ಕಾಸರಗೋಡು: ಕೇರಳದಲ್ಲಿ ಮಳೆಯ ಕೊರತೆ, ಮೇಲ್ಮೈ ಮತ್ತು ಅಂತರ್ಜಲದ ಕೊರತೆ ಹಾಗೂ ಉಪ್ಪು ನೀರಿನ ಒಳಹರಿವಿನಿಂದಾಗಿ ಕಾಸರಗೋಡು ಜಿಲ್ಲೆ ಸೇರಿದಂತೆ ಒಂಬತ್ತು ಜಿಲ್ಲೆಗಳನ್ನು ಬರಪೀಡಿತ ಜಿಲ್ಲೆಗಳನ್ನಾಗಿ ರಾಜ್ಯ ಸರಕಾರವು ಘೋಷಿಸಿದೆ.
ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಕಾಸರಗೋಡು, ಕಣ್ಣೂರು, ಆಲಪ್ಪುಯ, ಇಡುಕ್ಕಿ, ಕಲ್ಲಿಕೋಟೆ, ಮಲಪ್ಪುರ, ಪಾಲಾಟ್, ತ್ರಿಶ್ಶೂರು, ವಯನಾಡು ಜಿಲ್ಲೆಗಳನ್ನು ಬರಪೀಡಿತ ಜಿಲ್ಲೆಗಳನ್ನಾಗಿ ಘೋಷಿಸಲಾಗಿದೆ.
ಕೇಂದ್ರ ಹವಾಮಾನ ಇಲಾಖೆಯ ಪ್ರಕಾರ 2017ರ ಅಕ್ಟೋಬರ್ – ಡಿಸೆಂಬರ್ ತಿಂಗಳಲ್ಲಿ ಈಶಾನ್ಯ ಮಾನ್ಸೂನ್ ಅವಧಿಯಲ್ಲಿ ಮಳೆಯ ಕೊರತೆ ತೀವ್ರವಾಗಿ ಉಂಟಾಗಿತ್ತು. ಇತ್ತೀಚೆಗೆ ಸುರಿದ ಅಕಾಲಿಕ ಮಳೆಯೂ ಅಂತರ್ಜಲ ಹೆಚ್ಚಿಸುವಲ್ಲಿ ಪ್ರಯೋಜನವಾಗಲಿಲ್ಲ. ಬರಗಾಲ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಈ ಜಿಲ್ಲೆಗಳಲ್ಲಿ ಕುಡಿಯುವ ನೀರು ವಿತರಣೆಗಾಗಿ ತುರ್ತು ಕ್ರಮ ತೆಗೆದುಕೊಳ್ಳಲು ಆದೇಶಿಸಲಾಗಿದೆ. ಆಯಾ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳ ಸಭೆ ಕರೆದು ಟ್ಯಾಂಕ್‌ಗಳಲ್ಲಿ ನೀರು ಸರಬರಾಜು ಹಾಗೂ ಬರಪೀಡಿತ ಪ್ರದೇಶಗಳಲ್ಲಿ ಕಿಯೋಸ್ಕ್ಗಳಲ್ಲಿ ನೀರು ತುಂಬಿಸುವ ಯೋಜನೆಯನ್ನು ಹಾಕಿಕೊಳ್ಳಲಾಗುವುದು.
ಕುಡಿಯುವ ನೀರು ವಿತರಣೆಗಾಗಿ ರಾಜ್ಯ ವಿಪತ್ತು ಪರಿಹಾರ ಪ್ರಾಧಿಕಾರ ಮೂಲಕ ಹಣವನ್ನು ಬಳಸಿಕೊಳ್ಳ ಹುದು. ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಪ್ರಸ್ತುತ ಬರ ಇಲ್ಲ. ಕುಡಿಯುವ ನೀರು ಸಮಸ್ಯೆಯೂ ಇಲ್ಲ. ಆದರೆ ಮಲೆನಾಡು ಪ್ರದೇಶಗಳಲ್ಲಿ, ಪ್ರಧಾನ ಜಲಮೂಲಗಳಲ್ಲಿ ನೀರಿನ ಹರಿವು ಕಡಿಮೆಯಾಗಿದೆ ಮತ್ತು ಈ ಮೂಲಕ ಕುಡಿಯುವ ನೀರು ಸಂಗ್ರಹಕ್ಕೆ ಸಮಸ್ಯೆ ಉಂಟಾಗುವ ಸಾಧ್ಯತೆ ಇರುವುದರಿಂದ ಇಡುಕ್ಕಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯನ್ನಾಗಿ ಘೋಷಿಸಲಾಗಿದೆ.
