ಉದಯವಾಣಿ ಸಮಾಚಾರ
ವಿಜಯಪುರ: 5 ವರ್ಷಗಳ ಹಿಂದೆ ನಡೆದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಅವರ ಬಳಿ ಇದ್ದದ್ದು ಕೇವಲ 9 ರೂ. ನಗದು ಮಾತ್ರ. ಆದರೆ ಈಗ ಪತಿಯ ಖಾತೆಯಲ್ಲಿ 108 ಕೋಟಿ ರೂ. ಮೌಲ್ಯದ ಆಸ್ತಿ ಇದ್ದರೆ, ಪತ್ನಿ ಹೆಸರಿನಲ್ಲಿ 40 ಲಕ್ಷ ರೂ. ಮೌಲ್ಯದ ಆಸ್ತಿ ಇದೆ! ಇದು ವಿಜಯಪುರದ ಚಡಚಣ ತಾಲೂಕಿನ ಬರಡೋಲ ಗ್ರಾಮದ 52 ಬಾರಿ ಸ್ಪರ್ಧೆ ಮಾಡಿ ದಾಖಲೆ ಹೊಂದಿರುವ ದೀಪಕ್ ಗಂಗಾರಾಂ ಕಟಕದೊಂಡ ಹಾಗೂ ಆತನ ಪತ್ನಿ ಕವಿತಾ ದೀಪಕ್ ಕಟಕದೊಂಡ ಆಸ್ತಿ ವಿವರ.
ಇದನ್ನೂ ಓದಿ:Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
ಈಗಾಗಲೇ ಪ. ಜಾತಿ ಮೀಸಲು ವಿಜಯಪುರ ಕ್ಷೇತ್ರದಿಂದ ಸ್ಪರ್ಧಿಸಿರುವ ಈ ದಂಪತಿ, ಇದೀಗ ಮಹಾರಾಷ್ಟ್ರದಲ್ಲಿ ಪ. ಜಾತಿಗೆ ಮೀಸಲಿರುವ ಸೋಲಾಪುರ ಕ್ಷೇತ್ರದಿಂದ ಸ್ಪರ್ಧೆಗೆ ಮುಂದಾಗಿದ್ದಾರೆ. ಪತಿ ದೀಪಕ ಹಿಂದುಸ್ತಾನ ಜನತಾ ಪಕ್ಷದಿಂದ ಸ್ಪರ್ಧಿಸಿದರೆ, ಪತ್ನಿ ರಾಣಿ ಚನ್ನಮ್ಮ ಪಕ್ಷದಿಂದ ಕಣಕ್ಕಿಳಿದಿದ್ದಾರೆ.
ಪತಿ-ಪತ್ನಿ ಇಬ್ಬರೂ ಎರಡು ಕ್ಷೇತ್ರಗಳಲ್ಲಿ ಜತೆಯಾಗಿ ಹಾಗೂ ಪ್ರತ್ಯೇಕ ಪಕ್ಷಗಳಿಂದ ಸ್ಪರ್ಧಿಸುತ್ತಿರುವುದು ಕುತೂಹಲದ ವಿಷಯ. ಇವರ ಬಳಿ 108 ಕೋಟಿ ಆಸ್ತಿ ಇದ್ದು, ಎಲ್ಲವೂ ಸಾಲದಿಂದಲೇ ಆಗಿರುವುದು. ದಾನಿಗಳ ದೇಣಿಗೆಯಿಂದ ವಿಶ್ವದಲ್ಲೇ ಅತಿ ಎತ್ತರ ಶ್ರೀ ವೆಂಕಟೇಶ್ವರ ಮೂರ್ತಿ ಸ್ಥಾಪಿಸಲು ಮುಂದಾಗಿದ್ದಾರೆ.