ಹರಪನಹಳ್ಳಿ: ಮಧ್ಯ ಕರ್ನಾಟಕದ ಅಸಂಖ್ಯಾತ ಭಕ್ತರ ಆರಾಧ್ಯ ದೈವ ಉಚ್ಚಂಗೆಮ್ಮದೇವಿ ದರ್ಶನ ಪಡೆಯಲು ರಸ್ತೆ ನಿರ್ಮಾಣಕ್ಕೆ 9 ಕೋಟಿ ರೂ. ಹಣ ಮಂಜೂರಾಗಿದೆ ಎಂದು ಕೌಶಲ್ಯಾಭಿವೃದ್ಧಿ ಮತ್ತು ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರ್‌ನಾಯ್ಕ ತಿಳಿಸಿದರು.
ತಾಲೂಕಿನ ಉಚ್ಚಂಗಿದುರ್ಗ ಗ್ರಾಮದ ಉಚ್ಚೆಂಗೆಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಮೂಲೆ ಮೂಲೆಗಳಿಂದ ಹುಣ್ಣಿಮೆ, ಅಮಾವಾಸೆ, ಜಾತ್ರೋತ್ಸವ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಉಚ್ಚೆಂಗೆಮ್ಮದೇವಿ ದರ್ಶನ ಪಡೆಯಲು ಆಗಮಿಸುತ್ತಾರೆ. ಆದರೆ ದೇವಿ ಬೆಟ್ಟದ ಮೇಲೆ ನೆಲೆಸಿರುವುದರಿಂದ ವೃದ್ಧರು, ಅಂಗವಿಕಲರು, ಮಕ್ಕಳು ಬೆಟ್ಟ ಏರಲು ಕಷ್ಟಪಡುತ್ತಿದ್ದಾರೆ. ಹಾಗಾಗಿ ಬೆಟ್ಟದ ಮೇಲಿನ ದೇವಸ್ಥಾನವರೆಗೆ ರಸ್ತೆ ನಿರ್ಮಿಸಲು ಲೋಕೋಪಯೋಗಿ ಇಲಾಖೆ ವತಿಯಿಂದ ಅನುದಾನ ಮಂಜೂರಾಗಿದೆ ಎಂದರು.
ನಾನು ಕೂಡ ಉಚ್ಚೆಂಗೆಮ್ಮದೇವಿ ಭಕ್ತನಾಗಿದ್ದು, ಅವಕಾಶ ಕಲ್ಪಿಸಿದರೆ ರಸ್ತೆ ನಿರ್ಮಿಸುವುದಾಗಿ ದೇವಿಗೆ ಸಂಕಲ್ಪ ಹೊಂದಿದ್ದೆ. ಅದರಂತೆ ಲೋಕೋಪಯೋಗಿ ಇಲಾಖೆ ಸಚಿವ ಎಚ್.ಡಿ.ರೇವಣ್ಣ ಮನವಿ ಮಾಡಿಕೊಂಡು ಹಣ ಮಂಜೂರು ಮಾಡಿಸಿದ್ದೇನೆ. 2013ರಲ್ಲಿ ಸಚಿವನಾಗಿದ್ದಾಗ ರಸ್ತೆ ನಿರ್ಮಾಣಕ್ಕೆ 2 ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು, ಆದರೆ 2 ವರ್ಷ ಕಳೆದರೂ ಅನುದಾನ ವಿನಿಯೋಗವಾಗದಿದ್ದರಿಂದ ಶಾಸಕರು ಅನ್ಯ ಕಾಮಗಾರಿಗೆ ಬಳಕೆ ಮಾಡಿಕೊಂಡರು. ಮೈಸೂರು, ತಿರುಪತಿ ಬೆಟ್ಟದ ಮೇಲೆ ರಸ್ತೆ ನಿರ್ಮಾಣದ ಮಾಡಿರುವ ತಾಂತ್ರಿಕ ಪರಿಣಿತಿ ಹೊಂದಿರುವವರೊಂದಿಗೆ ಶೀಘ್ರವೇ ಬೆಟ್ಟಕ್ಕೆ ಆಗಮಿಸಿ ಅಂದಾಜು ಪಟ್ಟಿ ತಯಾರಿಸಲಾಗುವುದು ಎಂದು ತಿಳಿಸಿದರು.
