Advertisement

9 ಇಂದಿರಾ ಕ್ಯಾಂಟೀನ್‌ ಪುನರಾರಂಭ

10:46 AM Jun 08, 2020 | Suhan S |

ಹುಬ್ಬಳ್ಳಿ: ಕೋವಿಡ್ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಹುತೇಕವಾಗಿ ಸ್ಥಗಿತಗೊಂಡಿದ್ದ ಅವಳಿನಗರದ 9 ಇಂದಿರಾ ಕ್ಯಾಂಟೀನ್‌ಗಳು ಪುನರಾರಂಭಗೊಂಡಿವೆ. ಕಳೆದ ಕೆಲ ದಿನಗಳಿಂದ ಪೌರ ಕಾರ್ಮಿಕರಿಗೆ ಮಾತ್ರ ಸೀಮಿತವಾಗಿದ್ದ ಇಂದಿರಾ ಕ್ಯಾಂಟೀನ್‌ಗಳನ್ನು ಜೂ.1ರಿಂದ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗಿದೆ.

Advertisement

ಸಾರ್ವಜನಿಕರಿಗೆ ಬೆಳಗಿನ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿಯ ಊಟ ನೀಡಲಾಗುತ್ತಿದೆ. ಆರಂಭದಲ್ಲಿ ಕೇವಲ ಹುಬ್ಬಳ್ಳಿಯ ಎರಡು ಹಾಗೂ ಧಾರವಾಡದ ಎರಡು ಕ್ಯಾಂಟೀನ್‌ಗಳನ್ನು ಮಾತ್ರ ತೆರೆಯಲಾಗಿತ್ತು. ಇದೀಗ ಎಲ್ಲ 9 ಕ್ಯಾಂಟೀನ್‌ಗಳು ಸೇವೆ ನೀಡುತ್ತಿವೆ.

ಪಾರ್ಸ್‌ಲ್‌ನಿಂದ ತಟ್ಟೆಗೆ: ಲಾಕ್‌ಡೌನ್‌ನಿಂದ 2 ತಿಂಗಳ ನಂತರ ಮತ್ತೇ ಕಾರ್ಯಾರಂಭ ಮಾಡಿರುವ ಇಂದಿರಾ ಕ್ಯಾಂಟೀನ್‌ ಆರಂಭದಲ್ಲಿ ಮೇ.23ರಿಂದ ಕೇವಲ ಪಾರ್ಸಲ್‌ ಮಾತ್ರ ನೀಡಲಾಗುತ್ತಿತ್ತು. ಅದು ಕೂಡಾ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಮಾತ್ರ ನೀಡಲಾಗುತ್ತಿತ್ತು. ಅದು ಕಿಮ್ಸ್‌ ಆವರಣ, ಗೋಕುಲ ರಸ್ತೆ ಹೊಸ ಬಸ್‌ ನಿಲ್ದಾಣ ಹಾಗೂ ಧಾರವಾಡ ಎರಡು ಕ್ಯಾಂಟೀನ್‌ಗಳಲ್ಲಿ ಮಾತ್ರ ಅವಕಾಶ ಕಲ್ಪಿಸಲಾಗಿತ್ತು . ರಾಜ್ಯ ಸರಕಾರ ಜೂ.8ರಿಂದ ಎಲ್ಲೆಡೆ ಹೊಟೇಲ್‌ ಗಳ ಪುನರಾರಂಭಕ್ಕೆ ಹಸಿರು ನಿಶಾನೆ ತೋರಿಸಿದ್ದು, ಇದಕ್ಕೂ ಮೊದಲೇ ಇಂದಿರಾ ಕ್ಯಾಂಟೀನ್‌ಗಳು ಪುನರಾರಂಭಗೊಂಡಿವೆ. ಕೋವಿಡ್ ಮುಂಜಾಗ್ರತೆ: ಅವಳಿನಗರದ ಎಲ್ಲ ಒಂಬತ್ತು ಇಂದಿರಾ ಕ್ಯಾಂಟೀನ್‌ಗಳಲ್ಲೂ ಸರಕಾರದ ನಿಯಮಾನುಸಾರ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಕ್ಯಾಂಟೀನ್‌ಗಳ ಸಿಬ್ಬಂದಿ ಶುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ.

