ಬೆಂಗಳೂರು: ಕೆವೈಸಿ ಅಪ್‌ಡೇಟ್ ಮಾಡುವ ನೆಪದಲ್ಲಿ ಸೈಬರ್ ವಂಚಕರು ಲೋಕಾಯುಕ್ತ ನಿವೃತ್ತ ರಿಜಿಸ್ಟ್ರಾರ್ ನ ಬ್ಯಾಂಕ್ ಖಾತೆಯಿಂದ ಎಗರಿಸಿದ್ದ 9 ಲಕ್ಷ ರೂ. ಹಣ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಸಮಯ ಪ್ರಜ್ಞೆಯಿಂದ ಮರಳಿ ಬ್ಯಾಂಕ್ ಖಾತೆಗೆ ಸೇರಿದೆ.
ಏನಿದು ಪ್ರಕರಣ?:
ಕಳೆದ ಭಾನುವಾರ ಲೋಕಾಯುಕ್ತ ನಿವೃತ್ತ ರಿಜಿಸ್ಟ್ರಾರ್ ಅವರಿಗೆ ಕರೆ ಮಾಡಿರುವ ಸೈಬರ್ ವಂಚಕರು, ಕೆನರಾ ಬ್ಯಾಂಕ್ ಕಾಲ್ ಸೆಂಟರ್‌ನಿಂದ ಕರೆ ಮಾಡುತ್ತಿರುವುದಾಗಿ ಪರಿಚಯಿಸಿ ಕೊಂಡಿದ್ದಾರೆ. ಬಳಿಕ ಬ್ಯಾಂಕ್ ಖಾತೆ ಕೆವೈಸಿ ಅಪ್‌ಡೇಟ್ ಮಾಡಬೇಕು ಎಂದು ಮಾಹಿತಿ ಪಡೆದುಕೊಂಡಿದ್ದಾರೆ. ಇದಾದ ಕೆಲವೇ ನಿಮಿಷಗಳಲ್ಲಿ ನಿವೃತ್ತ ರಿಜಿಸ್ಟ್ರಾರ್ ಬ್ಯಾಂಕ್ ಖಾತೆಯಲ್ಲಿದ್ದ 9 ಲಕ್ಷ ರೂ. ಮತ್ತೂಂದು ಖಾತೆಗೆ ವರ್ಗಾವಣೆಯಾಗಿದೆ. ಬಳಿಕ ಎಚ್ಚೆತ್ತುಕೊಂಡ
ಅವ ರು ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೌಡಾಯಿಸಿದ್ದಾರೆ. ಈ ವೇಳೆ ದೂರು ನೀಡಲು ಮುಂದಾಗಿದ್ದಾರೆ. ಇದೇ ಸಮಯಕ್ಕೆ ಕಾನ್ಸ್‌ಟೇಬಲ್ ಆಶಾ¤ಪ್ ಸಾಬ್ ಪಿಂಜಾರ ಅವರು ರಜೆ ಇದ್ದರೂ ಠಾಣೆಗೆ ಬಂದಿದ್ದರು.
ನಿವೃತ್ತ ರಿಜಿಸ್ಟ್ರಾರ್ ದೂರು ಆಲಿಸಿ ಎಫ್‌ಐಆರ್ ದಾಖಲಿಸುವ ಬದಲು ತಕ್ಷಣ ಕೆನರಾ ಬ್ಯಾಂಕ್ ನೋಡಲ್ ಅಧಿಕಾರಿಗೆ ಕರೆ ಮಾಡಿದ್ದಾರೆ. ಈ ವೇಳೆ ರಜೆ ಹಿನ್ನೆಲೆಯಲ್ಲಿ ರಾಜಸ್ಥಾನದಲ್ಲಿದ್ದ ನೋಡಲ್ ಅಧಿಕಾರಿ ಕರೆ ಸ್ವೀಕರಿಸಿ ದೂರು ಆಲಿಸಿದ್ದಾರೆ. ಅವರು ಸಹ ತಡ ಮಾಡದೆ ಸೈಬರ್ ವಂಚಕರ ಖಾತೆಯನ್ನು ಫ್ರೀಜ್ ಮಾಡಿದ್ದಾರೆ. ಬಳಿಕ ಆ ಹಣವನ್ನು ಮರಳಿ ನಿವೃತ್ತ ರಿಜಿಸ್ಟ್ರಾರ್ ಗೆ ವರ್ಗಾಯಿಸಿದ್ದಾರೆ.
ಸಮಯ ಪ್ರಜ್ಞೆಯಿಂದ ಹಣ ಮರಳಿ ನಿವೃತ್ತ ರಿಜಿಸ್ಟ್ರಾರ್‌ಗೆ ಸಿಗಲು ಕಾರಣರಾದ ಕಾನ್ಸ್ ಟೇಬಲ್ ಪಿಂಜಾರ ಅವರ ಕಾರ್ಯಕ್ಕೆ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.