ಪಿರಿಯಾಪಟ್ಟಣ: ಮೈಸೂರು ಜಿಲ್ಲಾ ಹಾಲು ಒಕ್ಕೂಟಕ್ಕೆ ತಾಲೂಕಿನಿಂದ 9 ಲಕ್ಷ ಲೀಟರ್ ಹಾಲು ಬರುತ್ತಿದೆ ಎಂದು ಮೈಮೂಲ್ ನಿರ್ದೇಶಕ ಪಿ.ಎಂ.ಪ್ರಸನ್ನ ತಿಳಿಸಿದರು. ತಾಲೂಕಿನ ಭುವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ 2016-17ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ನಮ್ಮ ತಾಲೂಕಿನಲ್ಲಿ ಹೆಚ್ಚು ಕಳಪೆ ಹಾಲು ಬರುತ್ತಿರುವುದು ಗಮನಕ್ಕೆ ಬಂದಿದೆ. ಸರ್ಕಾರದ 5 ರೂ. ಪ್ರೋತ್ಸಾಹ ಧನವನ್ನು ಉಪಯೋಗಿಸಿಕೊಂಡು ಗುಣಮಟ್ಟದ ಹಾಲನ್ನು ಹಾಕಬೇಕು. ಒಕ್ಕೂಟದಲ್ಲಿರುವ ಜನಶ್ರೀ ಯೋಜನೆ, ಯಶಸ್ವಿನಿ ಯೋಜನೆಗಳನ್ನು ಸಂಘದ ಸದಸ್ಯರು ಪಡೆದುಕೊಳ್ಳಬಹುದು. ಯಶಸ್ವಿನಿ ಯೋಜನೆಗೆ ನೋಂದಣಿಯಾಗಲು ನೀವು ಒಬ್ಬರಿಗೆ 200 ರೂ. ಪಾವತಿಸಿದರೆ, ಒಕ್ಕೂಟ 100 ರೂ.ಗಳನ್ನು ಪಾವತಿಸುತ್ತದೆ ಎಂದರು.
ವಿಮೆ ಮಾಡಿಸಿ: ಅಲ್ಲದೇ, ಜನಶ್ರೀ ಯೋಜನೆಗೆ ಒಳಪಡಲು ಸಂಘದ ಸದಸ್ಯ 100 ರೂ. ಪಾವತಿಸಿದರೆ, ಒಕ್ಕೂಟ 100 ರೂ. ಪಾವತಿಸುತ್ತದೆ. ಜನಶ್ರೀ ಯೋಜನೆಯಲ್ಲಿ ನೋಂದಣಿಯಾದವರು ಮರಣ ಹೊಂದಿದರೆ 1 ಲಕ್ಷ ರೂ. ಒಕ್ಕೂಟದಿಂದ ದೊರೆಯುತ್ತದೆ. ಅಲ್ಲದೇ, ಯೋಜನೆಗೊಳಪಟ್ಟ ಸದಸ್ಯರ ಮಕ್ಕಳ ವಿದ್ಯಾಭ್ಯಾಸದಲ್ಲಿ 1,200 ರೂ.ಗಳನ್ನು ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಹಾಗೆಯೇ ರಾಸುಗಳಿಗೆ ವಿಮೆ ಕೂಡ ಮಾಡಿಸಿದರೆ ಉತ್ತಮ. ಇಷ್ಟೆಲ್ಲಾ ಸವಲತ್ತುಗಳು ಸಿಗುತ್ತಿವೆ ಎಂದರೆ ಹಾಲು ಒಕ್ಕೂಟ ಪ್ರಾರಂಭಿಸಿದ ಡಾ. ಕುರಿಯನ್ ಅವರನ್ನು ಸ್ಮರಿಸಬೇಕಾಗುತ್ತದೆ ಎಂದರು.