ಮುಳಿಯಾರಿನ ಬಾವಿಕ್ಕೆರೆ ಪಂಪ್‌ಹೌಸ್‌ನಿಂದ ಸುಮಾರು 16 ಕಿ.ಮೀ. ದೂರದ ಕಾಸರಗೋಡಿಗೆ ನೀರು ಸರಬರಾಜು ಮಾಡಲು ಅಳವಡಿಸಿರುವ ಹಳೆಯ ಕಾಲದ ಕಬ್ಬಿಣದ ಪೈಪ್‌ಗ್ಳು ಅಲ್ಲಲ್ಲಿ ಒಡೆದಿರುವುದರಿಂದ ಲಕ್ಷಾಂತರ ಲೀಟರ್ ನೀರು ಪೋಲಾಗುತ್ತಿದೆ. ಹಳೆಯ ಪೈಪ್‌ಗ್ಳನ್ನು ಬದಲಾಯಿಸಿ ಹೊಸ ಪೈಪ್‌ಗ್ಳನ್ನು ಅಳವಡಿಸುವ ಯೋಜನೆಗಾಗಿ ಕಾಮಗಾರಿ ಆರಂಭ ಗೊಂಡರೂ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಭೂಸ್ವಾಧೀನ ಸಾಧ್ಯತೆ ಇರುವುದರಿಂದ ರಸ್ತೆ ಬದಿಯಲ್ಲಿ ಪೈಪ್‌ಗ್ಳನ್ನು ಅಳವಡಿಸುವಲ್ಲಿ ವಿಳಂಬ ಉಂಟಾಗಲಿದೆ.
ಕಳೆದ ವರ್ಷ ಜಿಲ್ಲೆಯಲ್ಲಿ ಮಾರ್ಚ್ ಹಾಗೂ ಎಪ್ರಿಲ್ ತಿಂಗಳಲ್ಲಿ ಉಂಟಾದ ಕುಡಿಯುವ ನೀರು ಸಮಸ್ಯೆಯನ್ನು ಪರಿಹರಿಸಲು ಕೊನೆಯ ಕ್ಷಣದಲ್ಲಿ ಪ್ರತಿ ಪಂಚಾಯತ್‌ನ ಬರಪೀಡಿತ ವಾರ್ಡ್‌ಗಳಲ್ಲಿ ಕಿಯೋಸ್ಕ್ಗಳನ್ನು ಸ್ಥಾಪಿಸಿ ನೀರು ವಿತರಿಸುವ ಯೋಜನೆ ಕೈಗೊಳ್ಳಲಾಗಿತ್ತು. ಜಿಲ್ಲೆಯ ಜನರು ಕೃಷಿಗಾಗಿ ಕೆರೆ, ಬಾವಿ, ಹೊಳೆಗಳನ್ನು ಆಶ್ರಯಿಯುತ್ತಿದ್ದು, ಕುಡಿಯುವ ನೀರಿಗಾಗಿ ಕೊಳೆವೆ ಬಾವಿ ಮತ್ತು ತೆರೆದ ಬಾವಿಗಳನ್ನು ಬಳಸುತ್ತಿದ್ದಾರೆ. ಆದರೆ ಅಂತರ್ಜಲದ ಕೊರತೆ ಉಂಟಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರು ಸಮಸ್ಯೆ ತಲೆದೋರಲಿದೆ.
ಕಾಸರಗೋಡು: ಕುಡಿಯಲು ಉಪ್ಪುನೀರು
ಚಂದ್ರಗಿರಿ ಹೊಳೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆ ಯಲ್ಲಿ ಸಮುದ್ರದಿಂದ ಉಪ್ಪುನೀರು ಒಳಹರಿಯುವ ಸಾಧ್ಯತೆ ಹೆಚ್ಚಾಗಿದೆ. ಕಾಸರಗೋಡು ನಗರ ಮತ್ತು ಆಸುಪಾಸಿನ ಪಂಚಾಯತ್‌ಗಳಿಗೆ ಜಲ ಮಂಡಳಿ ವತಿಯಿಂದ ಬಾವಿಕ್ಕೆರೆ ಪಂಪ್ ಹೌಸ್ ಮೂಲಕ ನೀರು ಪೂರೈಕೆಯಾಗುತ್ತಿದೆ. ಚಂದ್ರಗಿರಿ ಹೊಳೆಗೆ ಆಲೂರಿನಲ್ಲಿ ನಿರ್ಮಿಸಿದ ತಡೆಗೋಡೆಯ ಮೂಲಕ ಉಪ್ಪುನೀರು ಸೇರುವುದರಿಂದ ನಗರಕ್ಕೆ ಉಪ್ಪುನೀರು ಮಿಶ್ರಿತ ಕುಡಿಯುವ ನೀರು ವಿತರಣೆಯಾಗುವ ಸಾಧ್ಯತೆ ಹೆಚ್ಚಾಗಿದೆ.