ಉಚ್ಚೆಂಗೆಮ್ಮದೇವಿ ಬೆಟ್ಟ ಪುರಾತತ್ವ ಇಲಾಖೆ ಅಧೀನಕ್ಕೆ ಒಳಪಡುತ್ತಿರುವುದರಿಂದ ಅಭಿವೃದ್ಧಿ ಕಾಮಗಾರಿ ಮಾಡಲು ಆಕ್ಷೇಪಣೆ ಮಾಡುತ್ತಿದ್ದಾರೆ. ರಾಜ್ಯದ ಪುರಾತತ್ವ ಇಲಾಖೆ ಅಧಿಕಾರಿಗಳು ಸಮ್ಮತಿ ಸೂಚಿಸಿದ್ದಾರೆ. ಆದರೆ ಕೇಂದ್ರ ಇಲಾಖೆಯ ಅಧಿಕಾರಿಗಳ ಆಕ್ಷೇಪಣೆ ಇದೆ. ಹಾಗಾಗಿ ಅಗತ್ಯ ಬಿದ್ದರೆ ದೆಹಲಿಗೆ ತೆರಳಿ ಅಧಿಕಾರಿಗಳ ಆತಂಕ ನಿವಾರಣೆ ಮಾಡಲಾಗುವುದು. ದೇವಸ್ಥಾನ ಯಾತ್ರಿ ನಿವಾಸ, ವಾಹನ ಪಾರ್ಕಿಂಗ್, ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಇಲಾಖೆಯಿಂದ 4 ಕೋಟಿ ರೂ. ಅನುದಾನ ಮಂಜೂರಾಗಿದೆ. ಇದಕ್ಕೆ ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಯಾರು ಆಪರೇಷನ್ ಕಮಲ ಮಾಡಲು ಹೊರಟ್ಟಿದ್ದರೋ ಅವರೇ ಇಂದು ಆಪರೇಷನ್ ಆಗುತ್ತಿದ್ದಾರೆ. ಇದನ್ನು ಮಾಡಲು ಹೊರಟವರಿಗೆ ಮುಂದಿನ ದಿನಗಳಲ್ಲಿ ಗೊತ್ತಾಲಿದೆ ಎಂದು ತಿಳಿಸಿದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಎಂ.ಶಿವಕುಮಾರಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಮಂಜುನಾಥ, ಮುಖಂಡರಾದ ಶಶಿಧರ ಪೂಜಾರ್, ಯರಬಳ್ಳಿ ಉಮಾಪತಿ, ಲಕ್ಷ್ಮಿಪುರ ಗ್ರಾಪಂ ಅಧ್ಯಕ್ಷ ಪಿ.ಟಿ.ಭರತ್, ಪಿ.ಎಲ್.ಪೋಮ್ಯನಾಯ್ಕ, ಎಂ.ಟಿ.ಬಸವನಗೌಡ, ಕಾವಲಹಳ್ಳಿ ರವೀಂದ್ರನಾಥ, ಈರಣ್ಣ, ಚಂದ್ರನಾಯ್ಕ ಇಟ್ಟಿಗೆ, ಹಡಗಲಿ ಚಿದಾನಂದ, ಪರಮೇಶ್ವರಪ್ಪ, ಕೆ.ಕೆಂಚಪ್ಪ, ಟಿ.ಮಂಜಪ್ಪ, ಮಹಾಂತೇಶನಾಯ್ಕ, ಕರಡಿದುರ್ಗದ ಚೌಡಪ್ಪ, ರಮೇಶ್, ಸಿಪಿಐ ಡಿ.ದುರ್ಗಪ್ಪ, ಪಿಎಸ್‌ಐ ಸಿದ್ದೇಶ್, ಕಂದಾಯ ನಿರೀಕ್ಷಕ ಶ್ರೀಧರ್ ಇದ್ದರು.