Advertisement

9 ಕೆರೆ ತುಂಬಿಸಲು 22 ಕೋಟಿ ಅನುದಾನ: ವಿನಯ್‌ ಸಂತಸ

01:07 PM Mar 19, 2017 | |

ಧಾರವಾಡ: ತಾಲೂಕಿನ ಐದು ಗ್ರಾಮಗಳಲ್ಲಿನ 9 ಕೆರೆಗಳಿಗೆ ತುಪ್ಪರಿಹಳ್ಳದ ನೀರು ತುಂಬಿಸುವ ಯೋಜನೆಗೆ ಮುಖ್ಯಮಂತ್ರಿಗಳು ಆಯವ್ಯಯದಲ್ಲಿ ಅನುದಾನ ಘೋಷಿಸಿರುವುದು ಸಂತಸ ತಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ್‌ ಕುಲಕರ್ಣಿ ಹರ್ಷ ವ್ಯಕ್ತ ಪಡಿಸಿದ್ದಾರೆ. 

Advertisement

ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು, ಧಾರವಾಡ ತಾಲೂಕಿನಲ್ಲಿ ಹುಟ್ಟಿ ಹರಿದು ಬೆಣ್ಣೆ ಹಳ್ಳ ಸೇರುವ ತುಪರಿ ಹಳ್ಳದಲ್ಲಿ ಯಥೇತ್ಛವಾಗಿ ನೀರು ಹರಿದು ಹೋಗುತ್ತದೆ. ಈ ನೀರನ್ನು ಬಳಸಿಕೊಂಡು ಕೃಷಿ ಮತ್ತು ಗ್ರಾಮೀಣ ಭಾಗದ ಅಂತರ್ಜಲ ಹೆಚ್ಚಿಸಬಹುದು. ಸದ್ಯ ಈ ಯೋಜನೆಗೆ 22.5 ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳು 2017-18ನೇ ಸಾಲಿನ ಬಜೆಟ್‌ನಲ್ಲಿ ಕೊಟ್ಟಿದ್ದಾರೆ.

ಆದರೆ ಈ ಯೋಜನೆಗೆ ಅಂದಾಜು 28 ಕೋಟಿ ರೂ. ಅಗತ್ಯವಿದ್ದು, ಉಳಿದ ಹಣವನ್ನು ಹಂತ ಹಂತವಾಗಿ ಪಡೆಯಲಾಗುವುದು. ಮುಂಬರುವ ದಿನಗಳಲ್ಲಿ ಹಂಗರಕಿ, ದುಬ್ಬನಮರಡಿ ಗ್ರಾಮಗಳೂ ಸೇರಿದಂತೆ ಕೆರೆಗಳಿರುವ ಊರುಗಳ ಪ್ರದೇಶದ ಸುಮಾರು 10 ಸಾವಿರ ಎಕರೆ ಭೂಮಿಗೆ ಸಣ್ಣ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಇದೆ ಎಂದು ಸಚಿವ ವಿನಯ ಕುಲಕರ್ಣಿ ಹೇಳಿದ್ದಾರೆ. 

ಬೆಣ್ಣೆಹಳ್ಳದ ಉಪಹಳ್ಳವಾಗಿರುವ ತುಪ್ಪರಿಹಳ್ಳದ ಮೂಲಕ ಪ್ರತಿವರ್ಷ ಮಳೆಗಾಲ ಸಂದರ್ಭದಲ್ಲಿ ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹರಿದು ಹೋಗುತ್ತಿತ್ತು. ಉತ್ತಮ ಮಳೆಯಾಗುವ ಪ್ರದೇಶದಲ್ಲಿ ಹರಿಯುವ ಈ ಹಳ್ಳದ ನೀರಿನ ಸಮರ್ಪಕ ಬಳಕೆಯಾಗಬೇಕೆಂಬ ನಿಟ್ಟಿನಲ್ಲಿ ತಜ್ಞರು ಮತ್ತು ಬೃಹತ್‌ ನೀರಾವರಿ ಇಲಾಖೆಯ ಇಂಜನಿಯರ್‌ ಮೂಲಕ ವಿವರವಾದ ಯೋಜನಾ ವರದಿ ತಯಾರಿಸಿ,