ಕ್ಯಾಂಟೀನ್‌ಗೆ ಬರಲು ಹಿಂದೇಟು: ಈ ಹಿಂದೆ 300 ರಿಂದ 500 ಪ್ಲೇಟ್‌ಗಳವರೆಗೆ ಉಪಹಾರ-ಊಟ ವಿತರಿಸಲಾಗುತ್ತಿತ್ತು. ಕೊರೊನಾ ಆತಂಕದಿಂದ ಜನ ಹೊರಗಡೆಯ ಉಪಹಾರ, ಊಟಕ್ಕೆ ಹಿಂದೇಟು ಹಾಕುತ್ತಿರುವುದರಿಂದ 250-300 ಉಪಹಾರ ಹಾಗೂ ಊಟ ವಿತರಿಸಲಾಗುತ್ತಿದೆ. ಕೆಲ ಕ್ಯಾಂಟೀನ್‌ಗಳಲ್ಲಿ ಜನರ ಕೊರತೆ ಇದ್ದು, ಉಪಹಾರ-ಊಟ ತುಂಬಾ ಕಡಿಮೆ ಹೋಗುತ್ತಿದೆ.

ಇನ್ನು ನ್ಯೂ ಇಂಗ್ಲೀಷ್‌ ಸ್ಕೂಲ್‌, ಸೋನಿಯಾಗಾಂಧಿ ನಗರ ಹಾಗೂ ಎಸ್‌.ಎಂ.ಕೃಷ್ಣಾ ನಗರದಲ್ಲಿ ರಾತ್ರಿ ಊಟ ಇನ್ನೂ ಆರಂಭಿಸಲಾಗಿಲ್ಲ. ಇನ್ನುಳಿದ ಕ್ಯಾಂಟೀನ್‌ಗಳಲ್ಲೂ ರಾತ್ರಿ ಊಟಕ್ಕೆ ಜನರು ಆಗಮಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಅಲ್ಲಿ ಜನರ ಆಗಮಿಸುವುದನ್ನು ನೋಡಿ ರಾತ್ರಿ ಊಟ ಆರಂಭಿಸಲಾಗುವುದು.

Advertisement

ಕೋವಿಡ್ ವೈರಸ್‌ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಅವಳಿನಗರದ ಎಲ್ಲ ಇಂದಿರಾ ಕ್ಯಾಂಟೀನ್‌ಗಳನ್ನು ಪುನರಾಂಭಿಸಲಾಗಿದೆ. ಕೆಲ ಕ್ಯಾಂಟೀನ್‌ಗಳಲ್ಲಿ ಕೊರೊನಾ ಕಾರಣದಿಂದ ಊಟ-ಉಪಹಾರದ ಸಂಖ್ಯೆ ಕಡಿಮೆಯಾಗಿದ್ದು, ಇನ್ನೂ ಮೂರು ಕಡೆ ರಾತ್ರಿ ಊಟ ಆರಂಭಿಸಿಲ್ಲ. ಇನ್ನು ಸೋಮವಾರದಿಂದ ಅಲ್ಲಿಯೂ ರಾತ್ರಿ ಊಟ ಆರಂಭಿಸುವ ಕುರಿತು ಚಿಂತನೆ ನಡೆದಿದೆ. ಮಾಸಾಂತ್ಯದೊಳಗೆ ಜನರ ಆಗಮನ ಹೆಚ್ಚುವ ನಿರೀಕ್ಷೆ ಇದೆ.  –ಹೇಮಲ್‌ ದೇಸಾಯಿ, ಸಿಇಒ ಮಯೂರ ಆದಿತ್ಯಾ ರೆಸಾರ್ಟ್‌(ಇಂದಿರಾ ಕ್ಯಾಂಟಿನ್‌ ನಿರ್ವಹಣೆ ).

 

-ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next