ವರದಿ ವಾಚನ: ಸಂಘದ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಬಿ.ಆರ್.ಪ್ರಕಾಶ್ 2016-17ನೇ ಸಾಲಿನ ವಾರ್ಷಿಕ ವರದಿಯನ್ನು ಓದಿದರು. ಲಾಭ ವಿಲೇವಾರಿ ಹಾಗೂ 2017-18ರ ಬಜೆಟ್ ತಿಳಿಸಿದರು. ಸಂಘ ಒಟ್ಟು 7.23 ಲಕ್ಷ ರೂ. ಲಾಭ ಗಳಿಸಿದೆ ಎಂದು ತಿಳಿಸಿದರು. ಸಂಘದ ಅಧ್ಯಕ್ಷ ಬಿ.ಎಂ.ಪರಮೇಶ್ವರ, ಮಾಜಿ ಅಧ್ಯಕ್ಷ ಸಿದ್ದೇಗೌಡ, ನಿರ್ದೇಶಕರಾದ ಮಲ್ಲಿಕಾರ್ಜುನ, ಮೂರ್ತಿ, ಬಿ.ಕೆ.ಮಂಜುನಾಥ್, ಚಲುವಪ್ಪ, ಪುಟ್ಟರಾಜು, ಚನ್ನಯ್ಯ, ತಿಮ್ಮಾಜಮ್ಮ, ವಿಸ್ತರಣಾಧಿಕಾರಿ ಶ್ರೀಕಾಂತ್, ಸಂಘದ ಸಿಬ್ಬಂದಿ ಜಲೇಂದ್ರ, ತಮ್ಮೇಗೌಡ, ಪಶು ಪರಿವೀಕ್ಷಕ ನಾರಾಯಣಗೌಡ ಹಾಗೂ ಸರ್ವ ಷೇರುದಾರರು ಇದ್ದರು.
“ಸಾಲುಕೊಪ್ಪಲು ಸಂಘಕ್ಕೆ 2.38 ಲಕ್ಷ ರೂ. ಲಾಭ’
ತಾಲೂಕಿನ ಸಾಲುಕೊಪ್ಪಲು ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 2016-17ನೇ ಸಾಲಿನ ವಾರ್ಷಿಕ ಸಭೆ ನಡೆಯಿತು. ಮೈಮೂಲ್ ವಿಸ್ತರಣಾಧಿಕಾರಿ ಶ್ರೀಕಾಂತ್ ವಾರ್ಷಿಕ ವರದಿಯನ್ನು ಓದಿ, ಸಂಘ 2.38 ಲಕ್ಷ ರೂ. ಲಾಭ ಗಳಿಸಿದೆ ಎಂದು ತಿಳಿಸಿದರು. ಸಭೆಯಲ್ಲಿ ಮೈಮೂಲ್ ನಿಧೇìಶಕ ಪಿ.ಎಂ.ಪ್ರಸನ್ನ, ಗ್ರಾಮದ ಮುಖಂಡ ಪುಟ್ಟರಾಜು ಮಾತನಾಡಿದರು.
ಸಂಘದ ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷೆ, ನಿರ್ದೇಶಕರಾದ ಗೌರಮ್ಮ, ರಾಥಾ ನೇತ್ರಾವತಿ, ಜಯಂತಿ, ಬೋರಮ್ಮ, ಪದ್ಮಮ್ಮ, ಮಂಉಳಮ್ಮ, ಪೂರ್ಣಿಮಾ, ಮಂಜುಳಾ, ತಾಯಮ್ಮ, ಮಂಜಮ್ಮ, ಜ್ಯೋತಿ, ಗ್ರಾಮದ ಮುಖಂಡ ಬಸವರಾಜು, ಕಾಂತರಾಜು, ಸಂಘದ ಸದಸ್ಯರು, ಸಿಇಒ ರತ್ನಮ್ಮ ಹಾಗೂ ಗ್ರಾಮಸ್ಥರು ಇದ್ದರು.