ಸರಕಾರದ ಮಟ್ಟದಲ್ಲಿ ಯೋಜನೆಯ ಮಹತ್ವವನ್ನು ಮನಗಾಣಿಸಿ ಬಜೆಟ್‌ನಲ್ಲಿ ಅನುದಾನ ಪಡೆಯಲಾಗಿದೆ ಎಂದು ಹೇಳಿದ್ದಾರೆ. ತುಪ್ಪರಿ ಹಳ್ಳದ ಮೂಲಕ ತಡಕೋಡ, ನೀರಲಕಟ್ಟಿ ಹಾಗೂ ಬೋಕ್ಯಾಪುರದಲ್ಲಿ ತಲಾ ಒಂದು ಕೆರೆ ಜೊತೆಗೆ ಹಳೇ ತೇಗೂರ, ಬೋಗೂರ ಮತ್ತು ಗರಗ ಗ್ರಾಮಗಳಲ್ಲಿ ತಲಾ ಎರಡು ಕೆರೆಗಳು ಸೇರಿ ಒಟ್ಟು ಒಂಬತ್ತು ಕೆರೆಗಳಲ್ಲಿ ಮಳೆಗಾಲದ ಅವಧಿಯಲ್ಲಿ 82 ಎಂಸಿಎಫ್‌ಟಿ ನೀರನ್ನು ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ.

Advertisement

ತಡಕೋಡ, ಬೋಕ್ಯಾಪುರ, ಗರಗ, ಬೋಗೂರ, ಹಳೇತೇಗೂರ ಮತ್ತು ನೀರಲಕಟ್ಟಿ ಗ್ರಾಮಗಳಲ್ಲಿನ ಕೆರೆಗಳಿಗೆ ಜಲಾನಯನ ಪ್ರದೇಶದ ವ್ಯಾಪ್ತಿ ಕಡಿಮೆ ಇರುವ ಕಾರಣ ಪ್ರತಿವರ್ಷವೂ ಈ ಕೆರೆಗಳು ತುಂಬುವುದಿಲ್ಲ. ಬೋಗೂರ ಮತ್ತು ಹಳೇತೇಗೂರ ಬ್ಯಾರೇಜಿನಿಂದ ನೀರನ್ನು ಎತ್ತಿ ಏತ ನೀರಾವರಿ ಮೂಲಕ ಕೆರೆಗಳನ್ನು ತುಂಬಿಸುವ ಯೋಜನೆ ಇದಾಗಿದೆ.

ಈ ಗ್ರಾಮಗಳ ಬ್ಯಾರೇಜಿನ ಹತ್ತಿರ ಜಾಕ್‌ವೆಲ್‌ ನಿರ್ಮಿಸಿ ನೀರನ್ನು  ಸಬ್‌ ಮರ್ಜಡ್‌ ಸೆಂಟ್ರಿಫೂಗಲ್‌ ಪಂಪ್‌ ಮೂಲಕ ಎತ್ತಲಾಗುವುದು. ಪ್ರಸ್ತುತ ಈ ಕೆರೆಗಳು ಹಾಗೂ ತುಪ್ಪರಿ ಹಳ್ಳದಲ್ಲಿ ಸಂಗ್ರಹವಾಗಿರುವ ಹೂಳು ತೆಗೆದು, ಬದು ಗಟ್ಟಿಗೊಳಿಸುವ ಕಾರ್ಯವೂ ಇದರಲ್ಲಿ ಸೇರಿದೆ ಎಂದು ಸಚಿವ ವಿನಯ್‌ ತಿಳಿಸಿದ್ದಾರೆ.    

Advertisement

Udayavani is now on Telegram. Click here to join our channel and stay updated with the latest news.

Next