Advertisement

Belthangady ಕೊಳಚೆ ಮತ್ತೆ ಸೋಮಾವತಿಗೆ!

01:07 PM Dec 04, 2024 | Team Udayavani |

ಬೆಳ್ತಂಗಡಿ: ನದಿಯಲ್ಲಿ ಯಾವುದೇ ವಾಹನ ತೊಳೆಯಬಾರದು, ತ್ಯಾಜ್ಯ ನೀರು ನದಿಗೆ ಬಿಡಬಾರದು ಎಂಬ ಕಟ್ಟಾಜ್ಞೆಯೊಂದಿಗೆ ಕಲುಷಿತಗೊಳಿಸಿದರೆ ಓಡೋಡಿ ಬಂದು ದಂಡ ವಿಧಿಸುವ ಮಾಲಿನ್ಯ ಮಂಡಳಿ, ಹೋರಾಟಗಾರರು ಮತ್ತು ಬೆಳ್ತಂಗಡಿ ಪಟ್ಟಣ ಪಂಚಾಯತ್‌ ಈಗ ಮತ್ತೆ ನಿದ್ದೆಗೆ ಜಾರಿದೆ. ಬೆಳ್ತಂಗಡಿಯ ಅರೆಬರೆ ಒಳಚರಂಡಿ ವ್ಯವಸ್ಥೆಯಿಂದಾಗಿ ಸೋಮಾವತಿ ನದಿ ಕಲುಷಿತಗೊಳ್ಳುತ್ತಿದೆ.

Advertisement

ಬೆಳ್ತಂಗಡಿ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಬಸ್‌ ನಿಲ್ದಾಣ ಸುತ್ತಮುತ್ತಲ ಹೊಟೇಲ್‌, ಕ್ಯಾಂಟೀನ್‌, ಅಂಗಡಿ ಮುಂಗಟ್ಟು, ಸಹಿತ ಇನ್ನಿತರ ಸ್ಥಳಗಳ ಮಲಿನ ನೀರು ನೇರವಾಗಿ ಒಳಚರಂಡಿ ಮೂಲಕ ಅಂಬೇಡ್ಕರ್‌ ಭವನ ಎದುರುಗಡೆಯಾಗಿ ಕೃಷಿ ಇಲಾಖೆ ಮುಂಭಾಗದಿಂದ ಮುಂದಕ್ಕೆ ಸಾಗುತ್ತದೆ. ಇಲ್ಲಿಂದ ನೇರವಾಗಿ ನಗರದ ಜೀವನದಿ ಸೋಮಾವತಿ ಪಾಲಾಗುತ್ತಿದೆ. ಇದು ಸರಿಸುಮಾರು 20 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಪ್ರಕ್ರಿಯೆ. ಈ ವಿಚಾರವಾಗಿ ಕಳೆದ ಬಾರಿ ಉದಯವಾಣಿ ಬೆಳಕು ಚೆಲ್ಲಿತ್ತು. ಈ ವೇಳೆ ಎಲ್ಲ ಹೊಟೇಲ್‌ ಸಹಿತ ಚರಂಡಿಗೆ ತ್ಯಾಜ್ಯ ಬಿಡುವ ಪೈಪ್‌ಗ್ಳಿಗೆ ಎಂಡ್‌ ಕ್ಯಾಪ್‌ ಹಾಕಿ ಎಚ್ಚರಿಕೆ ನೀಡಲಾಗಿತ್ತು. ಆದರೆ ಮತ್ತದೇ ಸ್ಥಿತಿ ಎಂಬಂತಾಗಿದೆ.

ಕೃಷಿ ಇಲಾಖೆ ದೂರಿಗೆ ಸ್ಪಂದನೆ ಶೂನ್ಯ
ಈ ಕುರಿತು ಕೃಷಿ ಇಲಾಖೆ ಅಧಿಕಾರಿಗಳು ಹಲವು ಬಾರಿ ದೂರು ನೀಡಿದ್ದರು. ಕೃಷಿ ಇಲಾಖೆ ಮುಂಭಾಗದ ತೆರೆದ ಚರಂಡಿಗೆ 2 ಲಕ್ಷ ರೂ. ವೆಚ್ಚದಲ್ಲಿ ಸ್ಲ್ಯಾಬ್‌ ಅಳವಡಿಕೆ ಮಾಡಲಾಯಿತು. ಆದರೇನು ಫಲ? ಮುಚ್ಚಿದ ಚರಂಡಿ ಒಳಗೆ ಹೋಗುತ್ತಿರುವುದು ಮತ್ತದೇ ಕಲುಷಿತ ನೀರು. ಈ ವರೆಗೆ ಕೃಷಿ ಇಲಾಖೆ ಜಾಗದಲ್ಲಿ ಪೊದೆ ಬೆಳೆದಿದ್ದುರಿಂದ ವಸ್ತುಸ್ಥಿತಿ ಯಾರಿಗೂ ಕಾಣುತ್ತಿರಲಿಲ್ಲ. ಪ್ರಸಕ್ತ ಕೃಷಿ ಇಲಾಖೆ ತನ್ನ ಜಾಗಸ್ವತ್ಛಗೊಳಿಸಿದೆ. ಜತೆಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ನೂತನ ಸೇತುವೆ ನಿರ್ಮಾಣಕ್ಕೆ ಜಾಗ ಸಮತಟ್ಟು ಮಾಡಿ ಸಲಕರಣೆ ಇಡಲು ವ್ಯವಸ್ಥೆ ಕಲ್ಪಿಸಿದ್ದರಿಂದ ಈ ಅವ್ಯವಸ್ಥೆ ಎದ್ದು ಕಾಣುತ್ತಿದೆ.

