರರು ಟ್ರಾಫಿಕ್ ಜಾಮ್ ಅನುಭವಿಸುವಂತಾಗಿದೆ ಎಂದು ವರದಿ ವಿವರಿಸಿದೆ.
ಇಂದು ಬೆಳಗ್ಗೆ ಕಟ್ಟಡವೊಂದು ಕುಸಿದು ಬಿದ್ದಿದ್ದು, ಅದರೊಳಗಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ವ್ಯಕ್ತಿಯನ್ನು ಅನಿಲ್ ಕುಮಾರ್ ಗುಪ್ತಾ ಎಂದು ಗುರುತಿಸಲಾಗಿದೆ. ಪೂರ್ವ ದೆಹಲಿಯ ಘಾಜಿಪುರ್ ಪ್ರದೇಶದಲ್ಲಿ ವಾರದ ಸಂತೆಗೆ ತೆರಳಿದ್ದ 22 ವರ್ಷದ ಮಹಿಳೆ ಹಾಗೂ ಆಕೆಯ ಮೂರು ವರ್ಷದ ಮಗು ಪ್ರಿಯಾಂಶ್ ನೀರು ತುಂಬಿ ಹರಿಯುತ್ತಿದ್ದ ಚರಂಡಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಬುಧವಾರ(ಜು.31) ರಾತ್ರಿ ನಡೆದಿದೆ.
127 ದೂರುಗಳನ್ನು ಸ್ವೀಕರಿಸಿದ ದೆಹಲಿ ಪೊಲೀಸರು:
ಗುರುವಾರ ಬೆಳಗ್ಗೆ 7ಗಂಟೆವರೆಗೆ ದೆಹಲಿ ಪೊಲೀಸರು ಟ್ರಾಫಿಕ್ ಜಾಮ್ ಗೆ ಸಂಬಂಧಿಸಿದಂತೆ 2,495 ಕರೆಗಳನ್ನು ಸ್ವೀಕರಿಸಿದ್ದು, ಜಲಾವೃತಕ್ಕೆ ಸಂಬಂಧಿಸಿದಂತೆ 127 ಕರೆ, ಕಟ್ಟಡ ಕುಸಿತಕ್ಕೆ ಸಂಬಂಧಿಸಿದಂತೆ 27 ಹಾಗೂ ಮರ ಉರುಳಿ ಬಿದ್ದ ಘಟನೆ ಬಗ್ಗೆ 50 ಕರೆಗಳನ್ನು ಸ್ವೀಕರಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯ ಡಿಫೆನ್ಸ್ ಕಾಲೋನಿಯಲ್ಲಿ ಬೆಳಗ್ಗೆ ಗೋಡೆ ಕುಸಿದು ಬಿದ್ದು, ಮಹಿಳೆಯೊಬ್ಬರು ಗಾಯಗೊಂಡಿದ್ದು, ಕಾರು ಜಖಂಗೊಂಡಿರುವ ಘಟನೆ ನಡೆದಿದೆ. ದೆಹಲಿಯ ಶಾಸ್ತ್ರೀ ಪಾರ್ಕ್ ಪ್ರದೇಶದಲ್ಲಿ ಮನೆಯ ಭಾಗವೊಂದು ಕುಸಿದು ಬಿದ್ದು ಇಬ್ಬರು ಗಾಯಗೊಂಡಿದ್ದಾರೆ.
ದೆಹಲಿ ಸೆಂಟ್ರಲ್ ನ ದರಿಯಾಗಂಜ್ ಪ್ರದೇಶದಲ್ಲಿ ನಿನ್ನೆ ತಡರಾತ್ರಿ ಶಾಲೆಯ ಗೋಡೆ ಕುಸಿದು ಬಿದ್ದ ಪರಿಣಾಮ ಐದು ಕಾರು ಜಖಂಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.