ಭೋಪಾಲ್: ಧಾರ್ಮಿಕ ಕಾರ್ಯಕ್ರಮದ ವೇಳೆ ಗೋಡೆ ಕುಸಿದು ಕನಿಷ್ಠ 9 ಮಕ್ಕಳು ಮೃತಪಟ್ಟಿರುವ ದಾರುಣ ಘಟನೆ ಮಧ್ಯ ಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಭಾನುವಾರ(ಆ.4 ರಂದು) ನಡೆದಿದೆ.
ಶಾಪುರ್ ಗ್ರಾಮದ ಹರದಯಾಳ್ ದೇವಸ್ಥಾನದಲ್ಲಿ ಮಣ್ಣಿನಿಂದ ಶಿವಲಿಂಗವನ್ನು ತಯಾರಿಸುತ್ತಿದ್ದಾಗ ಈ ಘಟನೆ ನಡೆದಿದೆ. ಈ ಕಾರ್ಯಕ್ರಮದಲ್ಲಿ ಹತ್ತಾರು ಮಕ್ಕಳು ಪಾಲ್ಗೊಂಡಿದ್ದರು. ಭಾರೀ ಮಳೆಯಿಂದಾಗಿ ಪಾಳುಬಿದ್ದ ಗೋಡೆ ಕುಸಿದು ಬಿದ್ದು ಈ ದುರಂತ ಘಟನೆ ನಡೆದಿರುವುದು ವರದಿಯಾಗಿದೆ. ಈ ಗೋಡೆಯು 50 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗಿದೆ.
ಭಾನುವಾರ ಶಾಲೆಗಳಿಗೆ ರಜೆಯಿದ್ದ ಕಾರಣ ಈ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಮಕ್ಕಳು ಭಾಗಿಯಾಗಿದ್ದರು ಎನ್ನಲಾಗಿದೆ. ಘಟನೆಯಲ್ಲಿ ಇದುವರೆಗೆ 9 ಮಕ್ಕಳು ಮೃತಪಟ್ಟಿದ್ದು, ಅವಶೇಷಗಳಡಿ ಸಿಲುಕಿರುವ ಮಕ್ಕಳನ್ನು ಪತ್ತೆ ಮಾಡಲು ಬುಲ್ಡೋಜರ್ ಬಳಸಲಾಗಿದೆ.
“ದೇವಸ್ಥಾನದ ಆವರಣದಲ್ಲಿರುವ ಟೆಂಟ್‌ನಲ್ಲಿ ಮಕ್ಕಳು ಕುಳಿತಿದ್ದರು. ಅವರ ಮೇಲೆ ಗೋಡೆ ಬಿದ್ದಿದೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಗೋಡೆಯ ಅಡಿಪಾಯ ದುರ್ಬಲಗೊಂಡಿದೆ. ಘಟನೆ ಬೆಳಿಗ್ಗೆ 8:30 ಕ್ಕೆ ಸಂಭವಿಸಿದೆ. ಗೋಡೆಯ ಅವಶೇಷಗಳಡಿಯಲ್ಲಿ ಹೂತುಹೋದ ಒಂಬತ್ತು ಮಕ್ಕಳು ಸಾವನ್ನಪ್ಪಿದ್ದಾರೆ” ಎಂದು ಅಧಿಕಾರಿ ದೀಪಕ್ ಆರ್ಯ ಹೇಳಿದ್ದಾರೆ.
ಘಟನೆಯಲ್ಲಿ ಹಲವು ಮಕ್ಕಳು ಗಾಯಗೊಂಡಿದ್ದು, ನಾಲ್ವರು ಗಂಭೀರವಾಗಿದ್ದಾರೆ ಎಂದು ಹೇಳಲಾಗಿದೆ.
ಮಧ್ಯ ಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಘಟನೆ ಬಗ್ಗೆ ಸಂತಾಪ ಸೂಚಿಸಿ, ಮೃತ ಮಕ್ಕಳ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ, ಗಾಯಗೊಂಡವರಿಗೆ 1 ಲಕ್ಷ ರೂ. ನೆರವನ್ನು ಘೋಷಿಸಿದ್ದಾರೆ.