ತೈಲ ಮಿಶ್ರಿತ ಕಲುಷಿತ ನೀರು
ನದಿ ಬದಿಯಲ್ಲಿರುವ ಶೋರೂಮ್‌ಗಳಲ್ಲಿ ಕಾರು ತೊಳೆದ ಅಥವಾ ಕಾರಿನ ಆಯಿಲ್‌ ಮಿಶ್ರಿತ ನೀರು ನೇರವಾಗಿ ನದಿ ಸೇರುತ್ತಿದೆ. ಈ ಹಿಂದೆ ಈ ಕುರಿತು ಹಲವು ಬಾರಿ ನಗರಾಡಳಿತಕ್ಕೆ ದೂರು ನೀಡಲಾಗಿತ್ತು. ಆದರೆ ಪಟ್ಟಣ ಪಂಚಾಯತ್‌ ಮಾತ್ರ ಕುರುಡಾಗಿದೆ. ಇದೇ ಸೋಮಾವತಿ ನದಿಯ ಮೇಲ್ಭಾಗದಿಂದ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸಲಾಗುತ್ತದೆ. ಆದರೆ ಕೆಳ ಭಾಗದಲ್ಲಿ ಇದೇ ನೀರನ್ನು ಅವಲಂಬಿಸಿದವರ ಗತಿ ಏನು ಎಂಬಂತಾಗಿದೆ.

ನೂತನ ರಸ್ತೆಗೆ ಕಾದು ಕುಳಿತ ಪಟ್ಟಣ ಪಂಚಾಯತ್‌
ಕಲುಷಿತ ಮಲಿನ ನೀರು ಸೇರುವಲ್ಲಿ ಕೃಷಿ ಇಲಾಖೆಯ 5 ಎಕ್ರೆ ತೆಂಗಿನ ತೋಟವಿದೆ. ಆ ತೋಟ ಎಷ್ಟು ಮಲಿನವಾಗಿದೆ ಎಂದರೆ ಅದಕ್ಕೆ ಯಾರೂ ತೆರಳದ ಪರಿಸ್ಥಿತಿ ಇದೆ. ಕಲುಷಿತ ನೀರಿನ ಬಗ್ಗೆ ಪಟ್ಟಣ ಪಂಚಾಯತ್‌ ಅಧಿಕಾರಿಗಳ ಬಳಿ ಕೇಳಿದರೆ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾದರೆ ಇದೆಲ್ಲ ಸಮಸ್ಯೆಗೆ ಮುಕ್ತಿ ದೊರೆಯ ಲಿದೆ ಎಂಬ ಕಾಲ್ಪನಿಕ ಉತ್ತರ ನೀಡುತ್ತಾ ಬರುತ್ತಿದೆ. ಹಾಗಾದರೆ ಅಲ್ಲಿಯವರೆಗೆ ನದಿಗೆ ಕಲುಷಿತ ನೀರು ಹೋಗುತ್ತದೆ ಎಂಬ ಸ್ವಯಂ ನಿರ್ಧಾರಕ್ಕೆ ಪ.ಪಂ. ಬಂದಿದೆ. ಇಲ್ಲಿನ ಎಂಜಿನಿಯರ್‌ ಆಗಲಿ, ಮುಖ್ಯಾ ಧಿಕಾರಿ, ನೂತನ ಆಡಳಿತ ಸಮಿತಿ ಸೇರಿದಂತೆ ಯಾರಿಗೂ ನದಿ ಮತ್ತು ಮಾಲಿನ್ಯದ ಬಗ್ಗೆ ಕಾಳಜಿ ಇದ್ದಂತಿಲ್ಲ.

Advertisement

ನೀರು ಬಿಡದಂತೆ ಎಚ್ಚರಿಕೆ
ಈ ಹಿಂದೆ ಕಲುಷಿತ ನೀರು ಚರಂಡಿಗೆ ಬಿಡದಂತೆ ಹೊಟೇಲ್‌, ಅಂಗಡಿ ಮಾಲಕರಿಗೆ ಎಚ್ಚರಿಕೆ ನೀಡಿ ಕ್ರಮ ಕೈಗೊಳ್ಳಲಾಗಿತ್ತು. ನೂತನ ಬಸ್‌ ನಿಲ್ದಾಣ ರಚನೆಯಾದರೆ ಸಮಸ್ಯೆ ಬಗೆಹರಿಯಲಿದೆ. ಈ ವಿಚಾರವಾಗಿ ಮತ್ತೆ ಪರಿಶೀಲನೆ ನಡೆಸಲಾಗುವುದು.
-ರಾಜೇಶ್‌, ಮುಖ್ಯಾಧಿಕಾರಿ ಪ.ಪಂ.

-ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next